ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

268 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರ

Last Updated 4 ಜನವರಿ 2011, 9:15 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯ್ತಿಯ 29 ಹಾಗೂ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕು ಪಂಚಾಯ್ತಿಗಳ 49 ಕ್ಷೇತ್ರಗಳ ಮತ ಎಣಿಕೆ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 268 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಜಿ.ಪಂ.ನ 29 ಕ್ಷೇತ್ರಗಳಿಗೆ 107 ಹಾಗೂ ಮೂರು ತಾಲ್ಲೂಕು ಪಂಚಾಯ್ತಿಗಳ 49 ಕ್ಷೇತ್ರಗಳಿಗೆ 161 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ಪ್ರಥಮ ಬಾರಿಗೆ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಿರುವುದರಿಂದ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಂಭವವಿದೆ. ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್, ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಸೋಮವಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

ಜಿ.ಪಂ. ಅಧ್ಯಕ್ಷ ವಿ.ಎಂ. ವಿಜಯ, ಮಾಜಿ ಅಧ್ಯಕ್ಷರಾದ ಎಚ್.ಬಿ. ಜಯಮ್ಮ, ಕೆ.ಪಿ. ಚಂದ್ರಕಲಾ, ಪಾಪು ಸಣ್ಣಯ್ಯ, ಹಾಲಿ ಸದಸ್ಯರಾದ ಎಸ್.ಎನ್. ರಾಜಾರಾವ್, ವಿ.ಪಿ. ಶಶಿಧರ್,  ಲೋಕೇಶ್ವರಿ ಗೋಪಾಲ್, ಬಿ.ಸಿ. ನೀಲಮ್ಮ, ಮಾಜಿ ಸಚಿವ ಬಿ.ಎ. ಜೀವಿಜಯ ಪುತ್ರ ಸಂಜಯ್ ಜೀವಿಜಯ, ವಿರಾಜಪೇಟೆ ತಾ.ಪಂ. ಅಧ್ಯಕ್ಷೆ ಸರಿತಾ ಪೂಣಚ್ಚ, ವಿರಾಜಪೇಟೆ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ಹಾಲಿ ಸದಸ್ಯರಾಗಿದ್ದ ಚಂಬಾಂಡ ಕರುಣ್ ಕಾಳಯ್ಯ ಪತ್ನಿ ಆಶಾ ಕಾಳಯ್ಯ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಹಣೆಬರಹ ಮಂಗಳವಾರ ನಿರ್ಧಾರವಾಗಲಿದೆ.

ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿದ್ದರೆ, ಜೆಡಿಎಸ್ ಕೂಡ ಕೆಲವೆಡೆ ತೀವ್ರ ಸ್ಪರ್ಧೆಯೊಡ್ಡಿದೆ. ಮಾಜಿ ಶಾಸಕ ಬಿ.ಎ. ಜೀವಿಜಯನವರ ಪ್ರಾಬಲ್ಯವಿರುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಪ್ರಬಲವಾಗಿರುವುದರಿಂದ ಆ ಕ್ಷೇತ್ರದಲ್ಲಿ ಹಲವೆಡೆ ಬಿಜೆಪಿ- ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಕ್ಕಂದೂರು ಹಾಗೂ ಗುಡ್ಡೆಹೊಸೂರು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ.

ಇನ್ನು, ತಾಲ್ಲೂಕು ಪಂಚಾಯ್ತಿಗಳ ವಿಚಾರಕ್ಕೆ ಬಂದರೆ, ಫಲಿತಾಂಶದ ಬಗ್ಗೆ ಕಾರ್ಯಕರ್ತರಿಗೂ ಅಂತಹ ನಿರೀಕ್ಷೆ ಇಲ್ಲ. ತಾ.ಪಂ.ಗೆ ನೀಡುತ್ತಿರುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಸರ್ಕಾರ ಕಡಿತಗೊಳಿಸುತ್ತಿರುವುದರಿಂದ ಈ ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಲು ಅಭ್ಯರ್ಥಿಗಳ ಪೈಪೋಟಿ ಕೂಡ ಎದುರಾಗಲಿಲ್ಲ. ಹೀಗಾಗಿ, ಪ್ರಮುಖ ರಾಜಕೀಯ ಪಕ್ಷಗಳು ಕೂಡ ತಾಲ್ಲೂಕು ಪಂಚಾಯ್ತಿಯನ್ನು ಅಂತಹ ಪ್ರತಿಷ್ಠೆಯಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ.

ಮತ ಎಣಿಕೆಗೆ ಜಿಲ್ಲಾಡಳಿತ ಸಜ್ಜು: ಮತ ಎಣಿಕೆಗೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಮೂರು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆಗಾಗಿ ಸುಮಾರು 300 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ.

ಮಡಿಕೇರಿ ತಾಲ್ಲೂಕಿನ ಮತ ಎಣಿಕೆ ನಡೆಯಲಿರುವ ಸಂತ ಜೋಸೆಫರ ಕಾನ್ವೆಂಟ್‌ನಲ್ಲಿ ಏಳು ಜಿ.ಪಂ. ಹಾಗೂ 11 ತಾ.ಪಂ. ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಜಿ.ಪಂ. ಕ್ಷೇತ್ರಗಳ ಮತ ಎಣಿಕೆಗೆ ಒಂದು ಕ್ಷೇತ್ರಕ್ಕೆ ಮೂರು ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಒಂದು ಟೇಬಲ್‌ಗೆ ಒಬ್ಬ ಮತ ಎಣಿಕೆ ಸೂಪರ್‌ವೈಸರ್ ಹಾಗೂ ಸಹಾಯಕರನ್ನು ನಿಯೋಜಿಸಲಾಗಿದೆ. ಅಂತೆಯೇ, 11 ತಾ.ಪಂ. ಕ್ಷೇತ್ರಗಳ ಮತ ಎಣಿಕೆ 11 ಟೇಬಲ್‌ಗಳಲ್ಲಿ ನಡೆಯಲಿದೆ. ಒಂದು ಟೇಬಲ್‌ಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಇದೇ ರೀತಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕುಗಳಲ್ಲಿ ನಡೆಯಲಿರುವ ತಲಾ 11 ಜಿ.ಪಂ. ಕ್ಷೇತ್ರಗಳ ಮತ ಎಣಿಕೆಗೆ ಒಂದು ಕ್ಷೇತ್ರಕ್ಕೆ ಮೂರು ಟೇಬಲ್ ಹಾಗೂ ಇಬ್ಬರು ಸಿಬ್ಬಂದಿ, ತಾ.ಪಂ. ಕ್ಷೇತ್ರಗಳ ತಲಾ 19 ಕ್ಷೇತ್ರಗಳಿಗೆ ಒಂದು ಕ್ಷೇತ್ರಕ್ಕೆ ಒಂದು ಟೇಬಲ್ ಹಾಗೂ ಒಬ್ಬ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಜಿ.ಪಂ. ಹಾಗೂ ತಾ.ಪಂ. ಮತ ಎಣಿಕೆಗೆ ಶೇ 2 ಹಾಗೂ ತಾಲ್ಲೂಕು ಪಂಚಾಯ್ತಿ ಮತ ಎಣಿಕೆಗೆ ಶೇ 3ರಷ್ಟು ಸಿಬ್ಬಂದಿಯನ್ನು ಕಾದಿರಿಸಲಾಗಿದೆ. ಟ್ಯಾಬುಲೇಷನ್ ಹಾಗೂ ಸೀಲಿಂಗ್ ಕಾರ್ಯಕ್ಕಾಗಿ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ಮೀಸಲಿಡಲಾಗಿದೆ. ಮತ ಎಣಿಕೆ ನಡೆಯಲಿರುವ ಕೇಂದ್ರಗಳ ಸುತ್ತ ಯಾವುದೇ ಅಹಿತಕರ ಘಟನೆಯಾಗುವುದನ್ನು ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT