ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ದೇಶವ್ಯಾಪಿ `ಮಹಿಳಾ ಬಂದ್'ಗೆ ಕರೆ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಈ ತಿಂಗಳ 26ರಂದು ದೇಶವ್ಯಾಪಿ `ಮಹಿಳಾ ಬಂದ್' ಆಚರಿಸುವಂತೆ ದೆಹಲಿ ಮೂಲದ ನೂರ್ ಇನಾಯತ್ ಎಂಬುವವರು ತಮ್ಮ `ಫೇಸ್ ಬುಕ್' ಮೂಲಕ ಕರೆ ನೀಡಿದ್ದಾರೆ. ಅಂದು ಮಹಿಳೆಯರು ಯಾವ ಕೆಲಸವನ್ನೂ ಮಾಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ತಮ್ಮ `ಫೇಸ್ ಬುಕ್'ನ ಪ್ರಚಾರಾಂದೋಳನ ಪುಟದಲ್ಲಿ ಇನಾಯತ್, `ಭಾರತ್ ಬಂದ್, ಗುಜ್ಜರ್ ಬಂದ್, ಮಹಾರಾಷ್ಟ್ರ ಬಂದ್- ಇಂತಹ ಬಂದ್‌ಗಳನ್ನು ಅದೆಷ್ಟೋ ಸಲ ನಾವು ನೋಡಿದ್ದೇವೆ. ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಬಂದ್ ಆಚರಿಸುವುದು ನಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಡಿ. 26ರಂದು ಮಹಿಳೆಯರು ಯಾವ ಕೆಲಸವನ್ನೂ ಮಾಡಬಾರದು; ಮನೆ ಬಿಟ್ಟು ಹೊರ ಬರಬಾರದು, ಒಬ್ಬಂಟಿಯಾಗಿ ಎಲ್ಲಿಗೂ ಹೋಗಬಾರದು, ಮೈಕಾಣುವ ಉಡುಗೆ ತೊಡುಗೆಗಳನ್ನು ಧರಿಸಬಾರದು' ಎಂದು ಮನವಿ ಮಾಡಿದ್ದಾರೆ.

`ಈ ದೇಶದ ಸರ್ಕಾರ ನಮಗೆ ರಕ್ಷಣೆ ನೀಡುವಲ್ಲಿ ಮತ್ತೆ ವಿಫಲವಾಗಿದೆ. ಹೀಗಾಗಿ ನಮ್ಮ ರಕ್ಷಣೆಯ ಜವಾಬ್ದಾರಿಯನ್ನು ನಾವೇ ಕೈಗೆತ್ತಿಕೊಳ್ಳಬೇಕಾಗಿದೆ. ಮಹಿಳೆಯಾಗಿರುವ ಒಂದೇ ಕಾರಣಕ್ಕೆ ಅಸಂಖ್ಯ ಹೆಣ್ಣು ಮಕ್ಕಳು ಬಲಿಪಶುಗಳಾಗುವುದನ್ನು ತಪ್ಪಿಸಲು ಮಹಿಳೆಯರೆಲ್ಲರೂ ಒಗ್ಗೂಡಿ ಹೋರಾಡುವ ಪಣ ತೊಡಬೇಕಿದೆ' ಎಂದು ಅವರು ಹೇಳಿದ್ದಾರೆ.

`ಒಂದು ದಿನದ ಮಟ್ಟಿಗೆ ಅಂದು ಮಹಿಳೆಯರು ಯಾವ ಕೆಲಸವನ್ನೂ ಮಾಡುವುದು ಬೇಡ. ಅಂತಹ ಪರಿಸ್ಥಿತಿಯನ್ನು ಸಮಾಜ ಹೇಗೆ ನಿಭಾಯಿಸುತ್ತದೆಯೋ ನೋಡೋಣ.

ಕೆಲಸ ಮಾಡಬಾರದೆಂದರೆ ಮಹಿಳೆಯರು ಕಚೇರಿಗೆ ಹೋಗಬಾರದು, ಗೃಹ ಕೃತ್ಯಗಳನ್ನೂ ಮಾಡಬಾರದು, ಇತ್ಯಾದಿ ಇತ್ಯಾದಿ... ಶಾಪಿಂಗ್‌ಗೂ ಹೋಗಬಾರದು. ಭಾರತ್ ಬಂದ್ ಅಲ್ಲ; ಆದರೆ ಮಹಿಳಾ ಬಂದ್' ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
`ಭಾರತದ ಕಾರ್ಪೊರೇಟ್ ಕ್ಷೇತ್ರದಲ್ಲಿ ದುಡಿಯುವ ಮಾನವ ಶಕ್ತಿಯಲ್ಲಿ ಶೇಕಡಾ 45ರಷ್ಟು ಮಹಿಳೆಯರಿದ್ದಾರೆ. ಅಷ್ಟು ಮಂದಿ ಕೆಲಸ ಸ್ಥಗಿತಗೊಳಿಸಿದರೆ ಹೇಗಿರುತ್ತೆ ಕಲ್ಪಿಸಿಕೊಳ್ಳಿ' ಎಂದು ಹೇಳಿರುವ ಅವರು, `ಒಂದು ಸೊಳ್ಳೆ ನಮ್ಮ ರಕ್ತ ಹೀರಿದರೆ ಅದನ್ನು ನಾವು ಬಿಡುವುದಿಲ್ಲ; ಇನ್ನು ನಮ್ಮ ಮೇಲೆ ದೌರ್ಜನ್ಯ ಎಸಗುವ ಪುರುಷರನ್ನೇಕೆ ಬಿಡಬೇಕು' ಎಂದು ಪ್ರಶ್ನಿಸಿದ್ದಾರೆ.

ಇನಾಯತ್ ಅವರ ಪ್ರಚಾರಾಂದೋಳನದಲ್ಲಿ ಸೇರಬಯಸುವವರು ಸಂಪರ್ಕಿಸಬೇಕಾದ ವೆಬ್ ತಾಣ; http://tinyurl.com/ckevhig

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT