ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಿಂದ ಲಾಟರಿ ಮೂಲಕ ಫ್ಲಾಟ್‌ಗಳ ಹಂಚಿಕೆ

ಮೂರು ಸಾವಿರ ಬಿಡಿಎ ಫ್ಲಾಟ್‌ಗಳು ಹಂಚಿಕೆಗೆ ಸಿದ್ಧ
Last Updated 21 ಡಿಸೆಂಬರ್ 2013, 19:58 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರದ ಎಂಟು ಕಡೆಗಳಲ್ಲಿ ನಿರ್ಮಿಸುತ್ತಿರುವ 6,180 ಫ್ಲಾಟ್‌ಗಳ ಪೈಕಿ ಮೂರು ಸಾವಿರ ಫ್ಲಾಟ್‌ಗಳ  ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಫ್ಲಾಟ್‌ಗಳನ್ನು ಹಂಚಲು ಬಿಡಿಎ ಮುಂದಾಗಿದೆ. ಡಿ.26ರಂದು ಬಿಡಿಎ ಆವರಣದಲ್ಲಿ ಲಾಟರಿ ಎತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಚಿಕೆಗೆ ಚಾಲನೆ ನೀಡಲಿದ್ದಾರೆ.

ನಗರದ ವಲಗೇರಹಳ್ಳಿ, ಹಲಗೆವಡೇರಹಳ್ಳಿ, ಮಾಲಗಾಲ, ಗುಂಜೂರು, ಆಲೂರು, ಕೊತ್ತನೂರು, ತಿಪ್ಪಸಂದ್ರ ಹಾಗೂ ದೊಡ್ಡಬನಹಳ್ಳಿಗಳಲ್ಲಿ ಒಂದು ಕೊಠಡಿಯ 4,388, ಎರಡು ಕೊಠಡಿಯ 1,136 ಮತ್ತು ಮೂರು ಕೊಠಡಿಯ 656 ಫ್ಲಾಟ್‌ಗಳು ಸೇರಿ, ಒಟ್ಟು 6,180 ಫ್ಲಾಟ್‌ಗಳನ್ನು ನಿರ್ಮಿಸಲು ಬಿಡಿಎ ಮಾರ್ಚ್‌ ತಿಂಗಳಲ್ಲಿ ಅರ್ಜಿಗಳನ್ನು ಕರೆದಿತ್ತು. ಆರ್ಥಿಕವಾಗಿ ಹಿಂದುಳಿದವರಿಗಾಗಿ ಫ್ಲಾಟ್‌ಗಳನ್ನು ನಿರ್ಮಿಸುವುದು ಯೋಜನೆಯ ಉದ್ದೇಶವಾಗಿತ್ತು.

‘ಒಂದು, ಎರಡು ಹಾಗೂ ಮೂರು ಕೊಠಡಿಯ ಫ್ಲಾಟ್‌ಗಳ ಪೈಕಿ ಸುಮಾರು ಮೂರು ಸಾವಿರ ಫ್ಲಾಟ್‌ಗಳು ಹಂಚಿಕೆಗೆ ಸಿದ್ಧವಾಗಿವೆ. ವಲಗೇರಹಳ್ಳಿಯಲ್ಲಿ 600, ಹಲಗೆವಡೇರಹಳ್ಳಿಯಲ್ಲಿ 192 ಹಾಗೂ ಆಲೂರಿನಲ್ಲಿ 250 ಒಂದು ಕೊಠಡಿಯ ಫ್ಲಾಟ್‌ಗಳ ನಿರ್ಮಾಣ ಕಾರ್ಯ ಪೂರ್ಣವಾಗಿದೆ. ಉಳಿದಂತೆ ಎರಡು ಹಾಗೂ ಮೂರು ಕೊಠಡಿಯ ಉದ್ದೇಶಿತ ಫ್ಲಾಟ್‌ಗಳ ಪೈಕಿ ಶೇ 50ರಷ್ಟು ಫ್ಲಾಟ್‌ಗಳು ಹಂಚಿಕೆಗೆ ಸಿದ್ಧಗೊಂಡಿವೆ’ ಎಂದು ಬಿಡಿಎ ಆಯುಕ್ತ ಟಿ.ಶ್ಯಾಮ್‌ಭಟ್‌ ತಿಳಿಸಿದರು.

‘ಅಕ್ಟೋಬರ್‌ ಹೊತ್ತಿಗೆ ಮೂರು ಸಾವಿರ ಫ್ಲಾಟ್‌ಗಳ ನಿರ್ಮಾಣ ಗುರಿಹೊಂದಲಾಗಿತ್ತು. ಆದರೆ, ವಲಗೇರಹಳ್ಳಿ ಸೇರಿದಂತೆ ಕೆಲವು ಕಡೆ ಜಮೀನು ವಿವಾದ ಎದುರಾದ ಕಾರಣ ಹಂಚಿಕೆ ವಿಳಂಬವಾಗಿದೆ. ಉಳಿದ ಫ್ಲಾಟ್‌ಗಳು 2014ರ ಮಾರ್ಚ್‌ ವೇಳೆಗೆ ಹಂಚಿಕೆಗೆ ಸಿದ್ಧವಾಗಲಿವೆ’ ಎಂದು ಅವರು ವಿವರಿಸಿದರು.

‘ಫ್ಲಾಟ್‌ಗಳನ್ನು ಸಾಮಾನ್ಯ, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರು, ಅಂಗವಿಕಲರು, ರಾಜ್ಯ ಸರ್ಕಾರಿ ನೌಕರರು, ಕೇಂದ್ರ ಸರ್ಕಾರಿ ನೌಕರರ ವರ್ಗಗಳ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು. ಫ್ಲಾಟ್‌ಗಳ ಸಂಖ್ಯೆ ಹಾಗೂ ಒಟ್ಟು ಅರ್ಜಿಗಳ ಅನುಪಾತದ ಮೇಲೆ ಲಾಟರಿ ಚೀಟಿಗಳನ್ನು ಇಡಲಾಗುವುದು.

ಸಾರ್ವಜನಿಕರ ಸಮ್ಮುಖದಲ್ಲೇ ಲಾಟರಿ ಎತ್ತಲಾಗುವುದು. ಲಾಟರಿ ಮೂಲಕ ಬಂದ ಹೆಸರಿನ ಅರ್ಜಿದಾರರಿಗೆ ಫ್ಲಾಟ್‌ ಹಂಚಿಕೆ ಮಾಡಲಾಗುವುದು. ಲಾಟರಿ ಮೂಲಕ ಆಯ್ಕೆಯಾಗದ ಅರ್ಜಿದಾರರನ್ನು ಜೇಷ್ಠತೆಯ ಪಟ್ಟಿಗೆ ಸೇರಿಸಿ, ಮುಂದಿನ ಬಾರಿ ಫ್ಲಾಟ್‌ ಹಂಚಿಕೆ ವೇಳೆ ಅವರಿಗೆ ಆದ್ಯತೆ ನೀಡಲಾಗುವುದು’ ಎಂದು ಅವರು ಹೇಳಿದರು.

‘ಆಧುನಿಕ ತಂತ್ರಜ್ಞಾನದ ನೆರವಿನಿಂದ ಫ್ಲಾಟ್‌ಗಳನ್ನು ನಿರ್ಮಿಸುತ್ತಿರುವುದರಿಂದ ಫ್ಲಾಟ್‌ಗಳನ್ನು ಆದಷ್ಟು ಬೇಗ ನಿರ್ಮಿಸಲಾಗುವುದು. ಎಲ್ಲಾ ವಸತಿ ಸಮುಚ್ಚಯಗಳಿಗೂ ಕುಡಿಯುವ ನೀರು, ಒಳಚರಂಡಿ, ರಸ್ತೆ ಸೇರಿದಂತೆ ಉತ್ತಮ ಮೂಲಸೌಕರ್ಯ ಒದಗಿಸಲಾಗುವುದು. ವಸತಿ ಸಮುಚ್ಚಯಗಳ ಒಳಭಾಗದ ರಸ್ತೆಗಳ ಬದಿಯಲ್ಲಿ ಮೂರು ಸಾವಿರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಮೊದಲ ಬಾರಿಗೆ ಲಾಟರಿ ವ್ಯವಸ್ಥೆ
ಇದೇ ಮೊದಲ ಬಾರಿಗೆ ಲಾಟರಿ ಎತ್ತುವ ಮೂಲಕ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ. ಲಾಟರಿ ಮೂಲಕ  ಫ್ಲಾಟ್‌ಗಳ ಹಂಚಿಕೆ ಮಾಡಿದರೆ ಜೇಷ್ಠತೆಯ ಆಧಾರದ ಮೇಲೆ ಹಂಚಿಕೆ ಮಾಡಬೇಕೆನ್ನುವ ನಿಯಮವನ್ನೇ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಮರುಪರಿಶೀಲಿಸಬೇಕು ಎಂಬುದು ಕೆಲ ಅರ್ಜಿದಾರರ ಒತ್ತಾಯ.

ಎಸ್‌ಸಿ, ಎಸ್‌ಟಿಗೆ ಶೇ 25ರಷ್ಟು ರಿಯಾಯಿತಿ
ಎಸ್‌ಸಿ, ಎಸ್‌ಟಿ ಅರ್ಜಿದಾರರಿಗೆ ಫ್ಲಾಟ್‌ಗಳ ಮೂಲ ಬೆಲೆಯಲ್ಲಿ ಶೇ 25ರಷ್ಟು ಕಡಿತ ಮಾಡಲು ಬಿಡಿಎ ಉದ್ದೇಶಿಸಿದೆ. ಒಂದು ಕೊಠಡಿಯ ಫ್ಲಾಟ್‌ಗಳಿಗೆ ₨ 8.20 ಲಕ್ಷ ದರವಿದೆ. ದರ ಕಡಿತದಿಂದ ಎಸ್‌ಸಿ, ಎಸ್‌ಟಿ ಅರ್ಜಿದಾರರಿಗೆ ₨ 6.5 ಲಕ್ಷಕ್ಕೆ ಫ್ಲಾಟ್‌ ಸಿಗಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಅರ್ಜಿದಾರರಿಗೆ ₨ 7.20 ಲಕ್ಷಕ್ಕೆ ಫ್ಲಾಟ್‌ ನೀಡಲು ಬಿಡಿಎ ಉದ್ದೇಶಿಸಿದೆ.

ಜನವರಿ ಅಂತ್ಯದೊಳಗೆ ಮತ್ತೆ ಅರ್ಜಿ
ಈ ಹಂಚಿಕೆ ಪ್ರಕ್ರಿಯೆ ಮುಗಿದ ಕೆಲ ದಿನಗಳಲ್ಲೇ ಹೊಸದಾಗಿ ಫ್ಲಾಟ್‌ಗಳಿಗೆ ಅರ್ಜಿ ಕರೆಯಲಾಗುವುದು. ಜನವರಿ ಅಂತ್ಯದೊಳಗೆ ಅರ್ಜಿ ಕರೆಯುವ ಸಾಧ್ಯತೆ ಇದೆ. ಉದ್ದೇಶಿತ ಫ್ಲಾಟ್‌ಗಳ ನಿರ್ಮಾಣದ ಜತೆಗೆ ಹೊಸದಾಗಿ ಆರು ಸಾವಿರ ಫ್ಲಾಟ್‌ಗಳನ್ನು ನಿರ್ಮಿಸುವ ಚಿಂತನೆ ಇದೆ.
–ಟಿ.ಶ್ಯಾಮ್‌ಭಟ್‌,
ಆಯುಕ್ತರು, ಬಿಡಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT