27ರಿಂದ ಸಿದ್ದೇಶ್ವರಸ್ವಾಮಿ ಪ್ರತಿಷ್ಠಾಪನೆ

7

27ರಿಂದ ಸಿದ್ದೇಶ್ವರಸ್ವಾಮಿ ಪ್ರತಿಷ್ಠಾಪನೆ

Published:
Updated:

ಶಿವಮೊಗ್ಗ: ತಾಲ್ಲೂಕಿನ ಆಯನೂರಿನಲ್ಲಿ ಸಿದ್ದೇಶ್ವರಸ್ವಾಮಿ ಹಾಗೂ ಪರಿವಾರ ದೇವರುಗಳ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಸಮಾರಂಭ ಫೆ. 27ರಿಂದ ಮಾರ್ಚ್ 5ರವರೆಗೆ 8 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.ಈ ಸಮಾರಂಭದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿವಿಧ ಸ್ವಾಮೀಜಿಗಳು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಿನಿಮಾ ನಟ-ನಟಿಯರು, ಸಂಗೀತಗಾರರು, ಕಲಾವಿದರು ಪಾಲ್ಗೊಳ್ಳುವರು ಎಂದು ರಾಜ್ಯಸಭಾ ಸದಸ್ಯ ಹಾಗೂ ಧರ್ಮಶ್ರೀ ಸೇವಾ ಟ್ರಸ್ಟ್‌ನ ಗೌರವ ಅಧ್ಯಕ್ಷ ಆಯನೂರು ಮಂಜುನಾಥ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಆಯನೂರಿನಲ್ಲಿ ಸಿದ್ದೇಶ್ವರರನ್ನು ನಾಥಪಂಥದ ಮಚ್ಚೇಂದ್ರನಾಥ ಪ್ರತಿಷ್ಠಾಪಿಸಿದರೆಂಬ ಮಾಹಿತಿ ಇದ್ದು, ಆನಂತರ ಗೋರಕ್‌ನಾಥಸ್ವಾಮಿ ಕ್ರಿ.ಶ. 986ರಲ್ಲಿ ಇಲ್ಲಿ ಭವ್ಯ ಮಂದಿರ ನಿರ್ಮಿಸಿದರು ಎಂದು ಇತಿಹಾಸ ತಿಳಿಸುತ್ತದೆ. ಕಾಲಕ್ರಮೇಣ ದೇವಾಲಯ ಶಿಥಿಲಗೊಂಡು, ಮೂರ‌್ನಾಲ್ಕು ಬಾರಿ ಜೀರ್ಣೋದ್ಧಾರ ನಡೆದ್ದಿತ್ತು. ಇತ್ತೀಚೆಗೆ ಮತ್ತೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ಧರ್ಮಶ್ರೀ ಸೇವಾ ಟ್ರಸ್ಟ್ ಮುಂದಾಗಿದೆ ಎಂದು ಅವರು ವಿವರಿಸಿದರು.ಮಾರ್ಚ್ 1ರಂದು ಬೆಳಿಗ್ಗೆ 11ಕ್ಕೆ ಪರಿವಾರ ದೇವತಾ ಪ್ರತಿಷ್ಠಾಪನೆ ನಡೆಯಲಿದ್ದು, 4ರಂದು ಬೆಳಿಗ್ಗೆ 11.30ಕ್ಕೆ ಸಿದ್ದೇಶ್ವರ ಸ್ವಾಮಿಯ ಪ್ರತಿಷ್ಠಾಪಿಸಲಾಗುವುದು ಎಂದು ಹೇಳಿದರು.ಹರಿಹರದ 2008 ಸಿದ್ದಲಿಂಗೇಶ್ವರ ಸ್ವಾಮೀಜಿ, ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಬಾಳೆಹೊನ್ನೂರಿನ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಂಗಾರುಮಕ್ಕಿ ಮಾರುತಿ ಗುರೂಜಿ, ವಾಲುಕೇಶ್ವರ ಭಾರತಿ ಸ್ವಾಮೀಜಿ ಸೇರಿದಂತೆ 17ಕ್ಕೂ ಹೆಚ್ಚು ಸ್ವಾಮೀಜಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದರು.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಚಿವರು, ನಟರಾದ ಶ್ರೀನಾಥ್, `ಮುಖ್ಯಮಂತ್ರಿ~ ಚಂದ್ರು, ದೊಡ್ಡಣ್ಣ, ಸುದೀಪ್, ದರ್ಶನ್, ಚಿರಂಜೀವಿ ಸರೋವರ್, ನಟಿರಾದ ತಾರಾ, ಶೃತಿ ಮತ್ತಿತರರು ಭಾಗವಹಿಸುವರು ಎಂದರು. ಪ್ರತಿ ಸಂಜೆ ಹಿಂದೂಸ್ತಾನಿ ಗಾಯನ, ಹರಿಕಥೆ, ಸುಗಮ ಸಂಗೀತ, ಜಾನಪದ ಗೀತೆ ಗಾಯನ, ನೃತ್ಯ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಕಲಾವಿದರಾದ ಹಂಸಲೇಖ, ಹೊ.ನ. ಸತ್ಯ, ಶಂಕರ್ ಶಾನ್‌ಭಾಗ್, ಡಾ.ವಿದ್ಯಾಭೂಷಣ, ರಾಮಣ್ಣ ಭಜಂತ್ರಿ, ಅಪ್ಪುಗೆರೆ ತಿಮ್ಮರಾಜು, ಕೆ. ಯುವರಾಜ್ ಕಾರ್ಯಕ್ರಮ ನೀಡಲಿದ್ದಾರೆ ಎಂದು ವಿವರಿಸಿದರು.ಈ ದೇವಸ್ಥಾನದ ಮೂಲ ಮಾಲಿಕತ್ವ ಮುಜರಾಯಿ ಇಲಾಖೆಯದ್ದು, ಇದರ ನಿರ್ವಹಣೆ ಮತ್ತು ಪರಿವಾರ ದೇವರುಗಳ ಮಾಲಿಕತ್ವ ಟ್ರಸ್ಟ್‌ಗೆ ಸೇರುತ್ತದೆ. ಈ ಕುರಿತ ಎಲ್ಲ ಪ್ರಕ್ರಿಯೆಗಳನ್ನು ಕಾನೂನಿನ ಅಡಿಯಲ್ಲೇ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಧರ್ಮಶ್ರೀ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಮಂಜುಳಾ ಮಂಜುನಾಥ, ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಕುಮಾರಸ್ವಾಮಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಎನ್.ಜೆ. ರಾಜಶೇಖರ್, ಎಚ್.ಸಿ. ಬವಸರಾಜಪ್ಪ, ಎಂ.ಎಸ್. ಮಹೇಂದ್ರನಾಥ್, ರೇಣುಕಮ್ಮ ರುದ್ರಪ್ಪ, ದೇವಿಬಾಯಿ ಧರ್ಮನಾಯ್ಕ, ಷಣ್ಮುಖಪ್ಪ, ಬಿ.ವಿ. ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry