ಬುಧವಾರ, ನವೆಂಬರ್ 13, 2019
28 °C

27 ಮಂದಿ ನಾಮಪತ್ರ ವಾಪಸ್

Published:
Updated:

ಹಾಸನ: `ವಿಧಾನಸಭಾ ಚುನಾವಣೆಯ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಶನಿವಾರ ಒಟ್ಟು 27 ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದು, ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಅಂತಿಮವಾಗಿ 81 ಮಂದಿ ಕಣದಲ್ಲಿ ಉಳಿದಿದ್ದಾರೆ' ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.ಚುನಾವಣೆಗಾಗಿ ಒಟ್ಟಾರೆ 116 ಅಭ್ಯರ್ಥಿಗಳು 171 ನಾಮಪತ್ರ ಸಲ್ಲಿಸಿದ್ದರು. ಅವುಗಳಲ್ಲಿ 15 ತಿರಸ್ಕೃತಗೊಂಡಿದ್ದವು.

ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು ಹಾಗೂ ಸಕಲೇಶಪುರ ಕ್ಷೇತ್ರಗಳಲ್ಲಿ ತಲಾ 11 ಅಭ್ಯರ್ಥಿಗಳು ಉಳಿದುಕೊಂಡಿದ್ದರೆ, ಹಾಸನದಲ್ಲಿ 14, ಹೊಳೆನರಸೀಪುರ 10 ಹಾಗೂ ಅರಕಲಗೂಡು ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆ ನಿರ್ಧರಿಸುವ ಕಾರ್ಯ ಶೀಘ್ರದಲ್ಲೇ ನಡೆಯುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಪಟ್ಟಿ ಸಿದ್ಧ: ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆಗಾಗಿ ಹಾಸನ ಜಿಲ್ಲೆಯಲ್ಲಿ ಒಟ್ಟಾರೆ 68,721 ಅರ್ಜಿಗಳು ಬಂದಿದ್ದವು.  ಅವುಗಳಲ್ಲಿ 10,107 ಅರ್ಜಿಗಳನ್ನು ತಿರಸ್ಕರಿಸಲಾಗಿವೆ. ಒಟ್ಟಾರೆ ಈ ಬಾರಿ 58,614 ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದು, ಅಂತಿಮ ಪಟ್ಟಿ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಪಟ್ಟಿ ಮುದ್ರಣವಾಗುತ್ತಿದ್ದು, ಭಾನುವಾರ ಸಂಜೆಯೊಳಗೆ ನಮ್ಮ ಕೈಸೇರುವ ನಿರೀಕ್ಷೆ ಇದೆ. ಬಂದ ಕೂಡಲೇ ಅದರ ಪ್ರತಿಗಳನ್ನು ಅಭ್ಯರ್ಥಿಗಳಿಗೂ ನೀಡಲಾಗುವುದು ಎಂದರು.`ಹೊಸ ಸೇರ್ಪಡೆಯಿಂದಾಗಿ ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 13,21,784ಕ್ಕೆ ಏರಿದಂತಾಗಿದೆ.`ಜಿಲ್ಲೆಯಲ್ಲಿ ಒಟ್ಟು 1882 ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಹೆಚ್ಚು ಮತದಾರರಿರುವ ಕಡೆಗಳಲ್ಲಿ ಒಟ್ಟು 9 ಹೆಚ್ಚುವರಿ ಮತಗಟ್ಟೆಗಳನ್ನು ತೆರೆಯಲು ಆಯೋಗ ಅನುಮತಿ ನೀಡಿದ್ದು ಈಗ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ 1891 ಆಗಿದೆ.ಈ ಮತಗಟ್ಟೆಗಳಲ್ಲಿ ಒಟ್ಟು 10,350 ಸಿಬ್ಬಂದಿ ಚುನಾವಣಾ ಕೆಲಸ ಮಾಡಲಿದ್ದಾರೆ. ಈಗ ನೇರ ಪ್ರಚಾರ ಕಾರ್ಯ ಆರಂಭವಾಗಿದ್ದು, ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಆದರೆ ಬೀಗರ ಊಟ, ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದು. ಅಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಆ ಬಗ್ಗೆ ನಮ್ಮ ವೀಕ್ಷಕರು ಕಣ್ಣಿಟ್ಟಿರುತ್ತಾರೆ.

`ಜಿಲ್ಲೆಯ ಮತಗಟ್ಟೆ ಅಧಿಕಾರಿಗಳಿಗೆ 24 ಹಾಗೂ 27 ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗುವುದು' ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲೆಯಲ್ಲಿ ಬೇಕಾದಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. 20ಕ್ಕೂ ಹೆಚ್ಚು ಕಡೆಗಳಲ್ಲಿ ಹಟಾತ್ತನೆ ತಪಾಸಣೆ ನಡೆಸುವಂಥ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ        ಅರೆ ಸೇನಾ ಪಡೆಯವರು ಫ್ಲಾಗ್ ಮಾರ್ಚ್    ಮಾಡಿದ್ದಾರೆ. ಮೇ 5ರಂದು ಮತದಾರರು ನಿರ್ಭಯವಾಗಿ ಬಂದು ಮತ ಚಲಾಯಿಸಬಹುದು' ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದರು.

34 ದೂರು ದಾಖಲು

ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟಾರೆ 34 ದೂರುಗಳನ್ನು ದಾಖಲಿಸಲಾಗಿದೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ 8, ಅರಸೀಕೆರೆ 2, ಬೇಲೂರು 4, ಹಾಸನ 1, ಹೊಳೆನರಸೀಪುರ 2, ಅರಕಲಗೂಡು 6 ಹಾಗೂ ಸಕಲೇಶಪುರದಲ್ಲಿ ಗರಿಷ್ಠ 11 ದೂರುಗಳನ್ನು ದಾಖಲಿಸಲಾಗಿದೆ.ಇವುಗಳಲ್ಲಿ 9 ದೂರುಗಳು ಮದ್ಯ ವಿತರಣ/ಅಕ್ರಮವಾಗಿ ಮದ್ಯ ಸಾಗಾಟದ್ದಾಗಿದ್ದರೆ,  ಮತದಾರರಿಗೆ ಸೀರೆ, ಹಣ ಹಂಚಿರುವ ಬಗ್ಗೆ 3 ದೂರುಗಳು ದಾಖಲಾಗಿವೆ. ವಾಹನಗಳ ದುರ್ಬಳಕೆಯ 14 ದೂರುಗಳು ಇದರಲ್ಲಿ ಸೇರಿವೆ ಎಂದು ಅಮಿತ್ ಸಿಂಗ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಹಾಗೂ ಇತರ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)