27 ವರ್ಷದ ಸೆರೆವಾಸದಿಂದ ಮುಕ್ತಿ

7

27 ವರ್ಷದ ಸೆರೆವಾಸದಿಂದ ಮುಕ್ತಿ

Published:
Updated:
27 ವರ್ಷದ ಸೆರೆವಾಸದಿಂದ ಮುಕ್ತಿ

ಲಾಹೋರ್ (ಪಿಟಿಐ):  ಗೂಢಚಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿತನಾಗಿ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಪ್ರಜೆ ಗೋಪಾಲ್ ದಾಸ್ ಅವರನ್ನು ಅಲ್ಲಿನ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದರು.ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಲ್ಲಿದ್ದ ಗೋಪಾಲ್ ದಾಸ್ ಅವರನ್ನು ಬಿಡುಗಡೆಗೊಳಿಸಿ ವಾಘಾ ಗಡಿಯಲ್ಲಿನ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಾಯಿತು.ದಾಸ್ ಕೋಳ ತೊಡಿಸಿದ್ದ  ಕೈಗಳಲ್ಲಿ ಚೀಲವನ್ನು ಹಿಡಿದುಕೊಂಡು ಗಡಿ ಭಾಗಕ್ಕೆ ನಡೆದು ಬಂದರು. ಗಡಿ ದಾಟುವ ಮುನ್ನ ಅವರ ಕೋಳವನ್ನು ತೆಗೆದುಹಾಕಲಾಯಿತು.ಪಾಕಿಸ್ತಾನದಲ್ಲಿ ಗೂಢಚಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ 1984ರಲ್ಲಿ ದಾಸ್ ಅವರನ್ನು ಬಂಧಿಸಿ, ವಿಚಾರಣೆ ಬಳಿಕ 1987ರಲ್ಲಿ ಜೀವಾವಧಿ ಶಿಕ್ಷೆಗೆ ಒಳಪಡಿಸಲಾಗಿತ್ತು. ಅವರ ಶಿಕ್ಷೆ ಅವಧಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುತ್ತಿತ್ತು. ಮಾನವೀಯತೆಯ ಆಧಾರದಲ್ಲಿ ದಾಸ್ ಅವರ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆ ಮಾಡುವಂತೆ ಭಾರತೀಯ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ನ್ಯಾಯಪೀಠ ಪಾಕಿಸ್ತಾನಕ್ಕೆ ಕಳೆದ ತಿಂಗಳು ಮನವಿ ಮಾಡಿತ್ತು.ಭಾರತ ಮತ್ತು ಪಾಕಿಸ್ತಾನಗಳ ನಡುವಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ವೀಕ್ಷಿಸಲು ಬರುವ ಮುನ್ನ ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ದಾಸ್ ಅವರನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಮಾರ್ಚ್ 27ರಂದು ಪಾಕ್ ಅಧ್ಯಕ್ಷ ಜರ್ದಾರಿ ಅವರು ದಾಸ್ ಬಿಡುಗಡೆಯನ್ನು ಪ್ರಕಟಿಸಿದ್ದರು.ಸರ್ಕಾರದ ವಿರುದ್ಧ ದಾಸ್ ಆಕ್ರೋಶ

ಅಟ್ಟಾರಿ/ಪಂಜಾಬ್ (ಐಎಎನ್‌ಎಸ್): ಪಾಕ್‌ನಲ್ಲಿ 27 ವರ್ಷಗಳ ಕಾಲ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ತಾಯ್ನಾಡಿಗೆ ಮರಳಿರುವ ಗೋಪಾಲ್ ದಾಸ್ ತನ್ನ ಬಿಡುಗಡೆಯ ಬಗ್ಗೆ ಸಂತಸಗೊಂಡಿದ್ದರೂ ಅವರ ಮಾತುಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಅಮೃತಸರದಿಂದ 30 ಕಿ.ಮೀ ದೂರದಲ್ಲಿನ ಗಡಿ ಭಾಗದಲ್ಲಿ ತನಗಾಗಿ ಕಾಯುತ್ತಿದ್ದ ಕುಟುಂಬದ ಸದಸ್ಯರನ್ನು 27 ವರ್ಷಗಳ ಬಳಿಕ ಕೂಡಿಕೊಂಡ 50 ವರ್ಷದ ಅವಿವಾಹಿತ ದಾಸ್, ಪಾಕ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತೀಯರ ಹಿತಾಸಕ್ತಿಯ ಬಗ್ಗೆ ನಿರ್ಲಕ್ಯ ಧೋರಣೆ ತಾಳಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯರಿಗಾಗಿ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿರುವ ತಮ್ಮ ಸಂಬಂಧಿಯನ್ನು ಭೇಟಿ ಮಾಡಲು ತೆರಳಿದ್ದ ದಾಸ್ ತಮಗೆ ಅರಿವಿಲ್ಲದೆಯೇ ಪಾಕ್ ಗಡಿ ಪ್ರವೇಶಿಸಿದ್ದರು.  ಆದರೆ ಬೇಹುಗಾರಿಕೆ ಆರೋಪದಲ್ಲಿ ಅಮಾಯಕ ದಾಸ್ ಅವರನ್ನು ಬಂಧಿಸಲಾಗಿದೆ ಎಂದು ಅವರ ಕುಟುಂಬ ಹೇಳಿತ್ತು. ಘಟನೆ ಬಳಿಕ ಕುಟುಂಬವು ಪಂಜಾಬ್‌ನ ಗಡಿ ಜಿಲ್ಲೆ ಗುರುದಾಸ್‌ಪುರದಿಂದ ಚಂಡೀಗಡಕ್ಕೆ ಸ್ಥಳಾಂತರ ಹೊಂದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry