ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`27 ಸಾವಿರ ಅಂಗನವಾಡಿ ಮಕ್ಕಳಿಗೆ ಹಾಲು'

Last Updated 2 ಆಗಸ್ಟ್ 2013, 10:41 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಬಳಿಯಿರುವ ಸ್ತ್ರೀ ಶಕ್ತಿ ಭವನದ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಕ್ಕಳಿಗೆ ಹಾಲು ನೀಡುವ ಮೂಲಕ `ಕ್ಷೀರ ಭಾಗ್ಯ' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಂಜನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 27 ಸಾವಿರ ಅಂಗನವಾಡಿ ಮಕ್ಕಳಿಗೆ ಈ ಸೌಲಭ್ಯ ದೊರೆಯಲಿದೆ ಎಂದರು. ಸೂಕ್ತ ರೀತಿಯಲ್ಲಿ ನಿಭಾಯಿಸುವಂತೆ ಇಲಾಖೆಯ ಸಿಬ್ಬಂದಿಗೆ ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ಎಳೆಯ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಮಧ್ಯಾಹ್ನ ಬಿಸಿಯೂಟ ಯೋಜನೆಯ ಜೊತೆಗೆ ಇದೀಗ ಹಾಲನ್ನು ಸಹ ನೀಡುತ್ತಿದೆ. ಮಕ್ಕಳು ಆರೋಗ್ಯಪೂರ್ಣವಾಗಿ ದೃಢಕಾಯರಾಗಿ ಬೆಳೆಯಲು ಪ್ರೊಟೀನ್ ಮತ್ತು ಕೊಬ್ಬಿನಂಶಗಳನ್ನೊಳಗೊಂಡ ಸಮತೋಲನ ಆಹಾರ ನೀಡುವುದು ಇದರ ಉದ್ದೇಶ. ಇಂತಹ ಯೋಜನೆಗಳು ಸಮರ್ಪಕವಾಗಿ ಅರ್ಹರಿಗೆ ತಲುಪಬೇಕು ಎಂದು ಹೇಳಿದರು.

ಕಾರ್ಯಕ್ರಮ ಅನುಷ್ಠಾನಾಧಿಕಾರಿ ಜಯರಾಂ ಮಾತನಾಡಿ, 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಲಿನ ಪ್ಯಾಕೆಟ್ ನೀಡಲಾಗುವುದು. 3 ರಿಂದ 6 ವರ್ಷದೊಳಗಿನ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀನಾ ಜಗನ್ನಾಥ್, ಪ್ರಮುಖರಾದ ಸುನೀಲ್ ನಂಜಪ್ಪ, ಶಿವಕುಮಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ,  ತಾಲ್ಲೂಕು ಶಿಶು ಅಭಿವೃದ್ದಿ ಅಧಿಕಾರಿ ಮಾದಪ್ಪ, ದಮಯಂತಿ ಇದ್ದರು.

ಸದುಪಯೋಗಕ್ಕೆ ಸಲಹೆ
ಮಡಿಕೇರಿ: ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಿ ವಿದ್ಯಾರ್ಜನೆಗೆ ಒತ್ತು ನೀಡುವ ಸಲುವಾಗಿ ಜಾರಿ ಮಾಡಿರುವ `ಕ್ಷೀರ ಭಾಗ್ಯ' ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಕೆ.ಜಿ.ಬೋಪಯ್ಯ ಸಲಹೆ ಮಾಡಿದರು.

1 ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಣಿನಂಜಪ್ಪ ಮಾತನಾಡಿದರು.  ಜಿಲ್ಲಾ ಪಂಚಾಯಿತಿ  ಮುಖ್ಯಕಾರ್ಯನಿರ್ವಹಕ ಅಧಿಕಾರಿ  ಕೆ.ಬಿ.ಅಂಜನಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಎಚ್.ಬಸವರಾಜು ಇದ್ದರು. ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಸ್ವಾಗತಿಸಿದರು. 

`ಸಮಸ್ಯೆ ಪರಿಹಾರಕ್ಕೆ ಯತ್ನಿಸಿ'
ನಾಪೋಕ್ಲು: ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಸಲಹೆ ನೀಡಿದರು.

ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ `ಕ್ಷೀರಭಾಗ್ಯ' ಯೋಜನೆಯನ್ನು ಇಲ್ಲಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಅಕ್ಷರ ದಾಸೋಹ, ಸೈಕಲ್ ವಿತರಣೆ ಹಾಗೂ ಕ್ಷೀರಭಾಗ್ಯ ಯೋಜನೆಗಳಿಂದ ಬಡ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗಳೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಕೆಲವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಶಿಕ್ಷಕರ ಕೊರತೆಯಿದೆ. ಇದರ ನಿವಾರಣೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ವನಜಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಕಾಂಡಂಡ ಪ್ರತಿಜಾ ಅಚ್ಚಪ್ಪ, ಎಸ್‌ಡಿಎಂಸಿ ಸದಸ್ಯರು ಇದ್ದರು. ಹಿರಿಯ ಶಿಕ್ಷಕಿ ಪಿ.ಕೆ. ನಳಿನಿ ಸ್ವಾಗತಿಸಿದರು. ಶಿಕ್ಷಕಿ ಗಂಗಮ್ಮ ಬಿ.ಕೆ. ವಂದಿಸಿದರು.

`ಗ್ರಾಮೀಣ ಮಕ್ಕಳಿಗೆ ವರದಾನ'
ಶನಿವಾರಸಂತೆ: ಸರ್ಕಾರಿ ಶಾಲೆಯ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಹಮ್ಮಿಕೊಂಡಿರುವ `ಕ್ಷೀರಭಾಗ್ಯ'ಯೋಜನೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ವರದಾನ ಎಂದು ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ ಅಭಿಪ್ರಾಯಪಟ್ಟರು.

ಭಾರತಿ ವಿದ್ಯಾಸಂಸ್ಥೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವ ಮೂಲಕ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸಿದ್ದರೆ ಮಕ್ಕಳು ಕಲಿತಿದ್ದನ್ನು ಮನವರಿಕೆ ಮಾಡಿಕೊಳ್ಳುತ್ತಾರೆ ಎಂದರು.

ಸಂಸ್ಥೆ ಉಪಾಧ್ಯಕ್ಷ ಎಚ್.ಪಿ. ಶೇಷಾದ್ರಿ, ಕಾರ್ಯದರ್ಶಿ ಎಸ್.ಪಿ. ರಾಜ, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಎನ್.ಕೆ. ಅಪ್ಪಸ್ವಾಮಿ, ಕೆ.ಎಂ. ಜಗನ್‌ಪಾಲ್, ಮೊಹ್ಮದ್ ಪಾಷಾ, ಸಂಪನ್ಮೂಲ ವ್ಯಕ್ತಿ ಎಚ್.ಸಿ. ಬಸವರಾಜ್, ಪ್ರಾಂಶುಪಾಲ ಎಚ್.ಎ. ದೇವರಾಜ್, ಉಪನ್ಯಾಸಕರು, ಉಪಪ್ರಾಂಶುಪಾಲರಾದ ಜಯಲಕ್ಷ್ಮಿ, ಕೆ.ಎಂ. ನಾಗರಾಜ್ ಇದ್ದರು. ಶಿಕ್ಷಕ ಸಿ.ಎಸ್. ನಂದೀಶ್ ಕಾರ್ಯಕ್ರಮ ನಿರೂಪಿಸಿದರು.

`ಅನುಷ್ಠಾನ ಶಿಕ್ಷಕರ ಹೊಣೆ'
ಸೋಮವಾರಪೇಟೆ: ಮಕ್ಕಳ ಆರೋಗ್ಯ ಕಾಪಾಡಲು ರಾಜ್ಯ ಸರ್ಕಾರ `ಕ್ಷೀರಭಾಗ್ಯ' ಯೋಜನೆ ಜಾರಿಗೆ ತಂದಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ. ಸೋಮಯ್ಯ ಹೇಳಿದರು.

ಗುರುವಾರ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಯನ್ನು ಮಕ್ಕಳಿಗೆ ಉತ್ತಮವಾಗಿ ತಲುಪಿಸುವ ಹೊಣೆ ಶಿಕ್ಷಕರದ್ದು. ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಗುಣಮಟ್ಟದಿಂದ ಕೂಡಿವೆಯೇ ಎಂಬ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಮಚಂದ್ರ ರಾಜೇ ಅರಸ್ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಲೀಲಾ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಕೃಷ್ಣೇಗೌಡ ,ಆರ್‌ಎಂಎಸ್‌ಎ ಜಿಲ್ಲಾ ಸಹಾಯಕ ಯೋಜನಾಧಿಕಾರಿ ಮಹದೇವ್, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ.  ಮಹದೇವ್, ಶಾಲೆಯ ಮುಖ್ಯ ಶಿಕ್ಷಕ ಎಂ.ಡಿ. ದೇವರಾಜಯ್ಯ ಮತ್ತು ಎಸ್‌ಡಿಎಂಸಿ ಸದಸ್ಯರು ಇದ್ದರು.

ಕ್ಷೀರಭಾಗ್ಯ ಯೋಜನೆಗೆ ಚಾಲನೆ
ಕುಶಾಲನಗರ: ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣ ಹೊಂದಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸಿ.ಕೆ. ಇಂದಿರಮ್ಮ ಸಲಹೆ ನೀಡಿದರು.

ಸಮೀಪದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ `ಕ್ಷೀರಭಾಗ್ಯ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಶಿವಣ್ಣ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ, ಸಿಆರ್‌ಪಿ ಎಚ್.ಎಂ. ಪ್ರಕಾಶ್, ಮುಖ್ಯ ಶಿಕ್ಷಕಿ ಡೆಸ್ಸಿ, ಹಿರಿಯ ಶಿಕ್ಷಕರಾದ ಕೃಷ್ಣಪ್ಪ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT