2708 ಗ್ರಾಮ; 3000 ಮದ್ಯ ಮಾರಾಟ ತಾಣ

7

2708 ಗ್ರಾಮ; 3000 ಮದ್ಯ ಮಾರಾಟ ತಾಣ

Published:
Updated:

ತುಮಕೂರು: `ಮೂಗಿಗಿಂತ ಮೂಗುತಿ ಭಾರ~ ಎಂಬಂತೆ ಜಿಲ್ಲೆಯಲ್ಲಿ ಗ್ರಾಮಗಳಿಗಿಂತ ಮದ್ಯ ಮಾರುವ ತಾಣಗಳೇ ಹೆಚ್ಚಿರುವುದು ಅಧಿಕಾರಿಗಳನ್ನೇ ದಂಗುಬಡಿಸುತ್ತಿದೆ.ಜಿಲ್ಲೆಯಲ್ಲಿ 2708 ಕಂದಾಯ ಗ್ರಾಮಗಳಿವೆ. 50 ಹೋಬಳಿ ಕೇಂದ್ರಗಳಿವೆ. ಸರ್ಕಾರದ ಅಧಿಕೃತ ಪರವಾನಗಿ ಪಡೆದ 313 ಲಿಕ್ಕರ್ ಶಾಪ್‌ಗಳಿವೆ. ಆದರೆ ಅನಧಿಕೃತವಾಗಿ 3 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಎನ್ನುತ್ತಿವೆ ಅಬಕಾರಿ ಇಲಾಖೆ ಮೂಲಗಳು.ಅಬಕಾರಿ ಮತ್ತು ಲಾಟರಿ ವಿಶೇಷ ದಳ ಹಾಗೂ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟ ತಾಣಗಳ ನಿಖರ ಮಾಹಿತಿ ಕಲೆ ಹಾಕಿಲ್ಲವಾಗಿದ್ದರೂ ಅಧಿಕಾರಿಗಳು ಹೇಳುವ ಪ್ರಕಾರ ಪ್ರತಿ ಸಣ್ಣ ಹಳ್ಳಿಯಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. `ಒಂದೊಂದು ಊರಿನಲ್ಲಿ 3-4 ಕಡೆಗಳಲ್ಲಿ ಮದ್ಯ ಮಾರಾಟ ಗಾರರಿದ್ದಾರೆ. ಇದನ್ನು ಲೆಕ್ಕಕ್ಕೆ ತೆಗೆದು ಕೊಂಡರೂ 3 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ~ ಎನ್ನು ತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿ.ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ಮಾಡುವುದನ್ನು ಅಬಕಾರಿ ಇಲಾಖೆಯೇ ಪ್ರೋತ್ಸಾಹಿಸುತ್ತಿದೆ ಎಂಬ ಆಘಾತಕಾರಿ ಅಂಶ ಕೂಡ ತಿಳಿದುಬಂದಿದೆ. ಕೆಲವು ಪೊಲೀಸರನ್ನು `ಪ್ರಜಾವಾಣಿ~ ಮಾತನಾಡಿಸಿದಾಗ, ಹೆಸರು ಬಹಿ ರಂಗ ಮಾಡಬಾರದು ಎಂಬ ಷರತ್ತಿನೊಂದಿಗೆ ಈ ಮಾಹಿತಿ ನೀಡಿದರು.`ಜಿಲ್ಲೆಗೆ ನಿಗದಿಪಡಿಸಿರುವ ಮದ್ಯ ಮಾರಾಟದ ಗುರಿ ಮುಟ್ಟಲೇಬೇಕು. ಗುರಿ ಮುಟ್ಟದಿದ್ದರೆ ಸಭೆಯಲ್ಲಿ ಉನ್ನತಾಧಿಕಾರಿಗಳು ಛೀಮಾರಿ ಹಾಕುತ್ತಾರೆ. ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಡಿ. ಪ್ರಕರಣ ದಾಖಲಿಸಬೇಡಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಗೋಗರೆಯುತ್ತಾರೆ~ ಎಂದು ಅಧಿಕಾರಿ ಯೊಬ್ಬರು ತಿಳಿಸಿದರು.`ಇಲಾಖೆಯು ಮಾರಾಟದ ಗುರಿ ನಿಗದಿ ಪಡಿಸಿರುವುದು ಸರಿ. ಆದರೆ ಅಕ್ರಮ ಮದ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿಲ್ಲ. ಹಳ್ಳಿಗಳಲ್ಲಿ ಮದ್ಯ ಮಾರಾಟ ನಡೆದಿರುವುದು ಸತ್ಯ. ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ~ ಎಂದು ಅಬಕಾರಿ ಉಪ ಆಯುಕ್ತ ಎಸ್. ನಾಗ ರಾಜಯ್ಯ `ಪ್ರಜಾವಾಣಿ~ಗೆ  ಪ್ರತಿಕ್ರಿಯಿಸಿದರು.`ಈ ವರ್ಷ ಇಲ್ಲಿವರೆಗೂ ಅಕ್ರಮವಾಗಿ ಮದ್ಯ ಮಾರಾಟದ 1986 ಪ್ರಕರಣ ದಾಖಲಿಸ ಲಾಗಿದೆ. 7 ವಾಹನ ಜಪ್ತಿ ಮಾಡಲಾಗಿದೆ~ ಎಂದು ಅವರು ಹೇಳಿದರು.`ಪ್ರತಿ ಹಳ್ಳಿಯಲ್ಲಿ ಒಂದೆಡೆಯಲ್ಲ, 2-3 ಕಡೆಗಳಲ್ಲಿ ಮದ್ಯ ಮಾರಾಟ ಸಾಮಾನ್ಯವಾಗಿದೆ. ಆದರೆ ದಾಳಿ ನಡೆಸಿ ದೂರು ದಾಖಲಿಸಿಕೊಳ್ಳುವ ಅಧಿಕಾರ ನಮಗಿಲ್ಲ. ದೂರು ಬಂದ ಕಡೆಗಳಲ್ಲಿ ದಾಳಿ ನಡೆಸಿದ್ದೇವೆ. ಕಳೆದ ವರ್ಷ 130 ಪ್ರಕರಣ ದಾಖಲಿಸಿಕೊಂಡಿದ್ದೇವೆ~ ಎಂದು ಅಬಕಾರಿ ಮತ್ತು ಲಾಟರಿ ವಿಶೇಷ ದಳದ ಸಬ್‌ಇನ್ಸ್ ಪೆಕ್ಟರ್ ಗಂಗಾಧರಯ್ಯ ತಿಳಿಸಿದರು.`ವಿಪರೀತ ಮದ್ಯ ಮಾರಾಟದಿಂದಾಗಿ ಗ್ರಾಮಗಳಲ್ಲಿನ ಮಹಿಳೆಯರ ಸ್ಥಿತಿ ಹೇಳ ತೀರದಾಗಿದೆ. ಮಾರಾಟಗಾರರ ಮೇಲೆ ದಾಳಿ ನಡೆಸಿದ ಸಾಕಷ್ಟು ಪ್ರಕರಣಗಳಲ್ಲಿ ಶಾಸಕರು ತಡೆ ಒಡ್ಡಿದರು. ಹಳ್ಳಿ ಜನ ಇನ್ನೆಲ್ಲಿ ಕುಡಿಯಲು ಹೋಗ್ತಾರೆ. ಬಡವರು ಕುಡಿದುಕೊಳ್ಳಲಿ ಬಿಡಿ ಎಂದು ದಬಾಯಿಸುತ್ತಾರೆ~ ಎಂದು ಶಿರಾ ತಾಲ್ಲೂಕಿನ ಠಾಣೆಯೊಂದರ ಸಬ್‌ಇನ್ಸ್‌ಪೆಕ್ಟರ್‌ರೊಬ್ಬರು ತಿಳಿಸಿದರು. ಸ್ಥಳೀಯ ಪೊಲೀಸರು ನೀಡುತ್ತಿರುವ ಸಹಕಾರ ಕೂಡ ಅಕ್ರಮ ಮದ್ಯ ಮಾರಾಟ ಬಿಗಡಾಯಿಸಲು ಪ್ರಮುಖ ಕಾರಣ ಎಂದೂ ಅವರು ಹೇಳಿದರು.ಲಿಕ್ಕರ್‌ಶಾಪ್‌ನವರೇ ಖುದ್ದು ಮಾರಾಟ ಮಾಡಿಸುತ್ತಿದ್ದಾರೆ. ವ್ಯಾನ್‌ಗಳಲ್ಲಿ ಹಳ್ಳಿ- ಹಳ್ಳಿಗಳಲ್ಲಿ ಬಾಟಲಿ ಇಳಿಸಿ ಹೋಗುತ್ತಾರೆ. ಸೀಸೆಯೊಂದಕ್ಕೆ ರೂ. 5ರಿಂದ ರೂ. 10 ಹೆಚ್ಚು ಪಡೆದು ಮಾರಾಟ ಮಾಡಲಾಗುತ್ತಿದೆ. ರಾಜಕೀಯ ಬೆಂಬಲ ಇರುವ ಕೆಲವು ಪುಢಾರಿಗಳಿಗೆ ಇದು ಹಣ ಗಳಿಸುವ ಸುಲಭ ದಂದೆಯಾಗಿ ಮದ್ಯ ಮಾರಾಟ ಮಾರ್ಪಟ್ಟಿದೆ.ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಜನವರಿ ವೇಳೆಗೆ 1 ಲಕ್ಷ ಕ್ಯಾಬ್ ಮದ್ಯ ಮಾರಾಟ ಹೆಚ್ಚಾಗಿರುವುದು ಅಕ್ರಮ ಮದ್ಯ ಮಾರಾಟಕ್ಕೆ ಹಿಡಿದ ಕನ್ನಡಿ ಎಂಬ ಮಾತುಗಳು ಕೇಳಿಬರುತ್ತಿವೆ.

ಕರ್ತವ್ಯ ಮರೆತ ಅಧಿಕಾರಿ- ಜನಪ್ರತಿನಿಧಿಗಳು

ಅಬಕಾರಿ ಕಾಯ್ದೆ 1965ರ ಕಲಂ 50 (3) (ಎ) ಪ್ರಕಾರ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ, ಕಾರ್ಯದರ್ಶಿ, ಗ್ರಾಮ ಮಟ್ಟದ ಅಧಿಕಾರಿ, ನೌಕರರು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಕ್ರಮ ಮದ್ಯ ಮಾರಾಟ ತಡೆಯುವುದು ಕರ್ತವ್ಯವಾಗಿದೆ. ಆದರೆ ಇವರೆಲ್ಲರೂ ಕರ್ತವ್ಯ ಮರೆತ ಪರಿಣಾಮ `ಕಲ್ಪತರು ನಾಡಿನ~ ಹಳ್ಳಿಹಳ್ಳಿಗಳು ಮದ್ಯದ ಅಮಲಿನಲ್ಲಿ ತೇಲುತ್ತಿವೆ.`ಪೊಲೀಸರು ಕೂಡ ಸರಿಯಾಗಿ ಸಹಕರಿಸು ತ್ತಿಲ್ಲ. ಅಬಕಾರಿ ಮತ್ತು ಲಾಟರಿ ವಿಶೇಷ ದಳ, ತಹಶೀಲ್ದಾರ್‌ಗೂ ಅಕ್ರಮ ಮದ್ಯ ಮಾರಾಟ ತಾಣಗಳ ಮೇಲೆ ದಾಳಿ ನಡೆಸುವ ಅಧಿಕಾರವಿದೆ. ಆದರೆ ಅಂಥ ಉದಾಹರಣೆಗಳೇ ಸಿಗುವುದಿಲ್ಲ. ಎಲ್ಲರ ಸಹಕಾರ ಇಲ್ಲದೆ ಅಕ್ರಮ ಮದ್ಯ ಮಾರಾಟ ತಡೆ ಕನಸಿನ ಮಾತು~ ಎನ್ನುತ್ತಾರೆ ಅಬಕಾರಿ ಇನ್ಸ್‌ಪೆಕ್ಟರ್ ಸಿದ್ದಲಿಂಗಸ್ವಾಮಿ.ದಂಡ ಸಾಲದು, ಶಕ್ತಿಯೂ ಬೇಕು

ದಂಡ ಇದ್ದರೆ ಸಾಲದು ಶಕ್ತಿಯನ್ನು ಕೂಡ ಅಬಕಾರಿ ಇಲಾಖೆಗೆ ತುಂಬಬೇಕಾಗಿದೆ. ಅಬಕಾರಿ ಇಲಾಖೆ ಸಶಕ್ತಗೊಳಿಸಿ ಅಕ್ರಮ ಮದ್ಯ ಮಾರಾಟ ಕೇಂದ್ರಗಳನ್ನು ಬಂದ್ ಮಾಡಿಸುವ ಸಂಕಲ್ಪ ಶಾಸಕರು, ಸಂಸದರಿಗೆ ಇಲ್ಲ ಎನ್ನುತ್ತವೆ ಅಬಕಾರಿ ಇಲಾಖೆ ಮೂಲಗಳು.ಜಿಲ್ಲಾ ಅಬಕಾರಿಗೆ ಕೇವಲ 25 ಇನ್ಸ್‌ಪೆಕ್ಟರ್‌ಗಳನ್ನು ನೀಡಲಾಗಿದೆ. ಅವುಗಳಲ್ಲಿ 17 ಹುದ್ದೆ ಖಾಲಿ ಇವೆ. ಮೂವರು ಡಿಎಸ್ಪಿ ನಿಯೋಜನೆ ಮೇರೆಗೆ ವಾರದಲ್ಲಿ ಮೂರು ದಿನ ಮಾತ್ರ ಕೆಲಸ ನಿರ್ವಹಿಸುತ್ತಾರೆ. 68 ಗಾರ್ಡ್ಸ್ ಹುದ್ದೆ ಖಾಲಿ ಇವೆ. ಕೇವಲ 13 ಜೀಪುಗಳಿವೆ. 18 ಮಂದಿ ಇನ್ಸ್‌ಪೆಕ್ಟರ್, 8 ಮಂದಿ ಸಬ್‌ಇನ್ಸ್‌ಪೆಕ್ಟರ್‌ಗೆ 13 ಜೀಪ್ ಕೊಟ್ಟಿದ್ದಾರೆ. ಹೀಗಿರುವಾಗ ನಿಯಂತ್ರಣ ಹೇಗೆ ಸಾಧ್ಯ ಎಂಬುದು ಅಧಿಕಾರಿಗಳ ಅಳಲು. ಅಹಾರ ಬಳಕೆ ಇಳಿಕೆ

ಕುಡಿತದ ಚಟ ಹೆಚ್ಚಿರುವ ಕಡೆಗಳಲ್ಲಿ ಆಹಾರ ಬಳಕೆ ಕಡಿಮೆ ಇರುತ್ತದೆ. ಇದು ಕುಟುಂಬದ ಸದಸ್ಯರ ಆರೋಗ್ಯ, ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಆಹಾರದ ಮೇಲೆ ವಿನಿಯೋಗಿಸಬಹುದಾದ ಹಣವನ್ನು ಮದ್ಯಕ್ಕೆ ನೀಡುವುದರಿಂದ ಆಹಾರ ಭದ್ರತೆ ಕುಟುಂಬದ ಸದಸ್ಯರಿಗೆ ಸಿಗುವುದಿಲ್ಲ. ವಿಶೇಷವಾಗಿ ಮನೆಯ ಮಹಿಳೆಯರು, ಹೆಣ್ಣು ಮಕ್ಕಳು ಅನಿವಾರ್ಯ ವಾಗಿ ಕಡಿಮೆ ಆಹಾರ ಸೇವನೆ ಮಾಡುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳೆಯರು ರಕ್ತಹೀನತೆ, ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಲು ಕಾರಣ ಎಂದು ಆಹಾರ ಸರಬರಾಜು ಇಲಾಖೆ ಉಪನಿರ್ದೇಶಕ ಪಿ.ಸಂಬಯ್ಯ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry