ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ರಿಂದ ಬೆಂಗಳೂರು ಸಾಹಿತ್ಯೋತ್ಸವ

ದೇಶ– ವಿದೇಶದ 100 ಲೇಖಕರು ಭಾಗಿ
Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಲಿಟರೇಚರ್‌ ಫೆಸ್ಟ್ (ಬಿಎಲ್‌ಎಫ್) ಸಮಿತಿ ವತಿ­ಯಿಂದ ‘ಬೆಂಗಳೂರು  ಸಾಹಿತ್ಯೋ­ತ್ಸವ’ದ ಎರಡನೇ ಆವೃತ್ತಿ ಇದೇ 27ರಿಂದ 29ರ ವರೆಗೆ ಎಲೆಕ್ಟ್ರಾನಿಕ್‌ ಸಿಟಿಯ ವೇಲಾಂಗಣಿ ಪಾರ್ಕ್‌ನಲ್ಲಿ ನಡೆಯಲಿದೆ.

‘ಸಾಹಿತ್ಯೋತ್ಸವದಲ್ಲಿ ಗುಲ್ಜಾರ್‌, ವಿಲಿಯಂ ಡಾಲ್‌ರಿಂಪಲ್‌, ಯು.ಆರ್‌. ಅನಂತಮೂರ್ತಿ, ರಾಜ್‌ಮೋಹನ್‌ ಗಾಂಧಿ, ಚಂದ್ರಶೇಖರ ಕಂಬಾರ, ರಾಮ­ಚಂದ್ರ ಗುಹಾ, ನವನೀತ ದೇವ್‌ಸೇನ್‌, ರಾಕೇಶ್‌, ನಿಸಾರ್‌ ಅಹ್ಮದ್‌, ಎಚ್‌.­ಎಸ್‌.­ವೆಂಕಟೇಶಮೂರ್ತಿ, ವೆಂಕ­ಟಾಚಲ ಶಾಸ್ತ್ರಿ, ನರಹಳ್ಳಿ ಬಾಲಸುಬ್ರ­ಹ್ಮಣ್ಯ, ಡಾ.ಬಿ.ಎ.ವಿವೇಕ್‌ ರೈ, ಗಿರಡ್ಡಿ ಗೋವಿಂದರಾಜು, ಸಿ.ಎನ್‌.­ರಾಮ­ಚಂದ್ರನ್‌, ಡಾ.ಎಂ.ಎಂ. ಕಲಬುರ್ಗಿ, ಮಧು ಕೀಶ್ವರ್‌, ಶೋಭಾ ಡೇ, ಶಶಿ ದೇಶಪಾಂಡೆ, ಪ್ರಸೂನ್‌ ಜೋಷಿ, ನೀಲಾಂಜನ್‌ ರಾಯ್ ಸೇರಿದಂತೆ 100ಕ್ಕೂ ಹೆಚ್ಚಿನ ಲೇಖಕರು ಭಾಗವಹಿಸು­ವರು.
ಮೂರು ದಿನವೂ ಕಾರ್ಯ­ಕ್ರಮ ಬೆಳಿಗ್ಗೆ 10ರಿಂದ ಆರಂಭವಾಗ­ಲಿದೆ’ ಎಂದು ಲೇಖಕ ವಿಕ್ರಮ್‌ ಸಂಪತ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೊದಲ ವರ್ಷದಲ್ಲಿಯೇ ದೇಶದ ಓದುಗರು ಹಾಗೂ ಬರಹಗಾರರು ಭಾಗ­ವಹಿಸಲೇಬೇಕಾದ ಉತ್ಸವವಾಗಿ ಬೆಳೆದಿದೆ. ಜೊತೆಗೆ ಸಮೃದ್ಧ ಚಿಂತನೆಗೆ ಒಳಪಡಿಸುವ ಚರ್ಚೆಗಳು, ಸಂದರ್ಶನ­ಗಳು ಹಾಗೂ ಸಾಹಿತ್ಯಕ ಕಾರ್ಯಕ್ರಮ­ಗಳನ್ನು ಒಳಗೊಂಡಿರುತ್ತದೆ. ಲೇಖಕ­ರೊಂದಿಗೆ ಪ್ರೇಕ್ಷಕರು ಸಂವಾದ ನಡೆಸಬಹುದು.

ನೂರು ವರ್ಷಗಳ ಭಾರ­ತೀಯ ಸಿನಿಮಾದ ಸಂಸ್ಮರಣೆ ಕಾರ್ಯ­ಕ್ರಮ­ವನ್ನೂ ನಡೆಸಲಾಗುವುದು. ನಟ ಫರ್ಹಾನ್‌ ಅಖ್ತರ್‌, ನಿರ್ದೇಶಕ ರಾಕೇಶ್‌ ಓಂಪ್ರಕಾಶ್‌ ಮೆಹ್ತಾ, ಬರಹ­ಗಾರ ಪ್ರಸೂನ್‌ ಜೋಷಿ ಚರ್ಚೆಯಲ್ಲಿ ಭಾಗವಹಿಸುವರು’ ಎಂದು ಅವರು ವಿವರ ನೀಡಿದರು.

ಸಿನಿಮಾ ಲೇಖನದ ಕ್ಷೇತ್ರದ ಚರ್ಚೆಗಳಲ್ಲಿ ಭಾರದ್ವಾಜ್‌ ರಂಗನ್‌, ಸಿದ್ದಾರ್ಥ ಭಾಟಿಯಾ, ಶರ್ಮಿಸ್ತಾ ಗೋಪು, ಎಂ.ಕೆ. ರಾಘವೇಂದ್ರ, ಕಿಶ್ವರ್‌ ದೇಸಾಯಿ, ಭಾವನಾ ಸೋಮಯ್ಯ, ಜಯಂತ್‌ ಕಾಯ್ಕಿಣಿ ಮತ್ತಿತರರು ಭಾಗ­ವಹಿಸುವರು. ಕವಿ ಗುಲ್ಜಾರ್‌ ಅವರು ಈ ವರ್ಷ ಕೂಡಾ ಪ್ರಸೂನ್‌ ಜೋಷಿ ಅವರೊಂದಿಗೆ ಸಿನಿಮಾ ಸಾಹಿತ್ಯ ಕುರಿತ ಚರ್ಚೆಯಲ್ಲಿ ಭಾಗ­ವಹಿಸುವರು ಎಂದರು.

‘ಕಾರ್ಯಕ್ರಮಕ್ಕೆ ಗೋಥೆ ಇನ್‌ಸ್ಟಿಟ್ಯೂಟ್‌ ಸಹಯೋಗ ಇದ್ದು, ಈ ಆವೃತ್ತಿಯಲ್ಲಿ ಜರ್ಮನಿಯನ್ನು ಕೇಂದ್ರೀ­ಕರಿಸಿದ ದೇಶವನ್ನಾಗಿ ಆರಿಸಿಕೊಳ್ಳ­ಲಾಗಿದೆ. ಜರ್ಮನಿಯ ಸ್ಲ್ಯಾಮ್‌ ಪೊಯೆಟ್‌ ಬಾಸ್‌ ಬೋಚರ್, ಟಿಲ್ಮನ್‌ ರಾ್ಯಮ್‌ಸ್ಟೆಟ್‌, ಕ್ರಿಸ್ಟೋಫರ್‌ ಕ್ಲೋಬೆಲ್‌, ಸಾಸ್ಕಿಯಾ ಜೈನ್‌, ಅಬ್ಬಾಸ್‌ ಕೈದರ್‌ ಪಾಲ್ಗೊಳ್ಳುವರು’ ಎಂದು ಹೇಳಿದರು.

ರಾಜ್ಯದ ಉಪಭಾಷೆಗಳಾದ ಕೊಡವ, ತುಳು, ಬ್ಯಾರಿ ಹಾಗೂ ಕೊಂಕಣಿ­ಗಳ ನಡುವೆ ಮತ್ತು ಸಂಸ್ಕೃತ­ವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬಳಸಿರುವ ಮತ್ತೂರು ಹಳ್ಳಿಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧ್ಯಾತ್ಮ ಹಾಗೂ ಬರಹ ಕುರಿತು ಶ್ರೀ ಶ್ರೀ ರವಿಶಂಕರ್‌ ಗುರೂಜಿ ವಿಶೇಷ ಕಾರ್ಯ­ಕ್ರಮ ನೀಡುವರು. ಸಂಜೆ ವೇಳೆ ಕರ್ನಾಟಕ ವೈಭವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉತ್ಸವಕ್ಕೆ ರಾಷ್ಟ್ರೀಯ ಸಾಹಿತ್ಯ ಅಕಾಡೆಮಿ, ಭಾರತದ ರಾಷ್ಟ್ರೀಯ ಅಕ್ಷರ ಅಕಾಡೆಮಿ ಬೆಂಬಲ ನೀಡಿದ್ದು, ಗಣ್ಯ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿ­ರುವ ಲೇಖಕರನ್ನು ಒಂದು­ಗೂಡಿಸಲಾಗುತ್ತಿದೆ. ಒಡಿಯಾದ ರಮಾ­ಕಾಂತ ರಥ, ಬಂಗಾಲದನ ನವನೀತ್‌ ದೇವ್‌ ಸೇನ್‌, ತಮಿಳಿನ ಅಶೋಕ್‌ ಮಿತ್ರನ್‌, ಹಿಂದಿಯ ಅಶೋಕ್ ವಾಜಪೇಯಿ, ಗೋವಿಂದ ಮಿಶ್ರಾ, ಮಲಯಾಳಂನ ಸಚ್ಚಿದಾ­ನಂದನ್, ತೆಲುಗುವಿನ ವೇಮ್‌ಪಳ್ಳಿ ಗಂಗಾಧರ, ಕಾಶ್ಮೀರದ ಫಾರೂಕ್‌ ಶಾಹಿನ್‌, ಮರಾಠಿಯ ಧರ್ಮಕೀರ್ತಿ ಸುಮಂತ್‌, ಅಸ್ಸಾಮಿ ಭಾಷೆಯ ಅರಿಂಧಮ್‌ ಬೋರ್ಕಾಟಾಕಿ ಬೆಂಗ­ಳೂರಿ­ನಲ್ಲಿ ಮೊದಲ ಬಾರಿಗೆ ಕಾಣಿಸಿ­ಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಎಲ್ಲರಿಗೂ ಮುಕ್ತ ಪ್ರವೇಶ ಇದ್ದು, ವೆಬ್‌ಸೈಟ್‌ www.bangalore­literaturefestival.org ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ, ಭಾಗವಹಿಸುವ ಲೇಖಕರ ವಿವರ ಹಾಗೂ ಇತರ ಮಾಹಿತಿ ಕೂಡಾ ವೆಬ್‌ಸೈಟ್‌ನಲ್ಲಿ ಲಭ್ಯ ಇರುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT