28ಕ್ಕೆ ನೀರಿನ ಖಾಸಗೀಕರಣ ವಿರುದ್ಧಹೋರಾಟ

7

28ಕ್ಕೆ ನೀರಿನ ಖಾಸಗೀಕರಣ ವಿರುದ್ಧಹೋರಾಟ

Published:
Updated:

ಚಾಮರಾಜನಗರ: ‘ನೀರು ನಮಗೆ ಉಸಿರು; ನೀರು ನಮ್ಮ ಪ್ರಾಣ. ಆದರೆ, ನಮ್ಮಿಂದ ಓಟು ಪಡೆದ ಜನಪ್ರತಿನಿಧಿಗಳು ಇಂದು ವಿದೇಶಿ ಖಾಸಗಿ ಕಂಪೆನಿಗಳಿಗೆ ನೀರಿನ ಮೂಲ ಮಾರಾಟ ಮಾಡುವ ದಂಧೆಯಲ್ಲಿ ಮುಳುಗಿದ್ದಾರೆ’ ಎಂದು ಸ್ವರಾಜ್ ಸಂಘಟನೆ ಆರೋಪಿಸಿದೆ.‘ನಮಗೆ ಸೇರಿದ ನೀರನ್ನು ಬೇರೆಯವರಿಗೆ ಮಾರಾಟ ಮಾಡಬಾರದು. ಈ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಆದರೆ, ಈಗ ಬೇಲಿಯೇ ಎದ್ದು ಹೊಲ ಮೇಯುವ ಕೆಲಸ ನಡೆಯುತ್ತಿದೆ. ಖಾಸಗಿ ಕಂಪೆನಿಗಳಿಗೆ ನೀರು ಮಾರಾಟ ಮಾಡಲು ಪರವಾನಗಿ ನೀಡಲಾಗುತ್ತಿದೆ. ಇದು ಖಂಡನೀಯ. ಈ ಕುರಿತು ಫೆ. 28ರಂದು ರೈತ ಸಂಘ ಸೇರಿದಂತೆ ಪ್ರಗತಿಪರ ಸಂಘಟನೆಗಳೊಂದಿಗೆ ಹೋರಾಟ ನಡೆಸಲಾಗುವುದು’ ಎಂದು ಸಂಘಟನೆಯ ಕಾರ್ಯಕರ್ತೆ ಪುಟ್ಟಮ್ಮ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಾರ್ವಜನಿಕರು ಕುಡಿಯುವ ನೀರಿಗಾಗಿ ಸಾಕಷ್ಟು ಕಷ್ಟಪಡುತ್ತಿದ್ದಾರೆ. ರಾಜ್ಯದ ಸಾವಿರಾರು ಹಳ್ಳಿಗಳಲ್ಲಿ ನೀರಿಗೆ ತತ್ವಾರವಿದೆ. ಆದರೆ, ರಾಜ್ಯ ಸರ್ಕಾರ ಕಂಪೆನಿಗಳಿಗೆ ನೀರು ಮಾರಾಟದ ಗುತ್ತಿಗೆ ನೀಡಿದೆ. ಹುಬ್ಬಳ್ಳಿ -ಧಾರವಾಡ, ಮೈಸೂರು, ಬೆಳಗಾವಿಯಂಥ ನಗರದ ಮನೆಗಳಲ್ಲಿ ಕಂಪೆನಿಗಳು ನಲ್ಲಿಗಳಿಗೆ ಮೀಟರ್ ಅಳವಡಿಸಿ ಹಣ ವಸೂಲಿ ಮಾಡುತ್ತಿವೆ. ನೀರಿನ ಖಾಸಗೀಕರಣದ ವಿರುದ್ಧ ಹೋರಾಟ ನಡೆಯಲಿದ್ದು, ಎಲ್ಲಾ ನಾಗರಿಕರು ಸಹಕಾರ ನೀಡಬೇಕು ಎಂದು ಕೋರಿದರು.ಈಗಾಗಲೇ, ಕೃಷಿ, ಕಲ್ಲಿದ್ದಲು ಸೇರಿದಂತೆ ದೇಶದ ಸಂಪನ್ಮೂಲದ ಮೇಲೆ ವಿದೇಶಿ ಕಂಪೆನಿಗಳು ಹಿಡಿತ ಸಾಧಿಸುತ್ತಿವೆ. ಪ್ರಸ್ತುತ ನೀರಿನ ಗುತ್ತಿಗೆಯೂ ಅವರ ಪಾಲಾಗುತ್ತಿದೆ. ಇದರಿಂದ ಕೊಳವೆ ಬಾವಿ, ಕೆರೆಗಳಿಗೆ ಕಂಪೆನಿಗಳೇ ವಾರಸುದಾರರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.ಪ್ರಸ್ತುತ ಲಕ್ಷಾಂತರ ಕುಟುಂಬಗಳಿಗೆ ಅನ್ನ ಸಿಗುವುದೇ ಕಷ್ಟವಾಗಿದೆ. ಈಗ ಕುಡಿಯುವ ನೀರಿಗೂ ವಿದೇಶಿಗರ ಮುಂದೆ ಕೈಚಾಚುವುದು ಸರಿಯಲ್ಲ. ಹಣ ಇದ್ದವರಿಗೆ ಮಾತ್ರ ನೀರು; ಇಲ್ಲದವರಿಗೆ ಸಾವು ಎನ್ನುವಂತಾಗುತ್ತದೆ. ಇಂಧನ, ಅದಿರಿನಿಂದ ಹೆಚ್ಚು ಲಾಭ ಗಿಟ್ಟುವುದಿಲ್ಲ ಎಂಬುದು ಕಂಪೆನಿಗಳ ಮನೋಭಾವ. ಹಾಗಾಗಿ, ಕುಡಿಯುವ ನೀರಿನ ಮೇಲೆ ಅವರ ಕಣ್ಣು ಬಿದ್ದಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಸಿದ್ದರಾಜು, ಪುಟ್ಟಗೌರಿ, ಕೆ. ತಂಗವೇಲು, ನರಸಿಂಹಜಟ್ಟಪ್ಪ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry