ಗುರುವಾರ , ಜನವರಿ 23, 2020
22 °C
ಗೋವಾದಲ್ಲಿ ಸಿನಿಮಾ ಮಾಡಿದ ದಾವಣಗೆರೆ ಕಲಾವಿದ

28ಕ್ಕೆ ‘ಗೋವಾ ಕನ್ನಡಿಗ’ ಚಿತ್ರದ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಆರ್‌.ನಾಗರಾಜ್‌ ಉಪ್ಪಾರ್‌ ನಾಯಕ ನಟನಾಗಿ ಅಭಿನಯಿಸಿರುವ, ಶ್ರೀಲಕ್ಷ್ಮೀ ನರಸಿಂಹ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಗೋವಾ ಕನ್ನಡಿಗ’ ಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಡಿ.28ರಂದು ಗೋವಾದ ಮಾಸ್ಕೋದ ಜುವಾರಿ ನಗರದ ಯಲ್ಲಾ ಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.ಗೋವಾದಲ್ಲಿರುವ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಮೊದಲಾದವುಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುವುದು ಎಂದು ನಿರ್ಮಾಪಕ ಹಾಗೂ ಕಲಾವಿದ ಆರ್‌. ನಾಗರಾಜ್‌್ ಉಪ್ಪಾರ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘ಕೆಲಸ ಹುಡುಕಿ ನಾನು ದಾವಣಗೆರೆಯಿಂದ ಗೋವಾಗೆ ಹೋದೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದೆ. ಟ್ಯಾಕ್ಸಿ ಓಡಿಸುತ್ತಿದೆ. ಈ ನಡುವೆ, ಅಲ್ಲಿನವರ ಸಹಕಾರದ ಮೇರೆಗೆ ಸಿನಿಮಾ ಕ್ಷೇತ್ರಕ್ಕೆ ಬಂದೆ. ಮೊದಲಿಗೆ ಕೊಂಕಣಿಯಲ್ಲಿ ‘ಉಜ್ವಡ್‌’ (ಬೆಳಕು) ಚಿತ್ರ ಸಿದ್ಧಪಡಿಸಿದ್ದೇನೆ. ಇದು ಅಲ್ಲಿನ ಮಾಲ್‌ಗಳಲ್ಲಿ ತೆರೆ ಕಂಡಿದೆ. ಜನವರಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ನೋಡಿದ ಕನ್ನಡಿಗರು, ಕನ್ನಡದಲ್ಲೇಕೆ ಸಿನಿಮಾ ಮಾಡಬಾರದು ಎಂದು ಕೇಳಿದರು. ಇದರಿಂದ ಪ್ರೇರಣೆ ಪಡೆದು ಗೋವಾ ಕನ್ನಡಿಗ’ ಚಿತ್ರಕ್ಕೆ ನಿರ್ಮಾಣಕ್ಕೆ ಮುಂದಾದೆ’ ಎಂದು ಅವರು ಮಾಹಿತಿ ನೀಡಿದರು.ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್‌.ಕೆ.ಪಾಟೀಲ, ಎಸ್‌.ಆರ್‌.ಪಾಟೀಲ, ಸತೀಶ್ ಜಾರಕಿಹೊಳಿ, ಚಿತ್ರನಟರಾದ ದರ್ಶನ್‌, ಶಿವರಾಜ್‌ಕುಮಾರ್‌, ರಮ್ಯಾ ಮೊದಲಾದವರನ್ನು ಆಹ್ವಾನಿಸಿದ್ದೇವೆ. ಗೋವಾ, ಬೆಂಗಳೂರು, ಮೈಸೂರು ವಿವಿಧೆಡೆ ಸಿನಿಮಾ ಚಿತ್ರೀಕರಿಸಲು ಉದ್ದೇಶಿಸಲಾಗಿದೆ. ರಾಜೇಶ್‌ ಫರ್ನಾಂಡೀಸ್‌ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.ನಾಯಕಿ ಆಯ್ಕೆ ಅಂತಿಮವಾಗಿಲ್ಲ. ₨ 2 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ. ಸುರೇಶ್‌ ರೇವಣಕರ್‌ ನಿರ್ದೇಶನದ ‘ಉಜ್ವಡ್‌’ ಚಿತ್ರಕ್ಕೆ ₨ 75 ಲಕ್ಷ ವೆಚ್ಚವಾಗಿದೆ. ಇದನ್ನು ‘ಆಸ್ಕರ್‌’ಗೆ ಪ್ರಶಸ್ತಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಗೋವಾದಲ್ಲಿನ ಕೊಂಕಣಿ ಮಾತನಾಡುವವರು ಹಾಗೂ ಕನ್ನಡಿಗರು ಸಹಕಾರ ನೀಡಿದ್ದರಿಂದ ಸಿನಿಮಾ ನಿರ್ಮಾಣ ಸಾಧ್ಯವಾಯಿತು ಎಂದರು.ಚಿತ್ರದ ನಟ, ಭಾರತೀಯ ಯುವ ದಲಿತರ ಸಂಘದ ದೀಪಕ್‌ ಕಟ್ಟಿಮನಿ, ವೀರಯ್ಯ ಗುರುಮಠ್‌, ಗೋವಿಂದರಾಜ್‌ ಹಂಗರಗಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)