28ರಿಂದ ನಗರದಲ್ಲಿ ಅಟ್ಟಕ್ಕಲರಿ ನೃತ್ಯೋತ್ಸವ

7

28ರಿಂದ ನಗರದಲ್ಲಿ ಅಟ್ಟಕ್ಕಲರಿ ನೃತ್ಯೋತ್ಸವ

Published:
Updated:

ಬೆಂಗಳೂರು: ಭಾರತೀಯ ಸಮಕಾಲೀನ ನೃತ್ಯ ಪ್ರಕಾರಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್ ಕೇಂದ್ರವು ಇದೇ 28ರಿಂದ ಫೆಬ್ರುವರಿ 6ರವರೆಗೆ ನಗರದಲ್ಲಿ ‘ಅಟ್ಟಕ್ಕಲರಿ ಇಂಡಿಯಾ ಉತ್ಸವ- 2011’ ನೃತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.‘ಸಮಕಾಲೀನ ನೃತ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ಹಾಗೂ ಹೊಸ ಪ್ರಯೋಗಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಅಟ್ಟಕ್ಕಲರಿ ಇಂಡಿಯಾ ದ್ವೈವಾರ್ಷಿಕ ಉತ್ಸವವನ್ನು ಆಯೋಜಿಸಲಾಗಿದೆ. ಸಾಂಪ್ರದಾಯಿಕ ದೈಹಿಕ ಜ್ಞಾನ, ಆವಿಷ್ಕಾರ ಹಾಗೂ ತಂತ್ರಜ್ಞಾನ ಎಂಬ ಪರಿಕಲ್ಪನೆಯಡಿ ನೃತ್ಯೋತ್ಸವ ನಡೆಯಲಿದೆ’ ಎಂದು ಕೇಂದ್ರದ ಕಲಾ ನಿರ್ದೇಶಕ ಜಯಚಂದ್ರನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಸ್ವಿಟ್ಜರ್‌ಲೆಂಡ್, ನಾರ್ವೆ, ಇರಾಕ್/ ಸ್ವೀಡನ್, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಇಸ್ರೇಲ್, ಜಪಾನ್, ಇಟಲಿ, ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ದೇಶದ ಕಲಾವಿದರು ಸೇರಿದಂತೆ ಒಟ್ಟು 16 ತಂಡಗಳ 150 ಕಲಾವಿದರು ಪ್ರದರ್ಶನ ನೀಡಲಿದ್ದಾರೆ’ ಎಂದು ವಿವರಿಸಿದರು.‘ನಗರದಲ್ಲಿರುವ ರಾಷ್ಟ್ರೀಯ ನವ್ಯ ಕಲಾ ಗ್ಯಾಲರಿಯಲ್ಲಿ ಇದೇ 28ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರದರ್ಶನ ಕಲೆಯನ್ನು ಬಿಂಬಿಸುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಕು, ಧ್ವನಿ, ಸಂಗೀತ, ಸಮರ ಕಲೆ, ಜಾನಪದ, ಶಾಸ್ತ್ರೀಯ ಕಲೆ, ಸಮಕಾಲೀನ ನೃತ್ಯ ಕಲಾ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.‘ಜೆ.ಪಿ.ನಗರದ ರಂಗ ಶಂಕರ (ಪ್ರವೇಶ ದರ ರೂ 200), ವಯ್ಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನ (ರೂ 500, 200, 100) ಹಾಗೂ ಅಲಯನ್ಸ್ ಫ್ರಾಂಚೆ (ರೂ 200) ಸಭಾಂಗಣದಲ್ಲಿ ಪ್ರದರ್ಶನಗಳು ನಡೆಯಲಿವೆ’ ಎಂದರು.ರಾಷ್ಟ್ರೀಯ ನವ್ಯ ಕಲಾ ಗ್ಯಾಲರಿಯ ನಿರ್ದೇಶಕಿ ಶೋಭಾ ನಂಬಿಸನ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ ಸಂಖ್ಯೆ 2212 3684.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry