ಬುಧವಾರ, ಜೂನ್ 16, 2021
22 °C

28 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ: ಕೃಷ್ಣಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆಲ್ಲಲಿದೆ ಎಂದು ಜಾತ್ಯತೀತ ಜನತಾದ ದಳ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ  ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಎಡಪಕ್ಷಗಳು ಕೇಳಿದರೆ ರಾಜ್ಯದಲ್ಲಿ 2-3 ಸ್ಥಾನ ಬಿಟ್ಟು ಕೊಡಲು ಸಿದ್ಧ. ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಇತರೆ ಪಕ್ಷಗಳಿಂದ ಅಭ್ಯರ್ಥಿಗಳು ಬರುತ್ತಿರುವುದರಿಂದ ಪಟ್ಟಿ ಪ್ರಕಟಿಸುವುದು ವಿಳಂಬವಾಗಿದೆ. ಇದೇ 10 ರಂದು 15 ಅಭ್ಯರ್ಥಿಗಳ ಮೊದಲ ಪಟ್ಟಿ  ಬಿಡುಗಡೆ ಮಾಡ­ಲಾಗುವುದು ಎಂದು ತಿಳಿಸಿದರು.ಕೇಂದ್ರದಲ್ಲಿ ತೃತೀಯ ರಂಗ ಚೈತನ್ಯ ಪಡೆದು­ಕೊಳ್ಳು­ತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ನಾಯಕತ್ವ ವಹಿಸಿಕೊಳ್ಳುವಂತೆ ಪ್ರಯತ್ನ ನಡೆ­ಯುತ್ತಿದೆ. ಈ ಬಗ್ಗೆ 13 ಪಕ್ಷಗಳು ಮಾತುಕತೆ ನಡೆಸಿವೆ. ದೇಶದಲ್ಲಿ ಶಾಂತಿ ಸ್ಥಾಪನೆ, ನೀರಾವರಿ ಯೋಜನೆ  ಅನುಷ್ಠಾನ  ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ತೃತೀಯ ರಂಗ ಅವಶ್ಯವಿದೆ ಎಂದ ಅವರು, ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆ ಹರಿಸಲು ಮತ್ತು ಸಂಘಟನೆ ಮಾಡಲು ಉತ್ತರ ಕರ್ನಾಟಕದ 4-5 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಎಂದರು.ನರೇಂದ್ರ ಮೋದಿ ಅವರು ದೇಶದಾದ್ಯಂತ ಪ್ರಚಾರಕ್ಕಾಗಿ ಬಳಸುತ್ತಿರುವ ವಿಶೇಷ ವಿಮಾನ, ಕಾರ್ಯಕ್ರಮಗಳ ಖರ್ಚು ಮತ್ತು ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು ಮೋದಿ ಗಾಳಿಪಟ ಇದ್ದ ಹಾಗೇ, ಜೋರಾಗಿ ಗಾಳಿ ಬೀಸಿದರೆ ಪಟ ಕಿತ್ತುಕೊಂಡು ಹೋಗುತ್ತದೆ  ಎಂದು ವ್ಯಂಗ್ಯವಾಡಿದರು.ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆ ಹತ್ತಿರ ಬಂದಾಗ ಮಾತ್ರ ಪಕ್ಷ  ಸಂಘಟನೆ ಕಾರ್ಯ ಚುರುಕುಗೊಳ್ಳುತ್ತದೆ. ಚುನಾವಣೆ ಮುಗಿದ ನಂತರ ಕಾರ್ಯಕರ್ತರು ನಾಪತ್ತೆಯಾಗುತ್ತಾರೆ. ಎಲೆಕ್ಷನ್ ಸಮಯದಲ್ಲಿ ಕಲೆಕ್ಸನ್‌ಗೆ ಬರುವುದು. ಇದೆಲ್ಲದಕ್ಕೂ  ಕಡಿವಾಣ ಹಾಕಿ ಪಕ್ಷವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಲಾಗುವುದು ಎಂದುಹೇಳಿದರು.  ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ನಾಯ್ಕ, ಉಪಾಧ್ಯಕ್ಷೆ ಅಂಜಲಿ, ಹಿರಿಯರಾದ ಬಿ.ಎಸ್‌.ಹಿರೇಗೌಡರ, ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾಡಲಗೇರಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.