28 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ: ಮುನಿಯಪ್ಪ

7

28 ಕ್ಷೇತ್ರಗಳಲ್ಲಿ ಬಿಎಸ್‌ಪಿ ಸ್ಪರ್ಧೆ: ಮುನಿಯಪ್ಪ

Published:
Updated:

ಗುಲ್ಬರ್ಗ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸ್ಪರ್ಧೆ ಮಾಡಲಿದೆ’ ಎಂದು ಪಕ್ಷ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ತಿಳಿಸಿದರು.‘ಚುನಾವಣೆಯಲ್ಲಿ ಬಿಎಸ್‌ಪಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿ­ಕೊಳ್ಳು­ವುದಿಲ್ಲ. ಪಕ್ಷದ ಸಂಘಟನೆಗಾಗಿ ವಿಭಾಗೀಯ ಮಟ್ಟದಲ್ಲಿ ಪದಾಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದು, ಅವರಿಂದ ಜಿಲ್ಲಾ, ತಾಲ್ಲೂಕು ಹಾಗೂ ಬೂತ್‌ ಮಟ್ಟದಲ್ಲಿ ಕಾಸಿ­ಗಾಗಿ ಓಟು ಮಾರಿಕೊಳ್ಳಬೇಡಿ ಎಂದು ಜನರಲ್ಲಿ ಜಾಗೃತಿ ಮೂಡಿಸ­ಲಾಗು­ವುದು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಈಗಾಗಲೇ ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ಮೈಸೂರು, ಬೆಳಗಾವಿ ವಿಭಾಗ­ಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ತರಬೇತಿ ನೀಡಲಾಗಿದೆ. ಇಂದು (ಜ.8) ಗುಲ್ಬರ್ಗ ವಿಭಾಗದಲ್ಲಿ ಗುಲ್ಬರ್ಗ, ಬೀದರ್, ರಾಯಚೂರು, ವಿಜಾಪುರ ಜಿಲ್ಲೆಗಳ ಕಾರ್ಯ­ಕರ್ತರಿಗೆ ತರಬೇತಿ ನೀಡಲಾಗುವುದು ಎಂದರು.ಬಿಎಸ್‌ಪಿ ರಾಷ್ಟ್ರೀಯ ಘಟಕ ಅಧ್ಯಕ್ಷೆ ಮಾಯಾವತಿ ಅವರ ಜನ್ಮದಿನ ನಿಮಿತ್ತ ಜ.15ರಂದು ಉತ್ತರಪ್ರದೇಶದ ಲಖನೌನಲ್ಲಿ ನಡೆಯಲಿರುವ ಜಾಗೃತಿ ರ್‍್ಯಾಲಿಯಲ್ಲಿ ರಾಜ್ಯದಿಂದ ಸಾವಿರ ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಂದು  ಲೊೋಕ­ಸಭಾ ಚುನಾವಣೆ ಅಭ್ಯರ್ಥಿಗಳ ಹೆಸರು ಘೋಷಿಸಲಾಗುವುದು. ಜ.16ರಂದು ಕಾರ್ಯಕಾರಣಿ ಸಭೆ ನಡೆಯಲಿದೆ ಎಂದು ತಿಳಿಸಿದರು.‘ವಿ.ಬಾಲಸುಬ್ರಮಣ್ಯಂ ವರದಿ ಪ್ರಕಾರ ರಾಜ್ಯದಲ್ಲಿ 12 ಲಕ್ಷ ಎಕರೆ ಭೂ ಒತ್ತು­ವರಿ­ಯಾಗಿದೆ. ಅದರಲ್ಲಿ 7 ಲಕ್ಷ ಎಕರೆ ಭೂಮಿ ಸಕ್ರಮ ಮಾಡುವಂತೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಬಗರ್‌ಹುಕುಂ ಸಕ್ರಮಗೊಳಿಸುವಲ್ಲಿ ಹಿಂದೆ ಇದ್ದ ಬಿಜೆಪಿ ಮತ್ತು ಜೆಡಿ­ಎಸ್ ಸರ್ಕಾರಗಳು ಹಿಂದೇಟು ಹಾಕಿದವು. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೂ ಗಮನ ಹರಿಸುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಬಗರ್‌­ಹುಕುಂ ಸಕ್ರಮ ಸಮಿತಿ ರಚನೆ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ, ಇದು­ವರೆಗೂ ರಚನೆ ಮಾಡಿಲ್ಲ. ಇದು ತಮ್ಮ ಪ್ರಾಬಲ್ಯ ಬಳಸಿ ಒತ್ತುವರಿ ಮಾಡಿ­ಕೊಂಡಿರುವ ಶ್ರೀಮಂತರನ್ನು ಉಳಿಸುವ ಯತ್ನವಾಗಿದೆ ಎಂದು ಆರೋಪಿಸಿದರು.‘ಕಾಂಗ್ರೆಸ್‌ ಪಕ್ಷವು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್‌­ಗಳನ್ನಾಗಿ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೌರ್ಜನ್ಯ ನಡೆದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವ­ರನ್ನು ಜವಾಬ್ದಾರಿಯನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ’ ಎಂದು ಅಪಾದಿಸಿದರು.ಬಗರ್‌ಹುಕುಂ ಸಕ್ರಮಕ್ಕೆ ಒತ್ತಾಯಿಸಿ ಬಿಎಸ್‌ಪಿ ವತಿಯಿಂದ ಕಳೆದ ನವೆಂಬರ್‌ ತಿಂಗಳಲ್ಲಿ ಮೂರು ದಿನ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಜ.30ರಂದು ರಾಜ್ಯದಾದ್ಯಂತ ಎಲ್ಲ ತಾಲ್ಲೂಕು ಕೇಂದ್ರಗಳ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಮುನಿಯಪ್ಪ ಹೇಳಿದರು.ಬಿಎಸ್‌ಪಿ ರಾಜ್ಯ ಘಟಕ ಸಂಚಾಲಕ ಎನ್‌.ಮಹೇಶ, ಜಿಲ್ಲಾ ಘಟಕ ಅಧ್ಯಕ್ಷ ಹಣಮಂತ ಬೋಧನಕರ್‌, ಸೈಯದ್‌ ಖುರ್ಷಿದ್‌ ಹುಸೇನ್‌, ಕೆ.ಬಿ.ವಾಸು, ಹುಚ್ಚೇಶ್ವರ ವಡ್ಡಾರ, ಮತೀನ ಪಟೇಲ್‌, ಮಹಾದೇವ ಬಿ.ಧನ್ನಿ, ಶಿವಲಿಂಗಪ್ಪ ಕಿನ್ನೂರ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry