ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ವರ್ಷಗಳಿಂದ ನಡೆಯದ `ಕೈ'ಚಳಕ!

ಖಾನಾಪುರ, ಹುಕ್ಕೇರಿ, ಬೈಲಹೊಂಗಲ ಕ್ಷೇತ್ರ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ:  `ಸಕ್ಕರೆ ಜಿಲ್ಲೆ' ಬೆಳಗಾವಿಯ ಮೂರು ವಿಧಾನಸಭೆ ಕ್ಷೇತ್ರಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಬಾಯಿ ಸಿಹಿಯಾಗುತ್ತಿಲ್ಲ. 1957ರಿಂದ ಖಾನಾಪುರ ಹಾಗೂ 1985ರಿಂದ ಹುಕ್ಕೇರಿ, ಬೈಲಹೊಂಗಲ ಕ್ಷೇತ್ರಗಳಲ್ಲಿ `ಕೈ'ಚಳಕ ನಡೆಯುತ್ತಿಲ್ಲ!

ಖಾನಾಪುರ ಕ್ಷೇತ್ರದಲ್ಲಿ 1957ರಿಂದ 2004ರ ವರೆಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಅಭ್ಯರ್ಥಿಗಳೇ ಗೆಲ್ಲುತ್ತ ಬಂದಿದ್ದಾರೆ. 2008ರ ಚುನಾವಣೆಯಲ್ಲಿ ಮೊದಲ ಬಾರಿಗೆ `ಕಮಲ' ಅರಳಿತ್ತು. ಹುಕ್ಕೇರಿ ಹಾಗೂ ಬೈಲಹೊಂಗಲ ಕ್ಷೇತ್ರಗಳಲ್ಲಿ ಕಳೆದ 28 ವರ್ಷಗಳಿಂದ ಜನತಾ ಪರಿವಾರ ಹಾಗೂ ಬಿಜೆಪಿ ನಡುವೆ ಅಧಿಕಾರ ವಿನಿಮಯವಾಗುತ್ತಿದ್ದು, ಇದುವರೆಗೂ ಯಾವೊಬ್ಬ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ.

ಖಾನಾಪುರ ಕ್ಷೇತ್ರದಲ್ಲಿ ಆರಂಭದಿಂದಲೂ ಎಂಇಎಸ್ ಪ್ರಾಬಲ್ಯ ಇದೆ. ಇಲ್ಲಿ ನಡೆದ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ ಇದುವರೆಗೆ ಒಬ್ಬರಿಗೂ ಗೆಲುವಿನ ಅವಕಾಶ  ಲಭಿಸಿಲ್ಲ. 2004ರಲ್ಲಿ ಎಂಇಎಸ್ ಬೆಂಬಲಿತ ದಿಗಂಬರ ಪಾಟೀಲ ಆಯ್ಕೆಯಾಗಿದ್ದರು. ಆದರೆ, 2008ರಲ್ಲಿ ಬಿಜೆಪಿಯ ಪ್ರಹ್ಲಾದ್ ರೇಮಾನಿ ಗೆಲ್ಲುವ ಮೂಲಕ ಎಂಇಎಸ್ ಭದ್ರಕೋಟೆಯನ್ನು ಒಡೆದಿದ್ದರು.

ಕಾಂಗ್ರೆಸ್ ಹಿಡಿತದಲ್ಲಿದ್ದ ಹುಕ್ಕೇರಿ ಕ್ಷೇತ್ರದಲ್ಲಿ 1983ರ ಚುನಾವಣೆಯಲ್ಲಿ ಎ.ಬಿ. ದೇಸಾಯಿ ಗೆದ್ದಿದ್ದೇ ಕೊನೆ. ಇದರ ನಂತರದ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಅಧಿಕಾರ ನೀಡಲೇ ಇಲ್ಲ.

1985ರಲ್ಲಿ ಜನತಾ ಪಕ್ಷದಿಂದ ಸಹಕಾರಿ ಧುರೀಣ ವಿಶ್ವನಾಥ ಮಲ್ಲಪ್ಪ ಕತ್ತಿ ಗೆಲ್ಲುವ ಮೂಲಕ ಕಾಂಗ್ರೆಸ್‌ನ ಕೋಟೆಯನ್ನು ಒಡೆದರು. ಅವರ ಅಕಾಲಿಕ ಮರಣದಿಂದಾಗಿ ಅದೇ ವರ್ಷ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಉಮೇಶ ಕತ್ತಿ ಅವರು ಕಾಂಗ್ರೆಸ್‌ನ ಅಭ್ಯರ್ಥಿ ಎಸ್.ಎಸ್. ಮಹಾಜನಶೆಟ್ಟಿ ಅವರನ್ನು ಸೋಲಿಸಿ ವಿಧಾನಸೌಧದ ಮೆಟ್ಟಲೇರಿದರು. ಇಲ್ಲಿಂದ ಈ ಕ್ಷೇತ್ರವು `ಕತ್ತಿ' ಕುಟುಂಬದ ಹಿಡಿತಕ್ಕೆ ಬಂತು.

ಉಮೇಶ ಕತ್ತಿ ಅವರು ಜನತಾ ದಳದಿಂದ 1989 ಹಾಗೂ 1994ರಲ್ಲಿ, ಜೆಡಿಯುನಿಂದ 1999ರಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಉಮೇಶ ಕತ್ತಿ ಅವರನ್ನು ಬಿಜೆಪಿಯ ಶಶಿಕಾಂತ ನಾಯಿಕ ಸೋಲಿಸಿದರು. ಕ್ಷೇತ್ರದಲ್ಲಿ `ಕಾಂಗ್ರೆಸ್ ವಿರೋಧಿ ಅಲೆ' ಇರುವುದನ್ನು ಅರಿತ ಉಮೇಶ ಕತ್ತಿ, 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ, `ಆಪರೇಶನ್ ಕಮಲ'ದ ಮೂಲಕ ಬಿಜೆಪಿ ಸೇರಿ 2008ರ ಉಪ ಚುನಾವಣೆಯಲ್ಲಿ ಪುನರಾಯ್ಕೆಯಾದರು.

ಬೈಲಹೊಂಗಲ ಕ್ಷೇತ್ರವು 1967ರಿಂದ 1983ರ ವರೆಗೂ ಕಾಂಗ್ರೆಸ್ ಹಿಡಿತದಲ್ಲಿತ್ತು. 1983ರಲ್ಲಿ ಕಾಂಗ್ರೆಸ್‌ನ ಆರ್.ಸಿ. ಬಾಳೇಕುಂದರಗಿ ಗೆದ್ದಿದ್ದೇ ಕೊನೆ. 1985ರಲ್ಲಿ ಜನತಾ ಪಕ್ಷದಿಂದ ಶಿವಾನಂದ ಕೌಜಲಗಿ ಆಯ್ಕೆಯಾದರು. 1989 ಹಾಗೂ 1994ರಲ್ಲಿ ಜನತಾ ದಳದಿಂದ ಶಿವಾನಂದ ಕೌಜಲಗಿ ಗೆಲ್ಲುವ ಮೂಲಕ ಕಾಂಗ್ರೆಸ್ ಮೂಲೆಗುಂಪು ಮಾಡಿದರು. 1999ರಲ್ಲಿ ಜೆಡಿಯುನ ಮಹಾಂತೇಶ ಶಿವಾನಂದ ಕೌಜಲಗಿ ಗೆದ್ದಿದ್ದರೆ, 2004 ಹಾಗೂ 2008ರಲ್ಲಿ ಬಿಜೆಪಿಯ ಜಗದೀಶ ಮೆಟಗುಡ್ಡ ಆಯ್ಕೆಯಾಗಿದ್ದಾರೆ.

ಮೂರು ದಶಕಗಳಿಂದಲೂ ಕಾಂಗ್ರೆಸ್ `ವಿರೋಧಿ ಅಲೆ' ಕಂಡು ಬರುತ್ತಿರುವ ಖಾನಾಪುರ, ಹುಕ್ಕೇರಿ ಹಾಗೂ ಬೈಲಹೊಂಗಲ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ `ಭವಿಷ್ಯ' ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT