289 ಜಿಲ್ಲೆಗಳಿಗೆ ಎಲ್‌ಪಿಜಿ ಸಬ್ಸಿಡಿ ಯೋಜನೆ

7
ಉಡುಪಿ, ಬೆಂಗಳೂರು, ಬೆಳಗಾವಿ, ಉತ್ತರ ಕನ್ನಡ ಸೇರ್ಪಡೆ

289 ಜಿಲ್ಲೆಗಳಿಗೆ ಎಲ್‌ಪಿಜಿ ಸಬ್ಸಿಡಿ ಯೋಜನೆ

Published:
Updated:

ನವದೆಹಲಿ (ಪಿಟಿಐ): ಅಡುಗೆ ಅನಿಲ (ಎಲ್‌ಪಿಜಿ) ಗೃಹ ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹಣ ಪಾವತಿಸುವ ಮಹತ್ವಾಕಾಂಕ್ಷೆಯ ಕ್ರಿಯಾ ಯೋಜನೆಗೆ ದೊರೆತ ಉತ್ತಮ ಪ್ರತಿಕ್ರಿಯೆ ಮತ್ತು ಯಶಸ್ಸಿನಿಂದ ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರ, ದೇಶದ ಇನ್ನಿತರ 289 ಜಿಲ್ಲೆಗಳಿಗೂ ಮುಂದಿನ ವರ್ಷಾರಂಭದಲ್ಲಿ ಈ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ.14.5 ಕೆ.ಜಿ ಗೃಹೋಪಯೋಗಿ ಎಲ್‌ಪಿಜಿ ಖರೀದಿಸಿದ ತಕ್ಷಣವೇ ಆಧಾರ್ ಸಂಪರ್ಕಿತ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ 435 ರೂಪಾಯಿ ಸಬ್ಸಿಡಿ ಹಣ ಪಾವತಿಯಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ ಒಂಬತ್ತು ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿಯನ್ನು ನಿಗದಿ ಪಡಿಸಲಾಗಿದೆ.ಸದ್ಯ 20 ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ನೇರ ಸಬ್ಸಿಡಿ ಹಣ ವರ್ಗಾವಣೆ ಯೋಜನೆ ಜಾರಿಯಲ್ಲಿದ್ದು ಹೊಸದಾಗಿ 289 ಜಿಲ್ಲೆಗಳಿಗೆ ವಿಸ್ತರಿಸುವ ಯೋಚನೆ ಸರ್ಕಾರಕ್ಕಿದೆ. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ, ಪಶ್ಚಿಮ ಗೋವಾ, ಹಿಮಾಚಲ ಪ್ರದೇಶದ ಶೀಮ್ಲಾ, ಕೇರಳದ ಕೊಟ್ಟಾಯಂ, ಮಧ್ಯ ಪ್ರದೇಶದ ಹೋಶಾಂಗ್‌ಬಾದ್, ಮಹಾರಾಷ್ಟ್ರದ ಅಮರಾವತಿ ಮತ್ತು ಪಂಜಾಬ್‌ನ ಲುಧಿಯಾನಾ ಜಿಲ್ಲೆಗಳು ಹೊಸ ಯೋಜನೆಯ ಲಾಭ ಪಡೆಯಲಿವೆ.ಬ್ಯಾಂಕ್ ಖಾತೆ ಜೊತೆ ಆಧಾರ್ ಮತ್ತು ಎಲ್‌ಪಿಜಿ ಗ್ರಾಹಕರ ಸಂಖ್ಯೆಗಳ ಸಂಪರ್ಕ ಕಲ್ಪಿಸಲು ಹೆಚ್ಚುವರಿಯಾಗಿ ಮೂರು ತಿಂಗಳ ಅವಧಿ ನೀಡಲಾಗಿದೆ. ಈ ಗಡುವು ಮುಗಿದ ನಂತರವೂ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆ ಜೊತೆಗೆ ಸಂಪರ್ಕ ಕಲ್ಪಿಸಿದರೂ ಬಾಕಿ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದು.ಜನವರಿ ವೇಳೆಗೆ ಬಹುತೇಕ ರಾಜ್ಯಗಳ ರಾಜಧಾನಿಗಳು ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಇದರಿಂದಾಗಿ ಒಟ್ಟು ಎಲ್‌ಪಿಜಿ ಗ್ರಾಹಕರ ಅರ್ಧದಷ್ಟು ಗ್ರಾಹಕರು (14 ಕೋಟಿ) ಇದರ ಲಾಭ ಪಡೆಯಲಿದ್ದಾರೆ. ಪ್ರತಿವರ್ಷ 27 ಕೋಟಿ  ರೂಪಾಯಿ ಹಣವನ್ನು ಇದಕ್ಕಾಗಿ ವಿನಿಯೋಗಿಸಲಾಗುತ್ತದೆ.ಹಂತ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಮುಂದಿನ ತಿಂಗಳು ಕರ್ನಾಟಕದ ಉಡುಪಿ ಸೇರಿದಂತೆ 44 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಆರನೇ ಹಂತದಲ್ಲಿ ಉತ್ತರ ಕನ್ನಡ ಸೇರಿದಂತೆ 46 ಜಿಲ್ಲೆ, ಡಿಸೆಂಬರ್‌ನಲ್ಲಿ ಬೆಂಗಳೂರು ಸೇರಿದಂತೆ 40 ಜಿಲ್ಲೆ ಹಾಗೂ  ಜನವರಿ ಒಂದರಂದು ಕೊನೆಯ ಹಂತದಲ್ಲಿ ಬೆಳಗಾವಿ ಸೇರಿದಂತೆ 105 ಜಿಲ್ಲೆಗಳು ಯೋಜನೆಗೆ ಸೇರ್ಪಡೆಗೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry