ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ಕ್ಕೆ ಜೆಡಿಎಸ್ ಪರಿಶಿಷ್ಟ ಪಂಗಡದ ಸಮಾವೇಶ

Last Updated 1 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಅ. 28ರಂದು ಜಾತ್ಯತೀತ ಜನತಾದಳದ ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಅಧ್ಯಕ್ಷ ಅನಂತಯ್ಯ ತಿಳಿಸಿದರು.

ಪಕ್ಷದ ಬಲವರ್ಧನೆಗಾಗಿ ಹಾಗೂ ಸಂಘಟನಾ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮಸ್ಲಿಂ ಹಾಗೂ ತುಮಕೂರಿನಲ್ಲಿ ಪರಿಶಿಷ್ಟ ಜಾತಿಯ ಸಮಾವೇಶ ನಡೆಸಲಾಗಿದೆ. ಅದೇ ರೀತಿ ರಾಜ್ಯದ ನಾನಾ ಕಡೆಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾರ್ಗದರ್ಶನದಲ್ಲಿ ಪೂರ್ವಭಾವಿ ಸಿದ್ಧತೆಗಳು ನಡೆಯಲಿವೆ. ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಸಮಾವೇಶದ ನೇತೃತ್ವ ವಹಿಸಲಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪರಿಶಿಷ್ಟ ಪಂಗಡದ 15 ಮಂದಿಗೆ ಹಾಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಇಬ್ಬರಿಗೆ ಟಿಕೆಟ್ ನೀಡುವ ಬಗ್ಗೆ ಸಮಾವೇಶದಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಜೆಡಿಎಸ್ ಅಂಗವಿಕಲ ಘಟಕದ ಅಧ್ಯಕ್ಷ ಬಸವಣ್ಣಯ್ಯ ಮಾತನಾಡಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಅ. 7ರಂದು ಅಂಗವಿಕಲ ಸಮಾವೇಶವನ್ನು ಮಾನವೀಯತೆಯ ಮಹಾಮೇಳವಾಗಿ ಮಾಡಲು ತೀರ್ಮಾನಿಸಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜೆಡಿಎಸ್ ವತಿಯಿಂದ ಅಂಗವಿಕಲ ಘಟಕ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂಗವಿಕಲರ ಮಾಸಾಶನ ರೂ. 200 ರಿಂದ ರೂ. 400ಕ್ಕೆ ಹೆಚ್ಚಿಸಿದರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ಮೇಲೆ ಈಚೆಗೆ ಭೌತಿಕ ಪರಿಶೀಲನೆ ಹೆಸರಿನಲ್ಲಿ ಈ ಯೋಜನೆ ಕಿತ್ತು ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿದರು.

ತಕ್ಷಣ ಸರ್ಕಾರ ಯಾವ ಅವಧಿಯಿಂದ ಮಾಸಾಶನ ರದ್ದು ಮಾಡಿದೆಯೋ ಅಲ್ಲಿಂದ ಸಂಪೂರ್ಣ ಮಾಸಾಶನ ನೀಡಬೇಕು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಂಗವಿಕಲರ ಮಾಸಾಶನವನ್ನು ಪ್ರತಿ ತಿಂಗಳು ರೂ. 2,500ಕ್ಕೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಜೆಡಿಎಸ್ ನೇಕಾರರ ರಾಜ್ಯ ಘಟಕದ ಅಧ್ಯಕ್ಷ ಶ್ರಿನಿವಾಸ್, ಶಾಸಕ ಎಸ್.ಕೆ. ಬಸವರಾಜನ್, ಮುಖಂಡ ಜಯಣ್ಣ ಹಾಜರಿದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT