ಸೋಮವಾರ, ಜನವರಿ 20, 2020
21 °C

29ರಂದು ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆಗೆ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಹೊಸದುರ್ಗ ಪಟ್ಟಣದಲ್ಲಿ ಇದೇ ಡಿ.೨೯ರಂದು ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಮುಖ್ಯ ಕಾಲುವೆಯ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ತಿಳಿಸಿದರು.ಅಂದು ಹೊಸದುರ್ಗ ಪಟ್ಟಣದಲ್ಲಿ ದೇವಾಂಗ ಸಮಾಜ ಹಮ್ಮಿಕೊಂಡಿರುವ ಸಮಾವೇಶದಲ್ಲಿಯೂ ಸಿಎಂ ಭಾಗವಹಿಸಲಿದ್ದಾರೆ ಎಂದು ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಇದೇ ಡಿ.೨೫ರಂದು ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ತಂಡ

ಭೇಟಿ ನೀಡಲಿದೆ. ಅಲ್ಲದೆ ಈ ತಂಡದಲ್ಲಿರುವ ನೀರಾವರಿ ತಜ್ಞರು, ಭದ್ರಾ ಮೇಲ್ದಂಡೆ ಹೋರಾಟಗಾರರು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು ಅಂದು ವೀಕ್ಷಣೆಗೆ ಆಗಮಿಸಲಿದ್ದಾರೆ. ಕಾಮಗಾರಿ ನಡೆಯುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ ಪುರ, ತರೀಕೆರೆ ಇತರ ತಾಲ್ಲೂಕುಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುತ್ತದೆ ಎಂದು ತಿಳಿಸಿದರು.ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಅವಧಿಯೊಳಗೆ ಪೂರ್ಣಗೊಳಿಸಿ ಬರಪೀಡಿತ ಜಿಲ್ಲೆಯ ರೈತರ ಸಂಕಷ್ಟಗಳನ್ನು ದೂರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬಯಲು ಸೀಮೆ ಹಾಗೂ ಹಿಂದುಳಿದ ಜಿಲ್ಲೆಗಳ ರೈತರ ಸಮಸ್ಯೆಗಳಿಗೆ ಭದ್ರಾ ನೀರು ಪರಿಹಾರವಾಗಿದ್ದು, ಶೀಘ್ರ ಕಾಲುವೆಯ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದರು.ಜಿ.ಪಂ. ಹಗರಣ ತನಿಖೆ: ಜಿಲ್ಲಾ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಎಲ್ಲ ಹಗರಣಗಳನ್ನು ತನಿಖೆಗೆ ಒಳ ಪಡಿಸಲಾಗುತ್ತದೆ. ಭ್ರಷ್ಟ ಅಧಿಕಾರಿ ಗಳನ್ನು ಕ್ಷಮಿಸುವುದಿಲ್ಲ. ತಪ್ಪು ಮಾಡಿದ ಅಧಿಕಾರಿಗೆ ಶಿಕ್ಷೆ ನೀಡಲಾಗುತ್ತದೆ. ಕುಡಿಯುವ ನೀರು ಪೂರೈಕೆ ಯೋಜನೆ, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆಯಿಂದ ಸರ್ಕಾರಿ ಹಾಸ್ಟೆಲ್‌ಗಳಿಗೆ ಪೂರೈಸಲಾಗಿರುವ ಸೋಲಾರ್ ವಾಟರ್ ಹೀಟರ್ ಹಗರಣ ಸೇರಿದಂತೆ ಇತರ ಎಲ್ಲ ಹಗರಣಗಳನ್ನು ತನಿಖೆಗೆ ವಹಿಸಲಾಗುತ್ತದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎ.ಸೇತೂರಾಂ, ಭದ್ರಾ ಮೇಲ್ದಂಡೆ ಯೋಜನೆ ಅಭಿಯಂತರ ಸತೀಶ್, ಕಾಂಗ್ರೆಸ್ ಮುಖಂಡ ಬಿ.ಎ.ಲಿಂಗಾರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)