ಶನಿವಾರ, ಮೇ 8, 2021
26 °C

29ರಿಂದ ಶರಣ ಸಂಸ್ಕೃತಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಐತಿಹಾಸಿಕ ನಗರ ಚಿತ್ರದುರ್ಗದ ಮುರುಘಾಮಠದಲ್ಲಿ ಇದೇ 29ರಿಂದ ಅಕ್ಟೋಬರ್ 8ರವರೆಗೆ ಶರಣ ಸಂಸ್ಕೃತಿ ಉತ್ಸವ- 2011 ನಡೆಯಲಿದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಾ. ಶಿವಮೂರ್ತಿ ಮುರುಘಾಶರಣರ ಅಧ್ಯಕ್ಷತೆಯಲ್ಲಿ ನಡೆಯುವ ಉತ್ಸವದಲ್ಲಿ ಜಮುರಾ ಕ್ರೀಡಾಕೂಟ, ವಿವಿಧ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಬಸವತತ್ತ್ವ ಸಮಾವೇಶ, ಸಂಗೀತ ಸಮಾವೇಶ, ಮಕ್ಕಳ ಸಮಾವೇಶ, ಜಾನಪದ ಕಲಾಮೇಳ ಏರ್ಪಡಿಸಲಾಗಿದೆ ಎಂದರು.“ಈ ಜಗತ್ತಿನಲ್ಲಿ ಮಾನವ ಮಹಾಶಕ್ತಿಯಾಗಲು ಹಣ, ಅಧಿಕಾರ, ಅಂತಸ್ತುಗಳೇ ಮುಖ್ಯವಲ್ಲ; ಅದಕ್ಕೆ ಬೇಕಾಗಿರುವುದು ಆರೋಗ್ಯಪೂರ್ಣ ಹೃದಯ. ನಾಚಿಕೆ, ದ್ವೇಷ, ಅಸೂಯೆ, ಅವಮಾನ ಇತ್ಯಾದಿಗಳು ಶರೀರವನ್ನು ಸುಕ್ಕುಗಟ್ಟುವಂತೆ ಮಾಡುತ್ತವೆ. ಇಂಥವುಗಳಿಂದ ಹೊರಬರುವ ವಿಧಾನವನ್ನು ತಿಳಿಸಲು ಅರ್ಥಪೂರ್ಣ ಚಿಂತನೆಗಳೊಂದಿಗೆ ಧ್ಯಾನದ ಪ್ರಾತ್ಯಕ್ಷಿಕೆಯನ್ನು ಡಾ. ಶಿವಮೂರ್ತಿ ಮುರುಘಾ ಶರಣರು ನಡೆಸಿಕೊಡಲಿದ್ದಾರೆ. ಆತಂಕದ ಅವಾಂತರ, ಅವಮಾನಕ್ಕೆ ಆಮಂತ್ರಣ ಏಕೆ? ಸಹನೆಯ ಸಾಧನೆ, ಸಹೃದಯದ ಅನಾವರಣ ಹಾಗೂ ನೀವು ನೂರ್ಕಾಲ ಬದುಕಬೇಕೇ? ಎಂಬ ವಿಷಯಗಳ ಬಗ್ಗೆ ಶ್ರೀಗಳು ಚಿಂತನೆ ನಡೆಸಿಕೊಡಲಿದ್ದಾರೆ” ಎಂದು ಸ್ವಾಮೀಜಿ ವಿವರಿಸಿದರು.ಉತ್ಸವದ ಅಂಗವಾಗಿ ಕೃಷಿಮೇಳ, ಕೈಗಾರಿಕಾ ಮೇಳ, ಮಹಿಳಾ ಸಮಾವೇಶ, ವಚನ ಕಮ್ಮಟ ಪರೀಕ್ಷೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಅ. 6ರಂದು ಬೆಳಿಗ್ಗೆ ಉತ್ಸವ ಹಾಗೂ ಜಾನಪದ ಕಲಾಮೇಳ ಆಯೋಜಿಸಲಾಗಿದೆ. ಅ. 7ರಂದು ಬೆಳಿಗ್ಗೆ ಮುರುಘಾ ಶರಣರ ಶೂನ್ಯಪೀಠಾರೋಹಣ, ಮಧ್ಯಾಹ್ನ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, ಜಂಗಿ ಕುಸ್ತಿ ಹಾಗೂ ಸಂಜೆ ಸಂಗೀತ ಸಂಭ್ರಮ ಜರುಗುವುದು. ಅ. 8ರಂದು ಹೊಳಲ್ಕೆರೆ ಒಂಟಿಕಂಬ ಮುರುಘಾ ಮಠದಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳ 18ನೇ ಸ್ಮರಣೋತ್ಸವ ಏರ್ಪಡಿಸಲಾಗಿದೆ ಎಂದು ಬಸವಪ್ರಭು ಸ್ವಾಮೀಜಿ ಹೇಳಿದರು.ಮಠಾಧೀಶರು, ಪ್ರಗತಿಪರ ಚಿಂತಕರು, ಸಾಹಿತಿಗಳು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದು ಉತ್ಸವಕ್ಕೆ ಬರುವ ಎಲ್ಲ ಆಸಕ್ತರಿಗೆ ಊಟ ಹಾಗೂ ವಸತಿ ಕಲ್ಪಿಸಲಾಗಿದೆ ಎಂದು ಹೇಳಿದ ಸ್ವಾಮೀಜಿ, ಹೈದರಾಬಾದ್ ಕರ್ನಾಟಕ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಬಸವ ಮಹಾಂತ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.