ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29 ರಿಂದ ದಲಿತ ಸಾಹಿತ್ಯ ಸಮ್ಮೇಳನ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬೆಳಗಾವಿ: ದಲಿತ- ಬಂಡಾಯ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರ ಅಧ್ಯಕ್ಷತೆಯಲ್ಲಿ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಇಲ್ಲಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಡಿಸೆಂಬರ್ 29 ಹಾಗೂ 30ರಂದು ನಡೆಯಲಿದೆ.

`ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಬೇರೆ ರಾಜ್ಯಗಳಿಂದ ದಲಿತ ಸಾಹಿತ್ಯ, ಸಂಸ್ಕೃತಿ, ಸಂಘಟನೆಯ ಚಿಂತನೆಯಲ್ಲಿ ತೊಡಗಿಕೊಂಡ ಸಾವಿರಾರು ಜನರು, ಬುದ್ಧ-ಬಸವ- ಅಂಬೇಡ್ಕರ್, ಲೋಹಿಯಾ ಚಿಂತನೆಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು' ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹಾಗೂ ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ, ಚಳವಳಿ ಕುರಿತು ಎರಡು ಉಪನ್ಯಾಸಗಳು, ಮರಾಠಿ ದಲಿತ ಸಾಹಿತ್ಯ, ಹಾಗೂ ದಲಿತ ವಿದ್ಯಾರ್ಥಿಗಳ ಶಿಕ್ಷಣ-ಉದ್ಯೋಗ ಕುರಿತು ಮೂರು ವಿಶೇಷ ಉಪನ್ಯಾಸಗಳು ನಡೆಯಲಿವೆ. 

ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕಾವ್ಯ-ಕುಂಚ-ಗೀತ ಗಾಯನ, ಬಹುಭಾಷಾ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಹಾಗೂ ಕಲೆ, ಪುಸ್ತಕ ಪ್ರದರ್ಶನ, ಮಾರಾಟ ವ್ಯವಸ್ಥೆ  ಮಾಡಲಾಗುವುದು. ರಾಜ್ಯದ ಎಲ್ಲ ದಲಿತ ಸಂಘಟನೆಗಳು ದಲಿತ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ನೀಡಿವೆ' ಎಂದು ತಿಳಿಸಿದರು.

ಗೌರವ ಪ್ರಶಸ್ತಿ: `ದಲಿತ ಸಾಹಿತ್ಯ ಪರಿಷತ್ತು ನೀಡುವ `ಗೌರವ ಪ್ರಶಸ್ತಿ'ಗೆ ಚಿತ್ರದುರ್ಗದ ಸಾಹಿತಿ ಡಾ. ಯಲ್ಲಪ್ಪ ಕೆಕೆಪುರ ಹಾಗೂ ಧಾರವಾಡದ ಕವಯಿತ್ರಿ ಬಿ. ಸುಕನ್ಯಾ ಅವರನ್ನು ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ `ಬ್ರಹದ್ದೇಶಿ ಪ್ರಶಸ್ತಿಗೆ' ಮೈಸೂರಿನ ಸಂಗೀತ ವಿಶ್ವ ವಿದ್ಯಾಲಯದ ಕುಲಪತಿ ಡಾ. ಹನುಮಣ್ಣ ನಾಯಕ, `ದಲಿತ ಚೇತನ' ಪ್ರಶಸ್ತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಅವರನ್ನು ಆಯ್ಕೆ ಮಾಡಲಾಗಿದೆ.

`ದಲಿತ ಸಿರಿ' ಪ್ರಶಸ್ತಿಗೆ `ಪೃಥ್ವಿ' ಪತ್ರಿಕೆಯ ಸಂಪಾದಕ ಹನುಮಂತ ಬಾಗೇವಾಡಿ ಹಾಗೂ `ದಲಿತ ಕಲಾ ಸಿರಿ' ಪ್ರಶಸ್ತಿಗೆ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ 2010-11ನೇ ಸಾಲಿನ ದಲಿತ ಸಾಹಿತ್ಯದ 13 ಪ್ರಕಾರಗಳಲ್ಲಿ ಆಯ್ಕೆಯಾದ ಪುಸ್ತಕ ಪ್ರಶಸ್ತಿಯನ್ನೂ  ಪ್ರದಾನ ಮಾಡಲಾಗುವುದು' ಎಂದು ಹೇಳಿದರು.

ಸಮ್ಮೇಳನವನ್ನು ಮರಾಠಿಯ ಖ್ಯಾತ ದಲಿತ ಸಾಹಿತಿ ಉತ್ತಮ ಕಾಂಬಳೆ ಉದ್ಘಾಟಿಸಲಿದ್ದಾರೆ.
ಸಾಹಿತಿ ಕುಂ. ವೀರಭದ್ರಪ್ಪ ಅವರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರು. ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT