ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2900 ಉಪನ್ಯಾಸಕರ ನೇಮಕಕ್ಕೆ ಸಿಇಟಿ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ 2,900ಕ್ಕೂ ಹೆಚ್ಚು ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಮಂಗಳವಾರ ಇಲ್ಲಿ ತಿಳಿಸಿದರು.

ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಿಸಬೇಕಾಗಿದೆ. ಅವುಗಳನ್ನು ಬದಲಿಸಿದ ನಂತರ ಸಾಮಾನ್ಯ ಪ್ರವೇಶ ಪರೀಕ್ಷೆ  ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ಈ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸುವುದಾಗಿ ಹೇಳಿದರು.

ಮಂಜೂರಾದ 900 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲದೆ, ಇನ್ನೂ ಸುಮಾರು 2 ಸಾವಿರ ಉಪನ್ಯಾಸಕರು ಅಗತ್ಯ ಇದ್ದು, ಹಂತ ಹಂತವಾಗಿ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.

ವಿಚಾರಣಾ ಸಮಿತಿ: ಹೊಸ ಕಾಲೇಜುಗಳಿಗೆ ಮಾನ್ಯತೆ ನೀಡುವುದಕ್ಕೂ ಮುನ್ನ ಅವುಗಳ ಜಾಗಕ್ಕೆ ಖುದ್ದು ಭೇಟಿ ನೀಡಿ, ಮೂಲಸೌಲಭ್ಯಗಳ ಬಗ್ಗೆ ಪರಿಶೀಲಿಸುವ ಸ್ಥಳೀಯ ವಿಚಾರಣಾ ಸಮಿತಿಗಳಿಗೆ ಉನ್ನತ ಶ್ರೇಣಿಯ ಶಿಕ್ಷಣ ತಜ್ಞರನ್ನು ಮಾತ್ರ ಸದಸ್ಯರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ತಜ್ಞರನ್ನು ಹೊರತುಪಡಿಸಿ ಬೇರೆ ಯಾರೂ ಇರುವುದಿಲ್ಲ ಎಂದರು.

ರಾಜ್ಯದ 17 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಶೈಕ್ಷಣಿಕ ದಿನಚರಿಯನ್ನು ಜಾರಿಗೆ ತರಲು ನಿರ್ಧರಿಸಿದ್ದು, ಈ ಕುರಿತು ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೂ ಚರ್ಚಿಸಲಾಗಿದೆ. ಇದರಿಂದ ಬೇರೆ ವಿಶ್ವವಿದ್ಯಾಲಯದಲ್ಲಿ ಓದಬೇಕೆನ್ನುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಪರಿಶೀಲಿಸಿ, ವರದಿ ನೀಡಲು ಕುಲಪತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ `ಇನೊವೇಷನ್ ಕ್ಲಬ್' ಸ್ಥಾಪಿಸಲಾಗುವುದು. ವಿದ್ಯಾರ್ಥಿಗಳು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ನೆರವಾಗಲಿದೆ. ಇದನ್ನು ಇತರ ಕಾಲೇಜುಗಳಲ್ಲಿಯೂ ಜಾರಿ ಮಾಡಲಾಗುವುದು ಎಂದರು.

ಬಯೊಮೆಟ್ರಿಕ್: ಸರ್ಕಾರದ ಎಲ್ಲ ಪದವಿ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಸೆಂಬರ್ ಒಳಗೆ ಬಯೊಮೆಟ್ರಿಕ್ ಅಳವಡಿಸಲಾಗುವುದು. ಉಪನ್ಯಾಸಕರು ಮತ್ತು ಸಿಬ್ಬಂದಿಯ ಹಾಜರಾತಿ ಮೇಲೆ ನಿಗಾ ಇಡಲು ಈ ವ್ಯವಸ್ಥೆ ಜಾರಿ ಮಾಡುತ್ತಿರುವುದಾಗಿ ವಿವರಿಸಿದರು.

ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ ಜಾದವ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸತ್ಯವತಿ ಹಾಜರಿದ್ದರು.

ಮೋಹನದಾಸ್ ಪೈ ನೇತೃತ್ವದಲ್ಲಿ ವಿಜನ್ ಗ್ರೂಪ್
ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಲಹೆ ನೀಡಲು, ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಟಿ.ವಿ.ಮೋಹನದಾಸ ಪೈ ನೇತೃತ್ವದಲ್ಲಿ ವಿಜನ್ ಗ್ರೂಪ್ ರಚಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಯಾವ ರೀತಿಯ ತಾಣಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದೆ? ಯಾವ ತಾಣಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು? ಅಂತಹ ಸ್ಥಳಗಳಿಗೆ ಹೋಗಿ- ಬರುವುದಕ್ಕೆ ಇರುವ ಮೂಲಸೌಲಭ್ಯ ಇತ್ಯಾದಿ ಅಂಶಗಳ ಬಗ್ಗೆ ಪೈ ನೇತೃತ್ವದ ತಂಡ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡಲಿದೆ ಎಂದು ಅವರು ವಿವರಿಸಿದರು.ಪೈ ನೇತೃತ್ವದ ತಂಡ ರಚನೆ ಸಂಬಂಧ ಒಂದೆರಡು ದಿನಗಳಲ್ಲಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದೂ ಅವರು ಹೇಳಿದರು. ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗೂ ಒತ್ತು ನೀಡಲಾಗುವುದು ಎಂದರು.

2014ಕ್ಕೆ ಈಗಿರುವ ಪ್ರವಾಸೋದ್ಯಮ ನೀತಿಯ ಅವಧಿ ಮುಗಿಯಲಿದೆ. ಹೀಗಾಗಿ ಮುಂದಿನ ವರ್ಷ ಹೊಸ ಪ್ರವಾಸೋದ್ಯಮ ನೀತಿ ಜಾರಿಗೊಳಿಸಲಾಗುವುದು. ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳು ಇದ್ದು, ಆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಎಲ್ಲೆಲ್ಲಿ ಅಭಿವೃದ್ಧಿ ಮಾಡಬಹುದು ಎಂಬುದರ ವಿವರಗಳನ್ನೂ ವರದಿಯಲ್ಲಿ ತಿಳಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT