ಸೋಮವಾರ, ಅಕ್ಟೋಬರ್ 21, 2019
23 °C

297 ಹಳ್ಳಿಗಳಿಗೆ ನೀರು: ಸಂಪುಟ ಸಭೆ ಅಸ್ತು

Published:
Updated:

ಚಾಮರಾಜನಗರ: ಗುಂಡ್ಲುಪೇಟೆ ಮತ್ತು ಚಾಮರಾಜ ನಗರ ತಾಲ್ಲೂಕಿನ ಒಟ್ಟು 297 ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ 261.5 ಕೋಟಿ ರೂ ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಚಾಮರಾಜನಗರ ತಾಲ್ಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಈ ಯೋಜನೆ ರೂಪಿಸಲಾಗಿದೆ. ಉನ್ನತಮಟ್ಟದ ತಾಂತ್ರಿಕ ಸಮಿತಿಯು ಯೋಜನೆ ಜಾರಿಗೆ ಅಂಕಿತ ಹಾಕಿತ್ತು. ಈ ಸಮಿತಿಯ ಅನುಮೋದನೆ ಮೇರೆಗೆ ಸಚಿವ ಸಂಪುಟ ಸಭೆ ಯೋಜನೆ ಜಾರಿಗೆ ಒಪ್ಪಿಗೆ ನೀಡಿದೆ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಚಾಮರಾಜನಗರ ತಾಲ್ಲೂಕಿಗೆ 145.50 ಕೋಟಿ ರೂ ಹಾಗೂ ಗುಂಡ್ಲುಪೇಟೆ ತಾಲ್ಲೂಕಿಗೆ 115.55 ಕೋಟಿ ರೂ ವೆಚ್ಚ ಮಾಡಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 2005-06ನೇ ಸಾಲಿನಡಿ ರಾಜ್ಯ ಸರ್ಕಾರದ ಸೂಚನೆ ಅನ್ವಯ ಯೋಜನೆಯ ನೀಲನಕ್ಷೆ ತಯಾರಿಸಲು ಜೆಎಸ್‌ಎಸ್ ಕನ್ಸಲ್ಟೆನ್ಸಿಗೆ ನೀಡಲಾಗಿತ್ತು ಎಂದರು.ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡರೆ ನೀರಾವರಿ ಪ್ರದೇಶ ಇಲ್ಲದ ಗ್ರಾಮಗಳಿಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ. ತ್ವರಿತವಾಗಿ ಅನುದಾನ ಬಿಡುಗಡೆ ಗೊಳಿಸಿ ಕಾಮಗಾರಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಪುರಸಭೆಯ ಸಭೆಯಲ್ಲಿ ಈ ಯೋಜನೆ ಬಗ್ಗೆ ಚರ್ಚೆಯಾಗಬೇಕು. ಆದರೆ, ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದ ಅವರು, ಅರಿಸಿನ ಬೆಲೆ ಕುಸಿತದಿಂದ ಜಿಲ್ಲೆಯ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಕನಿಷ್ಠ 6ರಿಂದ 8 ಸಾವಿರ ರೂ ಬೆಂಬಲ ಬೆಲೆ ನಿಗದಿಗೆ ಸರ್ಕಾರ ಮುಂದಾಗಬೇಕು. ಇದಕ್ಕೂ ಮೊದಲು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿ.ಪಿ. ಪುಟ್ಟಬುದ್ಧಿ, ಎಂ. ರಾಮಚಂದ್ರ, ಪದ್ಮಾ ಚಂದ್ರು, ಬಿ.ಕೆ. ರವಿಕುಮಾರ್ ಇತರರು ಹಾಜರಿದ್ದರು.

Post Comments (+)