ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ಕ್ಕೆ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಶ್ರೀನಿವಾಸನ್
Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ/ ಐಎಎನ್‌ಎಸ್): ಎನ್. ಶ್ರೀನಿವಾಸನ್ ಭಾನುವಾರ ಇಲ್ಲಿ ನಡೆದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡರು. ಆದರೆ ಕಾನೂನಿಗೆ `ಹೆದರಿ' ಮತ್ತೆ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸುವ ಯಾವುದೇ ಪ್ರಯತ್ನ ಅವರು ನಡೆಸಲಿಲ್ಲ.

ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ 29 ಕ್ಕೆ ನಡೆಸುವ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದುಕೊಂಡು ಶ್ರೀನಿವಾಸನ್ ಕೋಲ್ಕತ್ತದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು. ಮಂಡಳಿಯ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮಂಡಳಿಯ `ಸಂವಿಧಾನಾತ್ಮಕ ಮತ್ತು ಶಾಸನಬದ್ಧ' ಕಾರ್ಯಗಳನ್ನು ನಡೆಸುವ ಅಧಿಕಾರವನ್ನು ಕಾರ್ಯಕಾರಿ ಸಮಿತಿಯು ಶ್ರೀನಿವಾಸನ್‌ಗೆ ನೀಡಿದೆ.

`ದಾಲ್ಮಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷರಿಗೆ ಕೆಲವು ಸಂವಿಧಾನಾತ್ಮಕ ಮತ್ತು ಶಾಸನಬದ್ಧ ಕಾರ್ಯಗಳಿದ್ದು, ವಾರ್ಷಿಕ ಸಾಮಾನ್ಯ ಸಭೆಯವರೆಗೆ ಅವುಗಳನ್ನು ಶ್ರೀನಿವಾಸನ್ ನೋಡಿಕೊಳ್ಳುವರು' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಐಪಿಎಲ್ ವಿವಾದದ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ದೂರ ಸರಿದಿದ್ದ ಶ್ರೀನಿವಾಸನ್ ಮಂಡಳಿಯ ನಿಯಂತ್ರಣವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವರು ಎಂಬ ಊಹಾಪೋಹ ಈ ಸಭೆಗೆ ಮುನ್ನ ಎದ್ದಿತ್ತು. ಆದರೆ ಅಂತಹ ಯಾವುದೇ ಅಚ್ಚರಿಯ ಬೆಳವಣಿಗೆ ನಡೆಯಲಿಲ್ಲ.

ಚೆನ್ನೈನಲ್ಲಿ ನಡೆಯಲಿರುವ ವಾರ್ಷಿಕ ಮಹಾ ಸಭೆಯವರೆಗೆ ದಾಲ್ಮಿಯ ಅವರು ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸೆ.29ರ ಸಭೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀನಿವಾಸನ್‌ಗೆ ಆಹ್ವಾನ ನೀಡಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ನಾನೇ ವಹಿಸುವುದಾಗಿ ಶ್ರೀನಿವಾಸನ್ ತಿಳಿಸಿದ್ದಾರೆ.

ಭಾನುವಾರ ನಡೆದ ಸಭೆಯ ಅಧ್ಯಕ್ಷತೆಯನ್ನು ದಾಲ್ಮಿಯ ವಹಿಸಿದ್ದರೂ, ಲೆಕ್ಕಪತ್ರ ವಿವರಗಳ ಕುರಿತ ಚರ್ಚೆಯ ವೇಳೆ ಶ್ರೀನಿವಾಸನ್ ಅವರೇ ಅಧ್ಯಕ್ಷರ ಜವಾಬ್ದಾರಿ ನಿರ್ವಹಿಸಿದರು.

ಎಲ್ಲರ ಗಮನ ಸೆಳೆದಿದ್ದ ಈ ಸಭೆಯಲ್ಲಿ ಪಾಲ್ಗೊಳ್ಳಲು ಶ್ರೀನಿವಾಸನ್ ಶನಿವಾರ ಕೋಲ್ಕತ್ತಕ್ಕೆ ಆಗಮಿಸಬೇಕಿತ್ತು. ಆದರೆ ಅವರು ಭಾನುವಾರ ಬೆಳಿಗ್ಗೆ ನಗರಕ್ಕೆ ಬಂದಿಳಿದರು. ಬಂಗಾಳ ಕ್ರಿಕೆಟ್ ಸಂಸ್ಥೆ ಖಜಾಂಚಿ ವಿಶ್ವರೂಪ್ ದೇವ್ ವಿಮಾನ ನಿಲ್ದಾಣದಲ್ಲಿ ಶ್ರೀನಿವಾಸನ್ ಅವರನ್ನು ಬರಮಾಡಿಕೊಂಡರು.

ಸಭೆಯ ತಾಣಕ್ಕೆ ಆಗಮಿಸಿದ ಶ್ರೀನಿವಾಸನ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಆ ಬಳಿಕ ಮಂಡಳಿಯ ಕಾನೂನು ಸಮಿತಿಯ ಸಲಹೆಯನ್ನು ಕೇಳಿದರಲ್ಲದೆ, ಸಭೆಯ ಅಧ್ಯಕ್ಷತೆ ವಹಿಸದಿರಲು ನಿರ್ಧರಿಸಿದರು. ಐಪಿಎಲ್ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಸಭೆಯ ಅಧ್ಯಕ್ಷತೆ ವಹಿಸಿದರೆ `ನ್ಯಾಯಾಲಯ ನಿಂದನೆ' ಆರೋಪ ಎದುರಿಸಬೇಕು ಎಂಬ ಕಾರಣ ಕೊನೆಯ ಕ್ಷಣದಲ್ಲಿ ಅವರು ಹಿಂದೆ ಸರಿದಿದ್ದಾರೆ.

ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸುವೆನು: ಶ್ರೀನಿವಾಸನ್
ಕೋಲ್ಕತ್ತ: ಸೆಪ್ಟೆಂಬರ್ 29 ರಂದು ಚೆನ್ನೈನಲ್ಲಿ ನಡೆಯಲಿರುವ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಎನ್. ಶ್ರೀನಿವಾಸನ್ ಹೇಳಿದ್ದಾರೆ.

`ಹೌದು. ಸಾಮಾನ್ಯ ಸಭೆಯ ಅಧ್ಯಕ್ಷತೆ ನಾನೇ ವಹಿಸಿಕೊಳ್ಳುವೆ' ಎಂದು ಭಾನುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಅವರು ನುಡಿದಿದ್ದಾರೆ. ಮಂಡಳಿಯ ಅಧಕ್ಷ ಸ್ಥಾನದಿಂದ ದೂರ ಸರಿದ ಬಳಿಕ ಒತ್ತಡದಲ್ಲೇ ಕಾಲ ಕಳೆಯುತ್ತಿದ್ದೇನೆ ಎಂಬ ಆರೋಪವನ್ನು ಅವರು ಅಲ್ಲಗಳೆದರು.

`ನಾನು ಏನಾದರೂ ತಪ್ಪು ಮಾಡುವೆನಾ? ನನ್ನ ವಿರುದ್ಧ ಏನಾದರೂ ಆರೋಪ ಇದೆಯಾ? ಕೆಲವು ಮಾಧ್ಯಮಗಳು ಇಲ್ಲಸಲ್ಲದ ವಿಷಯಗಳನ್ನು ಹೇಳುತ್ತಿದೆ' ಎಂದು ಹೇಳಿದ್ದಾರೆ. ನೀವು ಈಗ ನಿರಾಳರಾಗಿದ್ದೀರಾ ಎಂಬ ಪ್ರಶ್ನೆಗೆ, `ನಾನು ಯಾವಾಗಲೂ ನಿರಾಳನಾಗಿಯೇ ಇರುವೆನು' ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT