ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ತನಿಖೆ: ಜೆಪಿಸಿ ರಚನೆಗೆ ಸಮ್ಮತಿ

Last Updated 22 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ನಿರಂತರ ಒತ್ತಡಕ್ಕೆ ಕೊನೆಗೂ ತಲೆಬಾಗಿದ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ‘2ಜಿ ತರಂಗಾಂತರ ಹಗರಣ’ದ ವಿಚಾರಣೆಗೆ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಲು ಮಂಗಳವಾರ ಸಮ್ಮತಿಸಿತು. ಇದರೊಂದಿಗೆ ಜೆಪಿಸಿಗಾಗಿ ನಡೆದ ಹಗ್ಗಜಗ್ಗಾಟ ಕೊನೆಗೊಂಡಿತು.

ಜೆಪಿಸಿ ರಚಿಸುವ ಸರ್ಕಾರದ ತೀರ್ಮಾನವನ್ನು ಪ್ರಧಾನಿ ಲೋಕಸಭೆಯಲ್ಲಿ ಪ್ರಕಟಿಸಿದರು. ಬೆಳಿಗ್ಗೆ 11ಕ್ಕೆ ಸದನ ಸೇರುತ್ತಿದ್ದಂತೆ ಹೇಳಿಕೆ ನೀಡಿದ ಮನಮೋಹನ್‌ಸಿಂಗ್, ಜೆಪಿಸಿ ಬೇಡಿಕೆ ಸಂಸತ್ತಿನ ಚಳಿಗಾಲದ ಅಧಿವೇಶನದಂತೆ ಮಹತ್ವದ ಬಜೆಟ್ ಅಧಿವೇಶವನ್ನು ನುಂಗಬಾರದೆಂಬ ಉದ್ದೇಶದಿಂದ ಜಂಟಿ ಸದನ ಸಮಿತಿ ರಚಿಸಲು ಒಪ್ಪಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧದ ನಿರ್ಣಯವನ್ನು ಶೀಘ್ರವೇ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದ ಪ್ರಧಾನಿ, ಸಮಿತಿ ರಚನೆ ಕುರಿತಂತೆ ಅಗತ್ಯ ಪ್ರಕ್ರಿಯೆ ಆರಂಭಿಸುವಂತೆ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಮನವಿ ಮಾಡಿದರು.

ಜೆಪಿಸಿಗೆ ಪಟ್ಟು ಹಿಡಿಯದಂತೆ ವಿರೋಧ ಪಕ್ಷಗಳನ್ನು ಮನವೊಲಿಸುವ ಸರ್ಕಾರದ ಪ್ರಯತ್ನ ಸಫಲವಾಗಲಿಲ್ಲ ಎಂದರು. ಜೆಪಿಸಿ ಪ್ರಕಟಿಸದಿದ್ದರೆ ಬಜೆಟ್ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ವಿರೋಧ ಪಕ್ಷಗಳು ಎಚ್ಚರಿಸಿದ್ದವು.ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತ್ವರಿತ- ಪಾರದರ್ಶಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ತರಂಗಾಂತರ ಹಗರಣ ಕುರಿತು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಅಲ್ಲದೆ, ಇದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲನೆಯಲ್ಲಿದ್ದು, ಸರ್ಕಾರ ಎಲ್ಲ ವಿಧದ ಸಹಕಾರ ನೀಡುತ್ತಿದೆ.

 ನ್ಯಾ. ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ನೇಮಿಸಿದ್ದ ಸ್ವತಂತ್ರ ವಿಚಾರಣಾ ಸಮಿತಿ ಕೊಟ್ಟಿರುವ ವರದಿ ಜನರ ಮುಂದಿದೆ ಎಂದು ವಿವರಿಸಿದರು.

ಜೆಪಿಸಿ ಪ್ರಕಟಣೆ ತಡಮಾಡಿದ್ದರಿಂದ ಸರ್ಕಾರದ ವಿಶ್ವಾಸಾರ್ಹತೆಗೆ ಧಕ್ಕೆ ಬಂದಿದೆ. ಸರ್ಕಾರ ಏನನ್ನೋ ಮುಚ್ಚಿಡಲು ಬಯಸಿತು ಎಂಬ ಅನುಮಾನ ಜನರಿಗೆ ಬಂದಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಟೀಕಿಸಿದರು.

ಜೆಡಿಯು ಮುಖಂಡ ಶರದ್ ಯಾದವ್ ಕಾಮನ್‌ವೆಲ್ತ್, ಎಸ್ ಬ್ಯಾಂಡ್ ಹಾಗೂ ಆದರ್ಶ ಹೌಸಿಂಗ್ ಹಗರಣ ಕುರಿತು ಜೆಪಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು. ಜೆಪಿಸಿಯಲ್ಲಿ ಎಲ್ಲ ಪಕ್ಷಗಳಿಗೂ ಸ್ಥಾನ ಕಲ್ಪಿಸುವಂತೆ ಎಐಡಿಎಂಕೆ ಆಗ್ರಹಿಸಿತು.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ 2ಜಿ ಹಗರಣದಿಂದ ಬೊಕ್ಕಸಕ್ಕೆ 1.76ಲಕ್ಷ ಕೋಟಿ ನಷ್ಟ ಉಂಟಾಗಿದೆ. ಈ ಹಗರಣ ದೂರ ಸಂಪರ್ಕ ಖಾತೆ ಸಚಿವ ಅವರನ್ನು ‘ಬಲಿ’ ಪಡೆಯಿತಲ್ಲದೆ, ಸೆರೆಮನೆಗೂ ಕಳುಹಿಸಿದೆ.

ಹಗರಣ ಕುರಿತಂತೆ ಅಗತ್ಯವಾದ ಎಲ್ಲ ಪರಿಣಾಮಕಾರಿ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದರೂ ಜೆಪಿಸಿಗೆ ಒತ್ತಾಯಿಸದಂತೆ ವಿರೋಧ ಪಕ್ಷಗಳನ್ನು ಮನವೊಲಿಸಲು ಸಾಧ್ಯವಾಗಲಿಲ್ಲ.

ಈ ಕಾರಣಕ್ಕೆ ಸರ್ಕಾರ ಜೆಪಿಸಿ ರಚನೆಗೆ ಒಪ್ಪಿಕೊಂಡಿದೆ. ಕಲಾಪಕ್ಕೆ ಅಡ್ಡಿಮಾಡುವ ಮೂಲಕ ನಾವು ಜನರಿಗೆ ಕೆಡಕು ಮಾಡುತ್ತಿದ್ದೇವೆ ಎಂದು ಸಿಂಗ್ ಅಭಿಪ್ರಾಯಪಟ್ಟರು.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಸೋಲು- ಗೆಲುವು ಎಂಬ ಪರಿಕಲ್ಪನೆಯಲ್ಲಿ ಇದನ್ನು ನೋಡಬಾರದು. ಇದು ಪ್ರಜಾಪ್ರಭುತ್ವದ ಗೆಲುವು ಆಗಿದ್ದು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಜೆಪಿಸಿ ರಚಿಸುವ ಮೂಲಕ ಸರ್ಕಾರ ತನ್ನ ಹೊಣೆಗಾರಿಕೆ ನಿರ್ವಹಿಸಿದೆ. ಈ ಕೆಲಸವನ್ನು ಮೊದಲೇ ಮಾಡಬಹುದಿತ್ತು. ತಡವಾಗಿಯಾದರೂ ವಿರೋಧ ಪಕ್ಷಗಳಿಗೆ ಸರ್ಕಾರ ಮಣಿದಿದೆ ಎಂಬ ಸಮಾಧಾನ ಆಗಿದೆ ಎಂದು ಸಿಪಿಐ ಮುಖಂಡ ಗುರುದಾಸ್‌ದಾಸ್ ಗುಪ್ತಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT