ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ : ಮಾರನ್ ಸ್ಥಾನಕ್ಕೆ ಸಂಚಕಾರ?

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: 2ನೇ ತಲೆಮಾರಿನ ರೇಡಿಯೋ ತರಂಗಾಂತರ ಹಗರಣದ ಸುಳಿಗೆ ಸಿಕ್ಕಿ ದೂರಸಂಪರ್ಕ ಖಾತೆ ಮಾಜಿ ಸಚಿವ ಎ ರಾಜಾ ಹಾಗೂ ಡಿಎಂಕೆ ಸಂಸದೆ ಮತ್ತು ಕರುಣಾನಿಧಿ  ಪುತ್ರಿ ಕನಿಮೋಳಿ ಜೈಲು ಸೇರಿರುವ ಹಿಂದೆಯೇ ಯುಪಿಎ ಸರ್ಕಾರದ ಮತ್ತೊಬ್ಬ ಸಚಿವ ದಯಾನಿಧಿ ಮಾರನ್ ಅವರ ಕೊರಳಿಗೂ ಹಗರಣ ಬಿಗಿದುಕೊಳ್ಳಲಾರಂಭಿಸಿದೆ.

ಪ್ರಧಾನಿ ಮನಮೋಹನ್‌ಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಹೊಣೆ ಹೊತ್ತಿರುವ ಡಿಎಂಕೆಯ ಮತ್ತೊಬ್ಬ ಪ್ರತಿನಿಧಿ ಮಾರನ್ ಅವರ ರಾಜೀನಾಮೆಗೆ ಬಿಜೆಪಿ, ಸಿಪಿಎಂ ಮತ್ತು ಎಐಡಿಎಂಕೆ ಒತ್ತಡ ಹೇರುತ್ತಿರುವ ನಡುವೆಯೇ ಹಗರಣದಲ್ಲಿ ಮಾರನ್ ಪಾತ್ರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕೆಂದು ಕೋರಿ ಎನ್‌ಜಿಎ `ಸಿಪಿಐಎಲ್~ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಇದರಿಂದ ಮಾರನ್ ಇಕ್ಕಟ್ಟಿಗೆ ಸಿಕ್ಕಿದ್ದಾರೆ.

ತರಂಗಾಂತರ ಹಗರಣದಲ್ಲಿ ಮಾರನ್ ಪಾತ್ರ ಕುರಿತು ಪ್ರತಿಕ್ರಿಯಿಸಲು ಗೃಹ ಸಚಿವ ಪಿ. ಚಿದಂಬರಂ ಬುಧವಾರ ನಿರಾಕರಿಸಿದರು. ಕಾಂಗ್ರೆಸ್ ಕೂಡಾ ಈ ವಿಷಯದಲ್ಲಿ ಮೌನ ತಾಳಿದೆ. ಇದರಿಂದಾಗಿ ಸಚಿವ ಮಾರನ್ ಸರ್ಕಾರದಲ್ಲಿ ಏಕಾಂಗಿಯಾಗಿದ್ದಾರೆ. ಹಗರಣ ಕುರಿತು ವಿಚಾರಣೆ ನಡೆಸುತ್ತಿರುವ ಸಿಬಿಐ ಮಾರನ್ ಅವರನ್ನು ವಿಚಾರಣೆಗೆ ಒಳಪಡಿಸಲಿದೆ ಎಂಬ ಸುದ್ದಿ ರಾಜಧಾನಿಯಲ್ಲಿ ಬುಧವಾರ ದಟ್ಟವಾಗಿ ಹರಡಿತ್ತು. ಆದರೆ, ತನಿಖಾ ಸಂಸ್ಥೆ ಇದನ್ನು ಖಚಿತಪಡಿಸಲಿಲ್ಲ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಒತ್ತಡದಿಂದ ಅಸಹಾಯಕರಾಗಿರುವ ದಯಾನಿಧಿ ಮಾರನ್ ಬುಧವಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಸಂಜೆ ಹಠಾತ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದರು.

ಸನ್ ನೆಟ್‌ವರ್ಕ್ ಹಣ ಸ್ವೀಕರಿಸಿಲ್ಲ: ತಮ್ಮ ವಿರುದ್ಧದ `ಲಂಚ~ ಆರೋಪವನ್ನು ಮಾರನ್ ಹೇಳಿಕೆಯಲ್ಲಿ ನಿರಾಕರಿಸಿದ್ದಾರೆ. ತಾವು ಸಂಪರ್ಕ ಖಾತೆ ಹೊಣೆ ಹೊತ್ತಿದ್ದಾಗ ಯಾವುದೇ ಸಾಗರೋತ್ತರ ಕಂಪೆನಿಗೆ `ಏಕೀಕೃತ ಸಂಪರ್ಕ ಸೇವೆ ಪರವಾನಗಿ~ (ಯುಎಎಸ್‌ಎಲ್) ಕೊಡಲು ಸಹಕರಿಸಿಲ್ಲ ಎಂದಿದ್ದಾರೆ.

ಮಲೇಷ್ಯಾ ಮೂಲದ `ಮ್ಯಾಕ್ಸಿಸ್ ಕಂಪೆನಿ~ಗೆ `ಏರ್‌ಸೆಲ್~ ಪರವಾನಗಿ ಪಡೆಯಲು  ನೆರವಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ರಾಜೀನಾಮೆಗೆ ಆಗ್ರಹಿಸಿವೆ.  ತಮ್ಮ ಕುಟುಂಬದ ಒಡೆತನದ `ಸನ್ ಟಿವಿ ನೆಟ್‌ವರ್ಕ್~ ಯಾವುದೇ ನಿರ್ದಿಷ್ಟ ಕಂಪೆನಿಯಿಂದ ಹಣ ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2004ರಿಂದ ಮೇ 2007ರವರೆಗೆ ತಾವು ದೂರ ಸಂಪರ್ಕ ಖಾತೆ ಸಚಿವರಾಗಿದ್ದಾಗ ಯಾವುದೇ ದೂರವಾಣಿ ಕಂಪೆನಿ ತಮ್ಮ ಸೋದರ ಕಲಾನಿಧಿ ಮಾರನ್ ಒಡೆತನದ ಕಂಪೆನಿಗಳಲ್ಲಿ ಹಣ ತೊಡಗಿಸಿಲ್ಲ ಎಂದು ಮಾರನ್ ಪ್ರತಿಪಾದಿಸಿದ್ದಾರೆ.

ತಾವು ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನದ ಸಚಿವರಾಗಿದ್ದಾಗ ಪಕ್ಷಪಾತ ಮಾಡಿಲ್ಲ. ಯಾವುದೇ ಕಂಪೆನಿಗೆ ನಿಯಮ ಮೀರಿ ಯುಎಎಸ್‌ಎಲ್ ಪರವಾನಗಿ ಪಡೆಯಲು ಅನುಕೂಲ ಮಾಡಿಕೊಟ್ಟಿಲ್ಲ. ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡಿಲ್ಲ ಎಂದು ಮಾರನ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿಗದಿಪಡಿಸಿದ ಎಲ್ಲ ಷರತ್ತುಗಳನ್ನು ಪೂರೈಸಿದ ಕಂಪೆನಿಗಳನ್ನು ಮಾತ್ರ ಸರದಿ ಮೇಲೆ ಪರಿಗಣಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ವಿತರಿಸಲಾಗಿರುವ ಲೈಸೆನ್ಸ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಸಿಎಜಿ ಕೂಡಾ ಹೇಳಿಲ್ಲ ಎಂದು ವಿವರಿಸಿದ್ದಾರೆ.

ಮೆಸರ್ಸ್ ಆ್ಯಸ್ಟ್ರೋ ಡಿಸೆಂಬರ್ 2007ರಲ್ಲಿ ಸನ್ ಡೈರೆಕ್ಟ್‌ನಲ್ಲಿ ಹಣ ತೊಡಗಿಸಿದಾಗ ತಾವು ಸಚಿವರಾಗಿರಲಿಲ್ಲ. ಮೇ 2007ರಲ್ಲಿ ರಾಜೀನಾಮೆ ನೀಡಿದ್ದೆ. ಅಲ್ಲದೆ, ಇದರಲ್ಲಿ ತಾವು ಷೇರುಗಳನ್ನು ಹೊಂದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT