ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಸ್ಪೆಕ್ಟ್ರಂ: ಮಾರನ್ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಬಿಐ, ಶೀಘ್ರ ಎಫ್‌ಐಆರ್ ಸಂಭವ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ದೂರ ಸಂಪರ್ಕ ಇಲಾಖೆ ಮಾಜಿ ಸಚಿವ ದಯಾನಿಧಿ ಮಾರನ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಪೂರ್ಣಗೊಳಿಸಿರುವ ಸಿಬಿಐ ಇನ್ನು ಹತ್ತು ದಿನಗಳಲ್ಲಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸುವ ಸಾಧ್ಯತೆ ಇದೆ.

`ನಾವು ತನಿಖೆ ಪೂರ್ಣಗೊಳಿಸಿದ್ದೇವೆ. ಸಿಬಿಐನ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ನಂತರ 7ರಿಂದ 10 ದಿನಗಳಲ್ಲಿ ಎಫ್‌ಐಆರ್ ದಾಖಲು ಮಾಡಲಾಗುತ್ತದೆ~ ಎಂದು ಸಿಬಿಐ ಮೂಲಗಳು `ಪ್ರಜಾವಾಣಿ~ಗೆ ಭಾನುವಾರ ತಿಳಿಸಿವೆ.

ಸೆ.28ರಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಸಿಬಿಐ, 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದನ ವಿರುದ್ಧ ಸಾಕ್ಷ್ಯಗಳು ದೊರೆತಿವೆ. ಹಾಗಾಗಿ ಶೀಘ್ರವೇ ಅವರ ವಿರುದ್ಧ ಏರ್‌ಸೆಲ್ ಕಂಪೆನಿಗೆ ಅನುಕಂಪ ತೋರಿಸಿರುವುದೂ ಸೇರಿದಂತೆ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡುವುದಾಗಿ ತಿಳಿಸಿತ್ತು.

ಹಿರಿಯ ಸಚಿವರ ತಂಡ ಮಾಡಿರುವಂತಹ ಮಾರ್ಗಸೂಚಿಯನ್ನು ಬದಲಾವಣೆ ಮಾಡುವಂತೆ ಪ್ರಧಾನ ಮಂತ್ರಿಗಳನ್ನು ಮಾರನ್ ಕೇಳಿಕೊಂಡಿದ್ದು, ಅದನ್ನು ಸ್ವತಃ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಇದು ಮಾರನ್‌ಗೆ ತೊಡಕಾಗಿದೆ.

ನ್ಯೂಯಾರ್ಕ್‌ನಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ತಮ್ಮಂದಿಗೆ ವಿಮಾನದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ಹಿರಿಯ ಸಚಿವರ ತಂಡ 2006ರಲ್ಲಿ ಒಂದು ಕರಡನ್ನು ಸಿದ್ಧಪಡಿಸಿತ್ತು. ಅದರಲ್ಲಿ ಸ್ಪೆಕ್ಟ್ರಂ ದರವನ್ನೂ ನಿಗದಿ ಮಾಡಲಾಗಿತ್ತು ಎನ್ನುವುದು ಸತ್ಯ. ಆದರೆ ಮಾರನ್ ದರ ಬದಲಾಯಿಸಲು ಒತ್ತಾಯಿಸಿದರು ಎಂದು ತಿಳಿಸಿದ್ದರು.

ಆದರೆ 2007 ಮತ್ತು 2008ರಲ್ಲಿ ಸ್ಪೆಕ್ಟ್ರಂ ಪರವಾನಗಿ ದರದ ಬಗ್ಗೆ ಗಮನ ಇರಲಿಲ್ಲ. ರಕ್ಷಣಾ ಇಲಾಖೆ ಸ್ಪೆಕ್ಟ್ರಂ ವಲಯದಿಂದ ಹೊರಬರಬೇಕು ಹಾಗೂ ಸ್ಪೆಕ್ಟ್ರಂ ನಾಗರಿಕ ಆರ್ಥಿಕತೆಗೂ ದೊರೆಯುವಂತಾಗಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿತ್ತು ಎಂದು ಹೇಳಿದ್ದರು.

ಹಿರಿಯ ಸಚಿವರ ತಂಡ ಸ್ಪೆಕ್ಟ್ರಂ ದರಕ್ಕೆ ಸಂಬಂಧಿಸಿದಂತೆ ರೂಪಿಸಿದ್ದ ಕರಡನ್ನು ದಯಾನಿಧಿ ಮಾರನ್ ವಿರೋಧಿಸಿದ್ದರು, ತಮ್ಮ ಇಲಾಖೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ವಾದಿಸಿದ್ದರು ಎನ್ನುವ ಸತ್ಯವನ್ನು ಬಿಚ್ಚಿಟ್ಟರು.

ಸ್ಪೆಕ್ಟ್ರಂ ದರ ನಿಗದಿ ಮಾಡುವುದು ದೂರ ಸಂಪರ್ಕ ಇಲಾಖೆಗೆ ಬಿಟ್ಟಿದ್ದು, ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವರು ಎಂದು ಭಾವಿಸಿ, ಮಾರನ್ ಅವರ ಆಕ್ಷೇಪಮನ್ನಿಸಿದ್ದಾಗಿ ಸಿಂಗ್ ಸುದ್ದಿಗಾರರಿಗೆ ವಿವರ ನೀಡಿದ್ದರು.

ಏರ್‌ಸೆಲ್ ಮಾಲಿಕ ಸಿ.ಶಿವಶಂಕರನ್ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ತಮ್ಮ ಎಲ್ಲಾ ಷೇರುಗಳನ್ನು ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್‌ಗೆ ಮಾರಾಟ ಮಾಡಲು ದೂರ ಸಂಪರ್ಕ ಇಲಾಖೆಯ ಸಚಿವರಾಗಿ ಮಾರನ್ ಒತ್ತಡ ಹೇರಿದ್ದರು ಎನ್ನಲಾಗಿದೆ. 

ನಂತರ ಶ್ರೀಲಂಕಾ ಮೂಲದ ಮಲೇಷ್ಯಾದ ಉದ್ಯಮಿ ಆನಂದ ಕೃಷ್ಣನ್ ಏರ್‌ಸೆಲ್‌ನ ಶೇ 74ರಷ್ಟು ಷೇರುಗಳನ್ನು 80 ಕೋಟಿ ಡಾಲರ್‌ಗಳಿಗೆ ಖರೀದಿಸಿದ್ದರು ಎನ್ನುವ ಅಂಶವನ್ನೂ ಸಿಬಿಐ ತನಿಖೆಯ ವೇಳೆಯಲ್ಲಿ ಪತ್ತೆ ಮಾಡಿದೆ. ಅಂಶಗಳೂ ಎಫ್‌ಐಆರ್‌ನಲ್ಲಿ ಒಳಗೊಳ್ಳುವ ಸಾಧ್ಯತೆ ಇದ್ದು, ಮಾರನ್ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT