ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಸ್ಪೆಕ್ಟ್ರಂ: ಸೋನಿಯಾಗೆ ಸಿಂಹಪಾಲು

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದೇಶದ ಭಾರಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸುಮಾರು 60,000 ಕೋಟಿ ರೂಪಾಯಿ ಲಂಚ ವ್ಯವಹಾರ ನಡೆದಿದ್ದು, ಇದರಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 36,000 ಕೋಟಿ ರೂಪಾಯಿ ಲಂಚ ಸಲ್ಲಿಕೆಯಾಗಿದೆ~ ಎಂದು ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್‌ಸ್ವಾಮಿ ಆರೋಪಿಸಿದರು.

ಭ್ರಷ್ಟಾಚಾರದ ವಿರುದ್ಧ ಯುವಜನತೆ ಸಂಘಟನೆಯು ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `2ಜಿ ಸ್ಪೆಕ್ಟ್ರಂ ಹಗರಣದ ರಹಸ್ಯ ಸತ್ಯಗಳು~ ಕುರಿತು ಅವರು ಮಾತನಾಡಿದರು.

`ಸುಮಾರು 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸುಮಾರು 60,000 ಕೋಟಿ ರೂಪಾಯಿ ಲಂಚ ಕೈಬದಲಾಗಿದೆ. ಈ ಪೈಕಿ ಸೋನಿಯಾಗಾಂಧಿ ಸಿಂಹಪಾಲು ಪಡೆದಿದ್ದರೆ, ಎ. ರಾಜಾ ಹಾಗೂ ಪಿ.ಚಿದಂಬರಂ ಅವರು ತಲಾ ರೂ 5,000 ಕೋಟಿ ಪಡೆದಿದ್ದಾರೆ. ಎಂ. ಕರುಣಾನಿಧಿ ಅವರಿಗೆ 14,000 ಕೋಟಿ ಲಂಚ ಸಂದಾಯವಾಗಿದೆ~ ಎಂದು ಗಂಭೀರ ಆರೋಪ ಮಾಡಿದರು.

`ಲೆಕ್ಕಕ್ಕೆ ಸಿಗದ ಹಣದ ಪ್ರಮಾಣ ಹೆಚ್ಚಾದಂತೆ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಸುಮಾರು 70 ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ವಿದೇಶಿ ಬ್ಯಾಂಕ್‌ಗಳಲ್ಲಿದೆ. ಈ ಹಣವನ್ನು ದೇಶಕ್ಕೆ ತಂದರೆ ಮುಂದಿನ 10 ವರ್ಷ ಕಾಲ ಯಾವುದೇ ತೆರಿಗೆ ವಿಧಿಸುವ ಅಗತ್ಯವಿರುವುದಿಲ್ಲ. ಎಲ್ಲ ಜನರಿಗೆ ಮೂಲ ಸೌಕರ್ಯ ಕಲ್ಪಿಸಬಹುದಾಗಿದೆ. 110 ವಿಶ್ವವಿದ್ಯಾಲಯಗಳನ್ನು ತೆರೆಯಬಹುದಾಗಿದೆ~ ಎಂದರು.

`2ಜಿ ತರಂಗಾಂತರ ಪರವಾನಗಿ ಪಡೆದ ಕಂಪೆನಿಗಳು ಮೂರು ವರ್ಷದವರೆಗೆ ಇತರೆ ಸಂಸ್ಥೆಗೆ ಮಾರಾಟ ಮಾಡಬಾರದು ಎಂಬ ನಿಬಂಧನೆಯಿದ್ದರೂ, ನಿಯಮಬಾಹಿರವಾಗಿ ಕೆಲವು ಸಂಸ್ಥೆಗಳು ಪರವಾನಗಿಯನ್ನು ಇತರೆ ಸಂಸ್ಥೆಗಳಿಗೆ ಮಾರಾಟ ಮಾಡಿ ಅಕ್ರಮ ನಡೆಸಿವೆ. ಈ ಉಪಾಯವನ್ನು ಎ. ರಾಜಾ ಅವರಿಗೆ ಹೇಳಿಕೊಟ್ಟಿದ್ದೇ ಚಿದಂಬರಂ~ ಎಂದರು.

`ಹಾಗಾಗಿ ಈ ಹಗರಣದಲ್ಲಿ ರಾಜಾ ಒಬ್ಬರನ್ನೇ ಹೊಣೆ ಮಾಡುವುದು ಸರಿಯಲ್ಲ. ಚಿದಂಬರಂ ಕೂಡ ಸಾಕಷ್ಟು ಅಕ್ರಮ ನಡೆಸಿದ್ದಾರೆ. ಇದನ್ನು ಬಯಲಿಗೆಳೆದು ನಿರಂತರ ಹೋರಾಟ ನಡೆಸುತ್ತೇನೆ.
 
ಈ ಹಗರಣದಲ್ಲಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಬಿಡಿಗಾಸು ಪಡೆದಿಲ್ಲ ಎಂಬುದು ಸತ್ಯ. ಅವರ ಪ್ರಾಮಾಣಿಕತೆ ಬಗ್ಗೆ ಮೆಚ್ಚುಗೆಯಿದ್ದರೂ, ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ~ ಎಂದು ಹೇಳಿದರು.

`ಭ್ರಷ್ಟಾಚಾರ ತೀವ್ರವಾದಂತೆ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ. ದೇಶದಲ್ಲಿ ಇಂದು ಶೇ 70ರಷ್ಟು ಬಂಡವಾಳವನ್ನು ಐಷಾರಾಮಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಹೂಡಲಾಗುತ್ತಿದೆ. ಭ್ರಷ್ಟಾಚಾರ ಅಧಿಕವಾದಂತೆ ಹಣದುಬ್ಬರ ಕೂಡ ಹೆಚ್ಚಾಗುತ್ತದೆ. ಅಂತಿಮವಾಗಿ ರಾಷ್ಟ್ರೀಯ ಭದ್ರತೆಗೂ ಚ್ಯುತಿ ಉಂಟಾಗುತ್ತದೆ~ ಎಂದರು.

`ಈವರೆಗೆ ಹಂಚಿಕೆ ಮಾಡಲಾದ 2ಜಿ ತರಂಗಾಂತರ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಸಾರ್ವಜನಿಕ ಹುದ್ದೆಯನ್ನು ಖಾಸಗಿ ವ್ಯಕ್ತಿಗಳ ಅನುಕೂಲಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದು ಬಹಳ ಅಪಾಯಕಾರಿ. ಇದರ ವಿರುದ್ಧ ಎಲ್ಲರೂ ಹೋರಾಟ ನಡೆಸಬೇಕು~ ಎಂದು ಕರೆ ನೀಡಿದರು.

ನಿವೃತ್ತ ನ್ಯಾಯಮೂರ್ತಿ ರಂಗವಿಠಲಾಚಾರ್, ಸಂಘಟನೆಯ ಸಹ ಸಂಚಾಲಕರಾದ ಎಂ.ಕೆ. ಸುವ್ರತ್‌ಕುಮಾರ್, ತಮ್ಮೇಶ್‌ಗೌಡ ಉಪಸ್ಥಿತರಿದ್ದರು.

ಕೃಷ್ಣ, ಧರಂ ವಿರುದ್ಧ ದೂರು?
`ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಅಗತ್ಯಬಿದ್ದರೆ ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಹಾಗೂ ಸಂಸದ ಎನ್. ಧರ್ಮಸಿಂಗ್ ಅವರ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು~ ಎಂದು ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್‌ಸ್ವಾಮಿ ಹೇಳಿದರು.

`ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪ ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಆದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಪಟ್ಟಂತೆ ಎಸ್. ಎಂ.ಕೃಷ್ಣ ಹಾಗೂ ಎನ್.ಧರ್ಮಸಿಂಗ್ ವಿರುದ್ಧ ಕಾಂಗ್ರೆಸ್ ಮುಖಂಡರು ಯಾವುದೇ ಹೇಳಿಕೆ ನೀಡುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT