ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಹಗರಣ: ಕೊನೆಗೂ ಜೆಪಿಸಿ ರಚನೆ

Last Updated 24 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ನವದೆಹಲಿ : ಹೆಜ್ಜೆಹೆಜ್ಜೆಗೂ ಅಡ್ಡಿ- ಕುಹಕ, ಕೂಗಾಟ- ಗದ್ದಲ, ಆರೋಪ-ಪ್ರತ್ಯಾರೋಪ, ಸವಾಲು-ಮರು ಸವಾಲುಗಳಿಂದಾಗಿ ಎರಡು ತಾಸು ಕಾವೇರಿದ ವಾತಾವರಣಕ್ಕೆ ಕಾರಣವಾದ ‘ಎರಡನೇ ತಲೆಮಾರಿನ ತರಂಗಾಂತರ ಹಗರಣ’ ವಿಚಾರಣೆಗೆ ಯುಪಿಎ ಸರ್ಕಾರ ಕೊನೆಗೂ ಗುರುವಾರ ಜಂಟಿ ಸದನ ಸಮಿತಿ ರಚಿಸಿತು.

ಇದರೊಂದಿಗೆ ಕೆಲವು ತಿಂಗಳಿಂದ ಆಡಳಿತ- ವಿರೋಧ ಪಕ್ಷಗಳ ನಡುವೆ ನಡೆದ ‘ಗುದ್ದಾಟ’ಕ್ಕೆ ತೆರೆಬಿತ್ತು. 98ರಿಂದ 2009ರವರೆಗೆ ಅನುಸರಿಸಿಕೊಂಡು ಬಂದಿರುವ ದೂರಸಂಪರ್ಕ ನೀತಿ, ಗುತ್ತಿಗೆ ನೀಡಿಕೆ, ಪರವಾನಗಿ ವ್ಯವಸ್ಥೆ ಮತ್ತು ಸ್ಪೆಕ್ಟ್ರಂ ಶುಲ್ಕ ಮುಂತಾದ ವಿಷಯಗಳ ವಿಚಾರಣೆಗೆ 30 ಸದಸ್ಯರ ಸಮಿತಿ ರಚಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಿದರು.

ಸಮಿತಿ ಲೋಕಸಭೆಯ 20 ಹಾಗೂ ರಾಜ್ಯಸಭೆಯ 10 ಸದಸ್ಯರನ್ನು ಒಳಗೊಂಡಿದೆ. ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಪೂರ್ಣ ನುಂಗಿಹಾಕಿದ ಹಗರಣ ಕುರಿತು ಸುಮಾರು ಮೂರೂವರೆ ತಾಸು ನಡೆದ ಚರ್ಚೆ ಬಳಿಕ ನಿರ್ಣಯಕ್ಕೆ ಲೋಕಸಭೆ ಅನುಮೋದನೆ ನೀಡಿತು. ಅವ್ಯವಹಾರ ಕುರಿತೂ ಈ ಸಮಿತಿ ಪರಿಶೀಲಿಸಲಿದೆ. ಮುಂಗಾರು ಅಧಿವೇಶನದ ಅಂತ್ಯಕ್ಕೆ ವರದಿ ಸಲ್ಲಿಸಲಿದೆ.

ನಿರ್ಣಯ ಮಂಡಿಸಿ ಮಾತನಾಡಿದ ಪ್ರಣವ್ ಮುಖರ್ಜಿ, ಸರ್ಕಾರ ಜೆಪಿಸಿ ಬೇಡಿಕೆ ಒಪ್ಪಿಕೊಳ್ಳಲು ಅನಿವಾರ್ಯವಾದ ಅಂಶಗಳನ್ನು ವಿವರಿಸಿದರು. ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡ ಕ್ರಮಗಳನ್ನು ಬಿಡಿಸಿಟ್ಟರು. ವಿರೋಧ ಪಕ್ಷಗಳ ಬೇಡಿಕೆಗೆ ಸರ್ಕಾರ ಕಿವಿಗೊಡಲಿಲ್ಲ ಎಂಬ ಕಾರಣಕ್ಕೆ ಅಧಿವೇಶನಕ್ಕೆ ಅಡ್ಡಿಪಡಿಸುವ ಧೋರಣೆ ಸರಿಯಲ್ಲ ಎಂದರು.

ವಿರೋಧ ಪಕ್ಷಗಳ ಮುಖಂಡರಿಗೆ ಪಾಠ ಹೇಳುವವರಂತೆ ಮಾತನಾಡಿದ ಮುಖರ್ಜಿ, ಇಂಥ ಬೇಡಿಕೆಗೆ ಅಧಿವೇಶನವನ್ನೇ ಒತ್ತೆ ಇಡುವುದು ಅಪಾಯಕಾರಿ. ಈ ನಡವಳಿಕೆ ಸಂವಿಧಾನೇತರ ಶಕ್ತಿಗಳು ತಲೆ ಎತ್ತಲು ಕಾರಣವಾಗುತ್ತದೆ ಎಂದು ಎಚ್ಚರಿಸಿದರು ‘ತೆಹಲ್ಕಾ’ ಹೊರಗೆಳೆದ ಹಗರಣದ ವಿಚಾರಣೆಗೆ ಜೆಪಿಸಿ ಅಗತ್ಯವಿಲ್ಲ ಎಂದು ಹಿಂದಿನ ಎನ್‌ಡಿಎ ಸರ್ಕಾರ ಹೇಳಿದ್ದನ್ನು ಬಿಜೆಪಿ ಸದಸ್ಯರಿಗೆ ನೆನಪು ಮಾಡಿದರು.

ಚರ್ಚೆಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಜೆಪಿಸಿಗಾಗಿ ಪಟ್ಟು ಹಿಡಿದ ನಮ್ಮನ್ನು ಮುಖರ್ಜಿ ‘ಮಾವೋವಾದಿ’ಗಳೆಂದು ಕರೆದಿದ್ದಾರೆ ಎಂಬುದಾಗಿ ಕಿಡಿಕಾರಿದರು.

‘ಜೆಪಿಸಿ ಬೇಡಿಕೆ ಹಿಂಸಾತ್ಮಾಕವೇ ಅಥವಾ ಸಂವಿಧಾನಬಾಹಿರವೇ?’ ಎಂದು ಕೇಳಿದರು. ‘ಹಣಕಾಸು ಸಚಿವರು ಒಳ್ಳೆಯ ಮನುಷ್ಯ. ಸಿಟ್ಟಾದಾಗ ಒಳ್ಳೆಯದು ಮತ್ತು ಕೆಟ್ಟದರ ನಡುವೆ ವ್ಯತ್ಯಾಸ ತಿಳಿಯುವುದಿಲ್ಲ’ ಎಂದು ಚುಚ್ಚಿದರು.ಸುಷ್ಮಾ ಆರೋಪಕ್ಕೆ ಉತ್ತರಿಸಿದ ಹಣಕಾಸು ಸಚಿವರು. ‘ಜೆಪಿಸಿ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಬೇಕೆಂಬುದು ನಮ್ಮ ಬಯಕೆಯಾಗಿತ್ತು. ಅದಕ್ಕೆ ಬಿಜೆಪಿ ತಯಾರಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT