ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಹಗರಣ: ಪ್ರತಿಪಕ್ಷಗಳ ತರಾಟೆ ನಿರೀಕ್ಷೆ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಗುರುವಾರ ನಡೆಯಲಿರುವ ಜಂಟಿ ಸಂಸದೀಯ ಸಮಿತಿ ಸಭೆ (ಜೆಪಿಸಿ)ಯಲ್ಲಿ ವಿರೋಧ ಪಕ್ಷಗಳು, ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಸಾಕ್ಷಿಯಾಗಿ ಪರಿಗಣಿಸಲು ಆಗ್ರಹಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ, ಹಗರಣದ ಮುಖ್ಯ ಸಾಕ್ಷಿಗಳಾಗಿ ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಹಣಕಾಸು ಸಚಿವರನ್ನು ಸಮಿತಿ ಮುಂದೆ ಕರೆಯಬೇಕು ಎಂದು ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ, ಎಡಪಕ್ಷಗಳು ಮತ್ತು ಬಹುಜನ ಸಮಾಜ ಪಕ್ಷ ಚಿದಂಬರಂ ಅವರನ್ನು ಮಾತ್ರ ಸಾಕ್ಷಿಯಾಗಿ ಪರಿಗಣಿಸಬೇಕೆಂಬ ನಿಲುವಿನ ಪರವಾಗಿವೆ.

ಅಲ್ಲದೆ, ಹಗರಣದ ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ಅಂತಿಮಗೊಳಿಸಲು ನಿರಾಕರಿಸಿರುವ ಜೆಪಿಪಿ ಮುಖ್ಯಸ್ಥ ಚಾಕೊ ವಿರುದ್ಧ ಬಿಜೆಪಿಯ ಆರು ಸದಸ್ಯರು, ಕಳೆದ ಅಕ್ಟೋಬರ್ 11ರಂದು ನಡೆದ ಜೆಪಿಸಿ ಸಭೆಯಿಂದ ದೂರ ಉಳಿಯುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಆದರೆ, ಚಿದಂಬರಂ ಸೇರಿದಂತೆ ಪ್ರಧಾನಿ ಕೂಡ ಸಭೆ ಮುಂದೆ ಸಾಕ್ಷಿಯಾಗಿ ಹಾಜರಾಗಬೇಕೆಂಬ ಬಿಜೆಪಿ ಬೇಡಿಕೆಯನ್ನು ಜೆಪಿಸಿ ಮುಖ್ಯಸ್ಥ ಪಿ.ಸಿ. ಚಾಕೊ ಅವರು ಸಾರಸಗಟು ತಳ್ಳಿಹಾಕಿದ್ದಾರೆ.

`2ಜಿ ತರಂಗಾಂತರ ಹಂಚಿಕೆ ಸಂಬಂಧ ಪ್ರಧಾನಿಯವರೇ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದರಿಂದ, ಅವರೇ ಸಮಿತಿ ಮುಂದೆ ಬಂದು ಕೆಲ ವಿಷಯಗಳನ್ನು ವಿವರಿಸಬೇಕಾಗುತ್ತದೆ~ ಎಂದು ಜೆಪಿಸಿ ಸದಸ್ಯ ಹಾಗೂ ಹಣಕಾಸು ಖಾತೆಯ ಮಾಜಿ ಸಚಿವರೂ ಆಗಿರುವ ಯಶವಂತ್ ಸಿನ್ಹಾ ಅವರು, ಜೆಪಿಸಿ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಹಗರಣದಲ್ಲಿ ಕಾರ್ಯಾಂಗ, ಟ್ರಾಯ್ (ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಹಾಗೂ ಟೆಲಿಕಾಂ ಉದ್ಯಮ ಭಾಗಿಯಾಗಿವೆ. ಇದುವರೆಗೂ ಕೇವಲ ಅಧಿಕಾರಿಗಳನ್ನು ಮಾತ್ರ ವಿಚಾರಣೆಗೊಳಪಡಿಸಲಾಗಿದ್ದು, ಉದ್ಯಮದ ಗಣ್ಯರನ್ನು ಜೆಪಿಸಿ ತನಿಖೆಗೆ ಒಳಪಡಿಸಿಲ್ಲ. ಕಾಂಗ್ರೆಸ್ ಸಚಿವರು ಹಾಜರಾಗಲಿ ಎಂಬ ಬಿಜೆಪಿ ಒತ್ತಾಯದ ಹಿಂದೆ ಉದ್ಯಮ ವಲಯದವರನ್ನು ರಕ್ಷಿಸುವ ಹುನ್ನಾರವೂ ಇರಬಹುದು~ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಜೆಪಿಸಿ ಸದಸ್ಯ ಮನೀಶ್ ತಿವಾರಿ ಆರೋಪಿಸಿದ್ದಾರೆ.

ಗುರುವಾರ ನಡೆಯಲಿರುವ ಜೆಪಿಸಿ ಸಭೆ  ಮುಂದೆ ಮಾಜಿ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಅವರು ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT