ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ದಿನವೂ ವ್ಯಾಪಕ ಪ್ರತಿಭಟನೆ

ತೆಲಂಗಾಣ ರಾಜ್ಯ ರಚನೆಗೆ ಅಖಂಡ ಆಂಧ್ರ ಬೆಂಬಲಿಗರಿಂದ ವಿರೋಧ
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ರಚನೆ ವಿರೋಧಿಸಿ ಅಖಂಡ ಆಂಧ್ರ ಬೆಂಬಲಿಗರು ಸೀಮಾಂಧ್ರ ಮತ್ತು ರಾಯಲಸೀಮೆಯಲ್ಲಿ ಗುರುವಾರ ಕೂಡ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕರ ಪ್ರತಿಮೆಗಳ ಮೇಲಿನ ದಾಳಿ, ಹಿಂಸಾಚಾರ ಮುಂದುವರಿದಿದೆ. ಈ ಮಧ್ಯೆ, ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡ್ದ್ದಿದಾರೆ.

ಈ ಮಧ್ಯೆ, ತೆಲಂಗಾಣ ರಚನೆಯನ್ನು ವಿರೋಧಿಸಿ ಕರ್ನೂಲ್ ಜಿಲ್ಲೆಯಲ್ಲಿ ಇಬ್ಬರು ಯುವಕರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ. ಒಬ್ಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ. ಕಡಪಾದಲ್ಲಿ ಆತ್ಮಾಹುತಿಗೆ ಯತ್ನಿಸಿದ ಇಬ್ಬರು ಯುವಕರನ್ನು ಪೊಲೀಸರು       ತಡೆದರು.

ಸೀಮಾಂಧ್ರದಲ್ಲಿ ಹಿಂಸಾಚಾರ ಮತ್ತು ಪ್ರತಿಭಟನೆ ಮುಂದುವರಿದಿದ್ದು, ರಾಯಲಸೀಮೆಯಲ್ಲೂ ಉದ್ವಿಗ್ನಿ ಸ್ಥಿತಿ ಇತ್ತು. ಬಹುತೇಕ ಕಡೆ ಸ್ವಯಂ ಘೋಷಿತ ಬಂದ್ ಆಚರಿಸಲಾಗಿದ್ದು, ರಸ್ತೆ, ರೈಲು ತಡೆಗಳು ನಡೆದಿವೆ.

ಜನಪ್ರತಿನಿಧಿಗಳ ಮನೆ ಮುಂದೆ ಧರಣಿ
ಅನೇಕ ಕಡೆ ಜನಪ್ರತಿನಿಧಿಗಳ ಅದರಲ್ಲೂ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆದಿದ್ದು, ನಿವಾಸಗಳಿಗೆ ಮುತ್ತಿಗೆ ಹಾಕಿ ಅವರ ರಾಜೀನಾಮೆಗೆ ಒತ್ತಾಯಿಸಲಾಯಿತು. ವಿವಿಧ ಜಿಲ್ಲೆಗಳಲ್ಲಿ ವಕೀಲರ ಸಂಘವು  72 ಗಂಟೆಗಳ ಕಾಲ ಕಲಾಪ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದು, ಗುರುವಾರ ಕೂಡ ನ್ಯಾಯಾಲಯಗಳಿಗೆ ಹಾಜರಾಗಲಿಲ್ಲ.

ರಾಯಸೀಮೆಯ ಕಡಪಾ, ಅನಂತಪುರ, ಕರ್ನೂಲ್, ಜಿಲ್ಲೆಗಳಲ್ಲಿ ಸಾವಿರಾರು ಜನರು ಬೀದಿಗಳಿದು ರಾಜ್ಯವನ್ನು ಒಡೆಯುವ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿದರು. ಈ ಜಿಲ್ಲೆಗಳಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದ ವರದಿಯಾಗಿದೆ.

ಪ್ರತಿಮೆ ದಾಳಿ ಮುಂದುವರಿಕೆ
ಮಾಜಿ ಪ್ರಧಾನಿಗಳಾದ ದಿವಂಗತ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಪ್ರತಿಮೆಗಳ ಮೇಲೆ ದಾಳಿ ಮುಂದುವರಿದಿದೆ. ಕಾಂಗ್ರೆಸ್ ಮುಖಂಡರ ಪ್ರತಿಕೃತಿಗಳನ್ನು ಸುಡುವುದು, ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಲಾಯಿತು.

ತಿರುಪತಿ, ಚಿತ್ತೂರು, ನೆಲ್ಲೂರು, ವಿಜಯವಾಡ, ಎಲೂರು, ಕಾಕಿನಾಡ, ರಾಜಮಂಡ್ರಿ, ವಿಶಾಖಪಟ್ಟಣ, ವಿಜಯನಗರ ಇನ್ನಿತರ ಪಟ್ಟಣಗಳಲ್ಲೂ ಪ್ರತಿಭಟನೆ ಮುಂದುವರಿದಿದೆ. ಕಡಪಾ, ಅನಂತಪುರ, ಚಿತ್ತೂರು, ಕರ್ನೂಲ್ ಮತ್ತು ಸೀಮಾಂಧ್ರದ ಭಾಗಗಳಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚಾರ ಗುರುವಾರ ಕೂಡ ಇರಲಿಲ್ಲ.

ತಿರುಮಲದಲ್ಲಿ ಯಾತ್ರಿಗಳ ಸಂಖ್ಯೆ ಇಳಿಮುಖ
ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಮಲ ಬೆಟ್ಟದಲ್ಲಿ ಯಾತ್ರಿಕರ ಸಂಖ್ಯೆಯಲ್ಲಿ ಇಳಿಮುಖ ಆಗಿದೆ. ಗುರುವಾರ 48 ಸಾವಿರ ಭಕ್ತರು ತಿಮ್ಮಪ್ಪನ ದರ್ಶನ ಪಡೆದರು. ತಿರುಪತಿಗೆ ಸರ್ಕಾರಿ ಬಸ್ ಸಂಚಾರ ಕೂಡ ಅಸ್ತವ್ಯಸ್ತವಾಗಿಯೇ ಇತ್ತು.

ಬೆಂಗಳೂರು, ಚೆನ್ನೈಗಳಿಂದ ಬಂದಿದ್ದ ನೂರಾರು ಖಾಸಗಿ ಬಸ್‌ಗಳು ಸಂಚರಿಸಲು ಆಗದೆ ತಿರುಪತಿಯಲ್ಲೇ ಸಿಲುಕಿಕೊಂಡಿದ್ದವು.
ವಿಜಯವಾಡದ ಶಾಖೋತ್ಪನ್ನ ವಿದ್ಯುತ್ ಘಟಕದ (ವಿಟಿಪಿಎಸ್) ನೌಕರರು, ಸರ್ಕಾರಿ ಉದ್ಯೋಗಿಗಳು ಕೆಲಸ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜನಪ್ರತಿನಿಧಿಗಳು ರಾಜೀನಾಮೆ ನೀಡಿದಿದ್ದರೆ ಮುಷ್ಕರ ಮುಂದುವರಿಸುವುದಾಗಿ ಕಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದರು.

ರೈಲು ತಡೆ: ಚಿತ್ತೂರು ಜಿಲ್ಲೆಯಲ್ಲಿ ಮತ್ತು ಧರ್ಮಾವರಂನಲ್ಲಿ ರೈಲು ತಡೆ ನಡೆಲಾಯಿತು. ಅನಂತಪುರ ಜಿಲ್ಲೆಯಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದರಿಂದ ಉದ್ವಿಗ್ನ ಸ್ಥಿತಿ ಇತ್ತು. ಕರ್ನೂಲ್‌ನಲ್ಲಿ ಕಲ್ಲೂ ತೂರಾಟ ನಡೆಸಲಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿ ಪ್ರಹಾರ ಮಾಡಲಾಯಿತು.

ಧೋನೆಯಲ್ಲಿ ರಾಜೀವ್ ಗಾಂಧಿ ಪ್ರತಿಮೆಗೆ ಬೆಂಕಿ ಹಚ್ಚಲಾಯಿತು. ಕೆಲವರು ಸಚಿವ ಇ. ಪ್ರತಾಪ್ ರೆಡ್ಡಿ ಅವರ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದರು. ಪಶ್ಚಿಮ ಗೋದಾವರಿ ಜಿಲ್ಲೆಯ ಅಥಿಲಿಯಲ್ಲಿ ಇಂದಿರಾ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದರು.

ಶ್ರೀಕಾಕುಳಂ ಜಿಲ್ಲೆಯ ತೆಕಲಿಯಲ್ಲಿ ಕೇಂದ್ರ ಸಚಿವರಾದ ಕೃಪಾ ರಾಣಿ ಅವರ ಮನೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಅವರ ರಾಜೀನಾಮೆಗೆ ಒತ್ತಾಯಿಸಿದರು. ವಿಜಯನಗರದಲ್ಲಿ ರಾಜ್ಯದ ಸಚಿವ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ್ಯ ಬೊತ್ಸಾ ಸತ್ಯನಾರಾಯಣ ಅವರ ಮನೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ತಡೆದರು.

ಸೀಮಾಂಧ್ರ ಮತ್ತು ರಾಯಲಸೀಮೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ. ಮೊಹಾಂತಿ, ಪೊಲೀಸ್ ಮಹಾನಿರ್ದೇಶಕ ವಿ. ದಿನೇಶ್ ರೆಡ್ಡಿ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು. ಸೀಮಾಂಧ್ರದಲ್ಲಿ ಗುರುವಾರ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಅವರು, ಪ್ರತಿಭಟನಾಕಾರನ್ನು ನಿಯಂತ್ರಿಸಲು ಗುಂಡು ಬಳಸದಂತೆ ಸೂಚಿಸಿದರು. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ರಕ್ಷಿಸುವಂತೆ ನಿರ್ದೇಶನ ನೀಡಿದರು.

ಈ ಮಧ್ಯೆ, ರಾಜ್ಯಪಾಲರು ರಂಜಾನ್ ಮಾಸದಲ್ಲಿ ಸಾಂಪ್ರದಾಯಿಕವಾಗಿ ಯೋಜಿಸುವ ಇಫ್ತಾರ್ ಔತಟಕೂಟದಲ್ಲೂ ಕಿರಣ್ ಕುಮಾರ್ ರೆಡ್ಡಿ ಭಾಗವಹಿಸಲಿಲ್ಲ.

3ನೇ ದಿನಕ್ಕೆ ಉಪವಾಸ ಸತ್ಯಾಗ್ರಹ
(ಪಿಟಿಐ ವರದಿ): ವಿಶಾಖಪಟ್ಟಣದಲ್ಲಿ ಆಂಧ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರಂಭಿಸಿರುವ ಉಪವಾಸ ಸತ್ಯಾಗ್ರಹವು ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮುಂದಿನ ಹೋರಾಟ ಹಾದಿ: ಇಂದು ಮುಖಂಡರ ಸಭೆ
ವಿಜಯವಾಡ: ಇಲ್ಲಿನ ಜಂಟಿ ಕ್ರಿಯಾ ಸಮಿತಿ    (ಜೆಎಸಿ) ಮುಂದಾಳತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳು ಹೋರಾಟದ ಮುಂದಿನ ಹಾದಿಯನ್ನು ನಿರ್ಧರಿಸಲು ಶುಕ್ರವಾರ (ಆ. 2) ಸಭೆ ನಡೆಸಲಿವೆ. ಈ ಸಭೆಯಲ್ಲಿ ತೆಲುಗು ದೇಶಂ ಪಕ್ಷದ ಮುಖಂಡ, ಮಾಜಿ ಸಚಿವ ವಾದ್ದೆ ಶೋಭಾನಂದ್ರೇಶ್ವರ ರಾವ್, ಶಾಸಕ ದೇವಿನೆನಿ ಉಮಾಮಹೇಶ್ವರ ರಾವ್ ಅವರು ಭಾಗವಹಿಸಲಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಸಂಸದ ರಾಜಗೋಪಾಲ್ ಅವರ ಮನೆಗೆ ಮುತ್ತಿಗೆ ಹಾಕಿ, ಅವರ ರಾಜೀನಾಮೆಗೆ ಒತ್ತಾಯಿಸಿದರು. ಕೃಷ್ಣಾ ಜಿಲ್ಲೆಯಲ್ಲಿ ವಿಜಯವಾಡ- ಹೈದರಾಬಾದ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಯಿತು.

ಮೂವರು ಪೊಲೀಸರಿಗೆ ಗಾಯ: ಅನಂತಪುರದಲ್ಲಿ ಬುಧವಾರ ನಡೆದ ಕಲ್ಲು ತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT