ಮಂಗಳವಾರ, ಜೂನ್ 15, 2021
26 °C

3ಡಿ ಮಾರ್ಗಸೂಚಿ ಸ್ಮಾರ್ಟ್ ಫೋನ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನುಮುಂದೆ ನಿಮ್ಮ ಸ್ಮಾರ್ಟ್ ಫೋನ್ ದಿಕ್ಸೂಚಿಯಷ್ಟೇ ಅಲ್ಲದೆ ವಾಸ್ತವಸೂಚಿ ಆಗಿಯೂ ಕೆಲಸ ಮಾಡಲಿದೆ! ಹೌದು, ಗೂಗಲ್ ಮ್ಯಾಪ್‌ಗಿಂತ ಭಿನ್ನವಾಗಿ ಅಪರಿಚಿತ ಸ್ಥಳದ ನೈಜ ಮಾಹಿತಿಯನ್ನೂ ನೀಡಬಲ್ಲ ಸ್ಮಾರ್ಟ್ ಫೋನ್ ಒಂದು ಸಿದ್ಧವಾಗುತ್ತಿದೆ.

ಹೆಜ್ಜೆ ಹೆಜ್ಜೆಗೂ ಸ್ಥಳದ ನೈಜ ಮಾಹಿತಿಯನ್ನು 3ಡಿ ರೂಪದಲ್ಲಿ ನೀಡುವ ಈ ಹೊಸ ಸ್ಮಾರ್ಟ್ ಫೋನನ್ನು ‘ಗೂಗಲ್’ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯೋಜನೆ (‘ಎಟಿಎಪಿ‘) ವಿಭಾಗ ರೂಪಿಸುತ್ತಿದೆ.‘ಈ ಫೋನ್ ಹಿಡಿದು ನೀವು ಹೆಜ್ಜೆ ಹಾಕುತ್ತಿದ್ದಂತೆಯೇ ಇದರಲ್ಲಿರುವ ವಿಶಿಷ್ಟ ಕ್ಯಾಮೆರಾ ನಿಮ್ಮ ಸುತ್ತಲಿನ ಪರಿಸರದ ನೈಜ ಚಿತ್ರವನ್ನು 3ಡಿ ರೂಪದಲ್ಲಿ ಸೆರೆಹಿಡಿಯುತ್ತದೆ. ಮಾತ್ರವಲ್ಲ ಆ ಸ್ಥಳದ ನೈಜ ಮಾಹಿತಿಯನ್ನೂ ಸಹ ಆ ಕ್ಷಣಕ್ಕೆ  ನೀಡುತ್ತದೆ’ ಎನ್ನುತ್ತಾರೆ ತಂತ್ರಜ್ಞ ತಂಡದ ಮುಖ್ಯಸ್ಥ ಜಾನ್ ಲೀ.‘ಪ್ರಾಜೆಕ್ಟ್ ಟ್ಯಾಂಗೋ’ ಹೆಸರಿನಲ್ಲಿ 5 ಇಂಚಿನ ದೃಶ್ಯಪರದೆ ಹೊಂದಿರುವ ಈ  ಸ್ಮಾರ್ಟ್ ಫೋನ್ ಅಭಿವೃದ್ಧಿಪಡಿಸಲಾಗುತ್ತಿದೆ. ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಒಳಗೊಂಡಿದೆ. ಅಂಧರಿಗೆ ಸ್ಥಳ ಪತ್ತೆ ಹೆಚ್ಚಲು ಮತ್ತು ಅಪರಿಚಿತ ಕಟ್ಟಡಗಳನ್ನು ಗುರುತಿಸಲು ಈ ಸ್ಮಾರ್ಟ್‌ಫೋನ್‌ ನೆರವಾಗಲಿದೆ. ಈ ಸ್ಮಾರ್ಟ್‌ಫೋನ್‌ಗಾಗಿ ವಿಶೇಷ  ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿಕೊಡುವಂತೆ ಗೂಗಲ್‌, ತಂತ್ರಜ್ಞರಿಗೆ  ಆಹ್ವಾನ ನೀಡಿದೆ.ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟೆಂನಿಂದ ಇದು ಕೆಲಸ ಮಾಡಲಿದ್ದು, ಸುತ್ತಲಿನ ಪರಿಸರವನ್ನು ಚಿತ್ರಿಸಲು ಕ್ಯಾಮೆರಾಗೆ ಅಗತ್ಯವಿರುವ ಸ್ಥಳ, ಸ್ಥಾನ ಮತ್ತು ಮಾಹಿತಿ ಒದಗಿಸಲು ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್(ಎಪಿಐ) ಒಳಗೊಂಡಿದೆ.3ಡಿ ಸ್ಕ್ಯಾನರ್ ಮತ್ತು ಚಲನೆ ಗ್ರಹಿಸುವ ಕ್ಯಾಮೆರಾ (motion camera) ತಂತ್ರಾಂಶ 3ಡಿ ಚಿತ್ರಗಳನ್ನು ತೆಗೆಯಲು ಸಹಾಯಕವಾಗಿವೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ಸಂವೇದಕ(ಸೆನ್ಸರ್) ಸೆಕೆಂಡಿಗೆ 2.50 ಲಕ್ಷ ಅಳತೆಯಲ್ಲಿ 3ಡಿ ಬಿಂಬಗಳನ್ನು ಸೆರೆಹಿಡಿಯುತ್ತದೆ. ಇದೇ ವೇಳೆ ನಿರ್ದಿಷ್ಟ ಸ್ಥಳದ 3ಡಿ ಮಾಹಿತಿಯನ್ನೂ ನೀಡುತ್ತದೆ. ಮೈಕ್ರೋಸಾಫ್ಟ್  ಕೈನೆಕ್ಟ್‌ ಸಂವೇದಕದ ಮಾದರಿಯಲ್ಲಿ ಈ ಸ್ಮಾರ್ಟ್‌ಫೋನನ್ನು ರೂಪಿಸಲಾಗಿದೆ.ಉಪಯೋಗ ಹತ್ತಾರು

ಪೀಠೋಪಕರಣ ಖರೀದಿಗೆ


ಈ ಫೋನನ್ನು ಕೈಯಲ್ಲಿ ಹಿಡಿದು ಮನೆಯೊಳಗೆ ಓಡಾಡಿದರೆ ಸಾಕು, ಬೆಡ್‌ರೂಂ, ಹಾಲ್, ವರಾಂಡಾ ಹೀಗೆ... ಪ್ರತಿಯೊಂದರ ಅಳತೆಗಳನ್ನೂ 3ಡಿ ರೂಪದಲ್ಲಿ ಸೆರೆಹಿಡಿಯುತ್ತದೆ. ಇದರಿಂದ ಯಾವ ಸ್ಥಳಕ್ಕೆ ಯಾವ ಅಳತೆಯ ಕುರ್ಚಿ, ಸೋಫಾ, ಮೇಜು ಇತ್ಯಾದಿ ಸೂಕ್ತ ಎಂಬ ತಿಳಿಯಬಹುದು.ಇದೇ ರೀತಿ ಸೂಪರ್ ಮಾರುಕಟ್ಟೆಗಳಲ್ಲಿ ಈ ಫೋನ್ ಹಿಡಿದು ಒಮ್ಮೆ ಓಡಾಡಿದರೆ, ಆ ಮಾರುಕಟ್ಟೆಯ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತದೆ. ಬಳಿಕ ಯಾವ ಜಾಗದಲ್ಲಿ ಯಾವ ನಿರ್ದಿಷ್ಟ ಕಪಾಟಿನಲ್ಲಿ ನಮಗೆ ಬೇಕಾದ ವಸ್ತು ಇದೆ ಎಂದು ಮಾಹಿತಿ ಪಡೆಯಬಹುದು.ಬಚ್ಚಿಟ್ಟ ವಸ್ತು ನೆನಪಿಸುತ್ತೆ

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಈ ಕಣ್ಣಾಮುಚ್ಚಾಲೆ ಆಟ ಆಡುತ್ತಾರೆ. ಒಬ್ಬರು ಕಣ್ಣುಮುಚ್ಚಿಕೊಂಡು ಒಂದರಿಂದ ಹತ್ತು ಎಣಿಸುವಷ್ಟರಲ್ಲಿ ಉಳಿದವರು ಅಡಗಿ ಕೂರಬೇಕು. ನಂತರ ಹುಡುಕಾಟ ಶುರುವಾಗುತ್ತದೆ. ಸಿಕ್ಕಿಬಿದ್ದವರು ಮತ್ತೆ ಕಣ್ಣುಮುಚ್ಚಬೇಕು.

ಇದೇ ರೀತಿ ಅಲ್ಲದಿದ್ದರೂ ಸಹ, ಈ ಸ್ಮಾರ್ಟ್ ಫೋನ್ ಕ್ಯಾಮೆರಾ ಆನ್ ಆಗಿರುವಾಗ ಒಂದು ವಸ್ತುವನ್ನು ಬಚ್ಚಿಟ್ಟರೆ, ಅದು ಫೋನಿನಲ್ಲಿ ದಾಖಲಾಗಿರುತ್ತದೆ. ಬಳಿಕ ನಾವು ಫೋನಿನ ಸಹಾಯದಿಂದ ಅದು ಎಲ್ಲಿದೆ ಎಂದು ತಿಳಿಯಬಹುದು.ಅಂಧ ಮಕ್ಕಳಿಗೆ

ಅಂಧ ಮಕ್ಕಳಿಗೆ  ಅನುಕೂಲವಾಗುವಂತೆಯೂ ಈ ಫೋನ್‌ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಬಹುಶಃ ಧ್ವನಿ ಸಂದೇಶ ಅಥವಾ ಸ್ಪರ್ಶದಿಂದ ತಿಳಿಯುವಂತೆ ಮಾಡಬಹುದು. ಆದರೆ ಇದು ಒಂದು ಮಾದರಿಯಷ್ಟೇ ಆಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.ಮನುಷ್ಯನ ಗ್ರಹಿಕೆ ರೀತಿಯಲ್ಲಿಯೇ ಮೊಬೈಲ್ ಸಾಧನಕ್ಕೆ ಸ್ಥಳ ಮತ್ತು ಚಲನೆ ಗ್ರಹಿಸುವಂತೆ ಮಾಡುವುದು ‘ಪ್ರಾಜೆಕ್ಟ್ ಟ್ಯಾಂಗೊ’ ಮೂಲ ಉದ್ದೇಶ ಎಂದು ಗೂಗಲ್ ತಿಳಿಸಿದೆ. ಹೀಗಾಗಿ ತನ್ನ ಯೋಜನೆಗಳನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತರಲು ಇಚ್ಛಿಸುವವರಿಗೆ ಕಂಪೆನಿಗಳಿಗೆ ತನ್ನ ಹೊಸ ಸ್ಮಾರ್ಟ್‌ಫೋನ್ ಮಾದರಿ ನೀಡಲು ಸಿದ್ಧ ಎಂದು ಗೂಗಲ್ ತಿಳಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.