ಭಾನುವಾರ, ಏಪ್ರಿಲ್ 11, 2021
33 °C

3ಯುವಕರುಮುಳುಗಿ ಸಾವು

ಪ್ರಜಾವಾಣಿ ವಾರ್ತೆ ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

ಯಾದಗಿರಿ:  ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಮೈಲಾರಲಿಂಗನ ದರ್ಶನ ಪಡೆದು ಕುಟುಂಬದ ಸದಸ್ಯರೆಲ್ಲರೂ ಸಂತಸದಿಂದ ಮನೆಯ ಹಾದಿ ಹಿಡಿಯುತ್ತಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ದರ್ಶನ ಪಡೆಯಲು ಬಂದವರು ದೇವರ ಪಾದವನ್ನೇ ಸೇರಿದರು.ತಾಲ್ಲೂಕಿನ ಮೈಲಾಪುರದಲ್ಲಿ ಗುರುವಾರ ವಿಧಿಯ ಅಟ್ಟಹಾಸಕ್ಕೆ ಬಲಿಯಾದ ಮೂವರು ಯುವಕರ ಸಂಬಂಧಿಕರ ಆಕ್ರಂದನ ಕರುಳು ಹಿಂಡುವಂತಿತ್ತು. ಮನೆಯ ದೇವರಾದ ಮೈಲಾರಲಿಂಗನ ದರ್ಶನಕ್ಕಾಗಿ ಗುಲ್ಬರ್ಗದಿಂದ ಇಡೀ ಕುಟುಂಬವೇ ಮೈಲಾಪುರಕ್ಕೆ ಆಗಮಿಸಿತ್ತು. ಆದರೆ ಯುವಕರು ಪಕ್ಕದಲ್ಲಿರುವ ಹೊನ್ನಕೆರೆಯಲ್ಲಿ ಸ್ನಾನ ಮಾಡಿ, ದೇವರ ದರ್ಶನಕ್ಕೆ ತೆರಳಲು ಮುಂದಾದರು. ಕೆರೆಯಲ್ಲಿ ಈಜಲು ಹೋದವರು ನೀರು ಪಾಲಾದರು.ಗುಲ್ಬರ್ಗದ ಸದಾಶಿವ ದೇವಾಪುರ ಎಂಬುವವರ ಪುತ್ರರಾದ ಸುದೀಪ (14), ಸಂದೀಪ (17) ಹಾಗೂ ಸದಾಶಿವ ಅವರ ಸಹೋದರಿಯ ಪುತ್ರ ವಿನಯ (20) ಗುರುವಾರ ಮಧ್ಯಾಹ್ನ ಮೈಲಾಪುರದ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಗುಲ್ಬರ್ಗದ ಬಸವೇಶ್ವರ ಕಾಲೋನಿಯ ನಿವಾಸಿಗಳಾದ ಇವರು, ತಂದೆ, ತಾಯಿಯೊಂದಿಗೆ ಕುಟುಂಬ ಸಮೇತರಾಗಿ ಶ್ರಾವಣ ಮಾಸದ ನಿಮಿತ್ತ ಮಲ್ಲಯ್ಯನ ದರ್ಶನ ಪಡೆಯಲು ಇಲ್ಲಿಗೆ ಬಂದಿದ್ದರು.ಆದರೆ ವಿನಯ, ಸುದೀಪ ಹಾಗೂ ಸಂದೀಪ ಮೂವರು ಸೇರಿ ಪಕ್ಕದಲ್ಲಿರುವ ಕೆರೆಗೆ ಈಜಲು ತೆರಳಿದ್ದೇ ಮುಳುವಾಯಿತು.ಕೆರೆಯ ದಡದಲ್ಲಿ ನಿಂತಿದ್ದ ತಂದೆ ಸದಾಶಿವ, ಇವರನ್ನು ರಕ್ಷಿಸಲು ಹೋದರೂ ಅವರ ಪ್ರಯತ್ನ ಕೈಗೂಡಲಿಲ್ಲ. ಕುಟುಂಬದ ಸದಸ್ಯರ ಕಣ್ಣೆದುರೇ ಘೋರ ದುರಂತ ನಡೆಯಿತು. ನೋಡುತ್ತಿದ್ದಂತೆಯೇ ಬೆಳೆದು ನಿಂತ ಮಕ್ಕಳು ನೀರು ಪಾಲಾಗಿದ್ದರಿಂದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ಯಾದಗಿರಿ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲ, ಗ್ರಾಮೀಣ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಯಶವಂತ ಬಿಸನಳ್ಳಿ ಸ್ಥಳಕ್ಕೆ ಧಾವಿಸಿದರು. ಮೀನುಗಾರರ ಸಹಾಯದಿಂದ ಕೆರೆಯಲ್ಲಿ ಶವಗಳನ್ನು ಹುಡುಕಲು ಹರಸಾಹಸ ನಡೆಸಿದರು. ಮೊದಲು ವಿನಯನ ಶವ ಪತ್ತೆ ಹಚ್ಚುವಲ್ಲಿ ಮೀನುಗಾರರ ಯಶಸ್ವಿಯಾದರು. ಕೆಲ ಹೊತ್ತಿನ ನಂತರ ಸುದೀಪನ ಶವವೂ ಪತ್ತೆಯಾಯಿತು. ಅಷ್ಟರಲ್ಲಿಯೇ ಕತ್ತಲು ಕವಿಯಿತು. ಮಳೆಯೂ ಆರಂಭವಾಯಿತು. ಹೀಗಾಗಿ ಸಂದೀಪನ ಶವದ ಶೋಧ ಕಾರ್ಯವನ್ನು ಅನಿವಾರ್ಯವಾಗಿ ಮೊಟಕುಗೊಳಿಸಬೇಕಾಯಿತು.ಇನ್ನೂ ಒಂದು ಶವದ ಶೋಧ ನಡೆಯಬೇಕಾಗಿದೆ. ಆದರೆ ಕತ್ತಲು ಕವಿದಿದ್ದು, ಮಳೆಯೂ ಶುರುವಾಗಿದೆ. ಕೆರೆಯ ನೀರು ಹಸಿರಾಗಿದ್ದು, ನೀರಿನಲ್ಲಿ ಮುಳುಗಿದರೂ ಏನೂ             ಕಾಣಿಸುತ್ತಿಲ್ಲ.ಹೀಗಾಗಿ ಶೋಧ ಕಾರ್ಯವನ್ನು ಅನಿವಾರ್ಯವಾಗಿ ಮೊಟಕುಗೊಳಿಸಬೇಕಾಗಿದೆ. ಶುಕ್ರವಾರ ಬೆಳಿಗ್ಗೆ ಮತ್ತೆ ಶೋಧ ಮುಂದುವರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.ಶ್ರಾವಣ ಮಾಸದ ನಿಮಿತ್ತ ದೇವರ ದರ್ಶನಕ್ಕೆ ಬಂದಿದ್ದ ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿತು. ಇನ್ನೂ ಒಬ್ಬ ಪುತ್ರನ ಶವಕ್ಕಾಗಿ ರಾತ್ರಿ ಪೂರ್ತಿ ಕಾಯುವಂತಹ ಸ್ಥಿತಿ            ನಿರ್ಮಾಣವಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.