3ರಿಂದ 53ಕ್ಕೆ ಏರಿದ ಮಕ್ಕಳ ಸಂಖ್ಯೆ

7
ಶ್ರೀರಂಗಪಟ್ಟಣ: ಕಾಳೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

3ರಿಂದ 53ಕ್ಕೆ ಏರಿದ ಮಕ್ಕಳ ಸಂಖ್ಯೆ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ.ಹೊಸೂರು ಕಾಳೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3 ವರ್ಷಗಳ ಹಿಂದೆ ಕೇವಲ ಮೂವರು ವಿದ್ಯಾರ್ಥಿಗಳಷ್ಟೇ ಇದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 53 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.ಅಂದು ಇದ್ದ ಇಬ್ಬರು ಶಿಕ್ಷಕರ ನಿರಂತರ ಗೈರು, ವಿಳಂಬ ಧೋರಣೆ, ಶಿಕ್ಷಣ ವಿರೋಧಿ ನೀತಿಯಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಹಿಸಲು ಹಿಂದೇಟು ಹಾಕುತ್ತಿದ್ದರು. ಕರ್ತವ್ಯಲೋಪದ ಆರೋಪದ ಮೇಲೆ ಆ ಶಿಕ್ಷಕರನ್ನು ಅಮಾನತುಗೊಳಿಸಿ ಬೇರೆ ಶಿಕ್ಷಕರನ್ನು ನಿಯೋಜಿಸಿದ ನಂತರ ವಿದ್ಯಾರ್ಥಿಗಳು ಶಾಲೆ ಕಡೆಗೆ ಮುಖ ಮಾಡುತ್ತಿದ್ದಾರೆ.ಕಾಳೇನಹಳ್ಳಿ ಶಾಲೆಯಲ್ಲಿ ಶುಕ್ರವಾರ ನಡೆದ ಎಜುಸ್ಯಾಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು ಈ ವಿಷಯ ಪ್ರಸ್ತಾಪಿಸಿದರಲ್ಲದೆ, ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಎಜುಸ್ಯಾಟ್‌ನಲ್ಲಿ ಪ್ರತಿದಿನ ಮೂರು ಶೈಕ್ಷಣಿಕ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.ಅವುಗಳನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಗದೀಶ್ ಸಲಹೆ ನೀಡಿದರು. ಶಿಕ್ಷಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಮಂಜುಳಾ ರಮೇಶ್ ಮಾತನಾಡಿ, ಸರ್ಕಾರ ಶಾಲೆ ಎಂದರೆ ಪೋಷಕರಲ್ಲಿ ತಾತ್ಸಾರ ಭಾವನೆ ಇದ್ದು, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅದನ್ನು ಹೋಗಲಾಡಿಸಬೇಕು ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಲತಾ ಸಿದ್ದೇಗೌಡ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಹೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗು, ಮುಖ್ಯ ಶಿಕ್ಷಕಿ ಶಾಂತಮ್ಮ, ಲಿಂಗರಾಜಪ್ಪ, ಹರೀಶ್, ಜೆ.ರಮೇಶ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry