ಗುರುವಾರ , ಮೇ 13, 2021
36 °C
`ಕೋಬ್ರಾಪೋಸ್ಟ್' ಆರೋಪ ಪ್ರಕರಣ: ಆರ್‌ಬಿಐ ಕ್ರಮ

3 ಖಾಸಗಿ ಬ್ಯಾಂಕ್‌ಗೆ ರೂ 10.5 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ದೇಶದ ಮೂರು ಪ್ರಮುಖ ಖಾಸಗಿ ಬ್ಯಾಂಕ್‌ಗಳು ಕಪ್ಪು ಹಣ ಸಕ್ರಮಗೊಳಿಸುವ ಯತ್ನ ನಡೆಸಿವೆ ಎಂದು ಆನ್‌ಲೈನ್ ಸುದ್ದಿಸಂಸ್ಥೆ `ಕೋಬ್ರಾಪೋಸ್ಟ್' ಕುಟುಕು ಕಾರ್ಯಾಚರಣೆ ಮೂಲಕ ಆರೋಪಿಸಿದ್ದ ಪ್ರಕರಣದ ತನಿಖೆ ಕೊನೆಗೊಳಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ),   ಅಕ್ರಮ ಹಣಕಾಸು ವಹಿವಾಟಿನ ಚಟುವಟಿಕೆ ಮೇಲ್ನೋಟಕ್ಕೆ ಗೋಚರಿಸಿಲ್ಲ ಎಂದಿದೆ.ಆದರೆ, `ನಿಮ್ಮ ಗ್ರಾಹಕರನ್ನು ಅರಿಯಿರಿ'(ಕೆವೈಸಿ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮೂರೂ ಬ್ಯಾಂಕ್‌ಗಳಿಗೆ ಒಟ್ಟು ರೂ10.50 ಕೋಟಿ ದಂಡ ವಿಧಿಸಿದೆ.ಮೂರೂ ಬ್ಯಾಂಕ್‌ಗಳ ವಿರುದ್ಧದ ಆರೋಪಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸಲಾಗಿದೆ. ಬ್ಯಾಂಕ್‌ಗಳ ಪ್ರಧಾನ ಕಚೇರಿ ಮತ್ತು ಕೆಲವು ಶಂಕಿತ ಶಾಖೆಗಳಲ್ಲಿ ವಹಿವಾಟಿನ ಲೆಕ್ಕದ ಪುಸ್ತಕಗಳು, ಆಂತರಿಕ ನಿಯಂತ್ರಣ ವ್ಯವಸ್ಥೆ ಮೊದಲಾದ ಅಂಶಗಳನ್ನು ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಪರೀಕ್ಷಿಸಿದ್ದೇವೆ. ಕೆಲವೆಡೆ `ಕೆವೈಸಿ' ನಿಯಮಗಳನ್ನು ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಕ್ಸಿಸ್ ಬ್ಯಾಂಕ್‌ಗೆ ರೂ5 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ರೂ4.5 ಕೋಟಿ ಹಾಗೂ ಐಸಿಐಸಿಐ ಬ್ಯಾಂಕ್‌ಗೆ ರೂ1 ಕೋಟಿ ದಂಡ ವಿಧಿಸಲಾಗಿದೆ ಎಂದು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ರೂ50,000ಕ್ಕೂ ಅಧಿಕ ಮೊತ್ತದ ಯಾವುದೇ ವಹಿವಾಟಿನಲ್ಲಿ `ಕೆವೈಸಿ' ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ, ಮೂರೂ ಖಾಸಗಿ ಬ್ಯಾಂಕ್‌ಗಳ ಕೆಲವು ಶಾಖೆಗಳಲ್ಲಿ ನಗದು ವರ್ಗಾವಣೆ, ಚಿನ್ನದ ಮಾರಾಟ ಮೊದಲಾದ ರೂ50,000ಕ್ಕೂ ಅಧಿಕ ಮೌಲ್ಯದ ವಹಿವಾಟಿನಲ್ಲಿ ಗ್ರಾಹಕರಿಂದ `ಪ್ಯಾನ್ ಕಾರ್ಡ್' ಸಂಖ್ಯೆಯನ್ನೇ ಪಡೆದಿಲ್ಲ. 60 ಅಥವಾ 61ನೇ ಸಂಖ್ಯೆಯ ಮಾದರಿ ಅರ್ಜಿಗಳನ್ನೂ ಭರ್ತಿ ಮಾಡಿಸಿಕೊಂಡಿಲ್ಲ. ಇದು `ಕೆವೈಸಿ' ನಿಯಮದ ಸ್ಪಷ್ಟ ಉಲ್ಲಂಘನೆ ಎಂದು `ಆರ್‌ಬಿಐ' ವಿವರಿಸಿದೆ.ಅಕ್ರಮ ಮೂಲದ ನಗದು ಅಥವಾ ಕಪ್ಪು ಹಣ ಸಕ್ರಮಗೊಳಿಸುವ ಯತ್ನ ನಡೆದಿದೆ ಎಂಬ ಆರೋಪ ವಿಚಾರದಲ್ಲಿ ಏನಿದ್ದರೂ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಕೊನೆಗೊಂಡ ಬಳಿಕವಷ್ಟೇ ಅಂತಿಮ ನಿರ್ಧಾರಕ್ಕೆ ಬರಬಹುದಾಗಿದೆ ಎಂದೂ `ಆರ್‌ಬಿಐ' ಸ್ಪಷ್ಟಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.