3 ತಿಂಗಳಾದರೂ ದಲಿತರಿಗೆ ಸಿಗದ ಸೂರು

7

3 ತಿಂಗಳಾದರೂ ದಲಿತರಿಗೆ ಸಿಗದ ಸೂರು

Published:
Updated:
3 ತಿಂಗಳಾದರೂ ದಲಿತರಿಗೆ ಸಿಗದ ಸೂರು

ಕೆಜಿಎಫ್: ಆಕಸ್ಮಿಕ ಬೆಂಕಿ ತಗುಲಿ ಇಪ್ಪತ್ತೊಂದು ದಲಿತರ ಮನೆಗಳು ಬೆಂಕಿಗೆ ಆಹುತಿಯಾಗಿ ಮೂರು ತಿಂಗಳಾದರೂ; ಆ ಮನೆಗಳಲ್ಲಿದ್ದ ಮನಗಳ ಬೆಂಕಿ ಇನ್ನೂ ಆರಿಲ್ಲ. ಗ್ರಾಮದಲ್ಲಿ ಅಶಾಂತಿ ಮೂಡಿರುವ ಘಟನೆ ಬೇತಮಂಗಲ ಸಮೀಪದ ಕೂಳೂರು ಗ್ರಾಮದಲ್ಲಿ ನೆಲೆಸಿದೆ.ಅಗ್ನಿ ಅನಾಹುತಕ್ಕೊಳಗಾದ ಕುಟುಂಬಗಳ ನಡುವೆ ನಡೆಯುತ್ತಿರುವ ಭಿನ್ನಮತವೂ ಸೇರಿದಂತೆ ಹಲವು ಸಂಗತಿಗಳು ಗ್ರಾಮದ ಜನರ ಒಳಗುದಿ ಇನ್ನೂ ಆರದಂತೆ ಮಾಡಿದೆ. ಇದರಿಂದ ತಾತ್ಕಾಲಿಕ ಗುಡಿಸಿಲಿನಿಂದ ಕಾಯಂ ನಿವಾಸಕ್ಕೆ ತೆರಳುವ ದಲಿತರ ಆಸೆ ಸದ್ಯದ ಪರಿಸ್ಥಿತಿಯಲ್ಲಿ ಈಡೇರುವ ಲಕ್ಷಣ ಕಾಣುತ್ತಿಲ್ಲ.ಗ್ರಾಮದ ಬಡ ಕಾರ್ಮಿಕ ದಲಿತ ಕುಟುಂಬಗಳು ತೆಂಗಿನ ಗರಿ ಹೊದ್ದ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿವೆ. ಕೆಲವು ಕುಟುಂಬ ಊರಾಚೆ ಕೆರೆ ಬದಿ ಜಮೀನುದಾರರೊಬ್ಬರ ಜಮೀನಿನಲ್ಲಿ ತೆಂಗಿನ ಗರಿಯ ಗುಡಿಸಲು ಹಾಕಿಕೊಂಡು ದಿನ ದೂಡುತ್ತಿವೆ.ಅನಾಹುತ ನಡೆದ ತಕ್ಷಣ ಇಡೀ ಜಿಲ್ಲಾಡಳಿತ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರು, ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು. ಹದಿನೈದು ದಿನಗಳೊಳಗೆ ದಲಿತರಿಗೆ ನಿವೇಶನ ನೀಡಿ, ಮನೆ ಕಟ್ಟಿ ಕೊಡುವ ಭರವಸೆಯೂ ದೊರೆತ್ತಿತ್ತು. ಆದರೆ ಗ್ರಾಮದ ವಾಸ್ತವ ಪರಿಸ್ಥಿತಿಯನ್ನು ಅಧಿಕಾರಿಗಳು ತಕ್ಷಣ ಅರಿಯಲಿಲ್ಲ.ನಂತರ ಅದರ ಬಗ್ಗೆ ತಿಳಿದುಕೊಂಡರೂ ಸರ್ಕಾರಿ ಜಾಗದ ಕೊರತೆ ಹಾಗೂ ಮನೆ ಸುಟ್ಟು ಹೋದ ಸರ್ವೇ ನಂಬರ್, ಮಾಲೀಕತ್ವದ ಗೊಂದಲದಿಂದ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ರಾಮಸಾಗರ ಪಂಚಾಯಿತಿ 29 ದಲಿತರಿಗೆ ಮನೆ ನಿರ್ಮಿಸಲು ಸಹಾಯಧನ ನೀಡಿದ್ದರೂ ನಿವೇಶನ ಇಲ್ಲದೆ ಸ್ವಂತ ಮನೆ ಹೊಂದುವ ಆಸೆ ದೂರವಾಗಿದೆ.ಗ್ರಾಮದಲ್ಲಿ ಸುಟ್ಟು ಹೋದ ಮನೆಗಳ ಮಾಲೀಕತ್ವ ಗ್ರಾಮದ ಕುಮಾರಸ್ವಾಮಿ ನಾಯ್ಡು ಎಂಬ ರೈತರ ಕುಟುಂಬಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಅವರ ಆಶ್ವಾಸನೆಗೆ ಕಟ್ಟುಬಿದ್ದ ಬಹುತೇಕ ದಲಿತರು ತಲಾ ಹದಿನೈದು ಸಾವಿರ ರೂಪಾಯಿ ನೀಡಿ ನಿವೇಶನಗಳನ್ನು ತಮ್ಮ ಹೆಸರಿಗೆ ಮಾಡಿಕೊಂಡು, ಸರ್ಕಾರದಿಂದ ಬಿಡುಗಡೆಯಾದ ಹಣದಿಂದ ಮನೆ ನಿರ್ಮಿಸಲು ಮುಂದಾಗಿದ್ದರು. ಅದಕ್ಕಾಗಿ ಸರ್ವೇ ನಂಬರ್‌ನಿಂದ ಭೂ ಪರಿವರ್ತನೆ ಮಾಡಿ, ನಿವೇಶನ ರಚಿಸಲು ಪಂಚಾಯಿತಿಗೆ ಅರ್ಜಿ ಸಹ ಸಲ್ಲಿಸಲಾಗಿತ್ತು.ಆದರೆ ಕೆಲ ದಲಿತ ಕುಟುಂಬಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದವು. ಸದರಿ ಜಾಗವನ್ನು ಕುಮಾರಸ್ವಾಮಿ ಕುಟುಂಬದವರು ಬಹಳ ಹಿಂದೆಯೇ ಚುನಾವಣೆ ಸಮಯದಲ್ಲಿ ಓಟಿಗಾಗಿ ಉಚಿತವಾಗಿ ನೀಡಿದ್ದರು. ಈ ಸಂಬಂಧ ವಾಗ್ದಾನ ಪತ್ರ ಸಹ ನೀಡಲಾಗಿತ್ತು. ಈಗ ಅದಕ್ಕೆ ಕಿಮ್ಮತ್ತು ಕೇಳುವುದು ಸರಿಯಲ್ಲ.ಸರ್ಕಾರವೇ ಜಮೀನು ವಶಪಡಿಸಿಕೊಂಡು ತಮಗೆ ನೀಡುವಂತೆ ಆಗ್ರಹಿಸಿ ಹಣ ನೀಡಲು ನಿರಾಕರಿಸಿದರು.

ಆದರೆ, ಕುಮಾರಸ್ವಾಮಿ ನಾಯ್ಡು ಈ ವಾದ ತಳ್ಳಿ ಹಾಕುತ್ತಾರೆ. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಪಂಚಾಯಿತಿಗೆ ಸಲ್ಲಿಸಲಾಗಿದೆ. ನಿವೇಶನ ರಚಿಸಲು ಆಗುವ ಖರ್ಚನ್ನು ನೀಡಿದ ಇಪ್ಪತ್ತೊಂಬತ್ತು ದಲಿತರಿಗೆ ನಿವೇಶನ ನೀಡುವುದು ಖಚಿತ ಎನ್ನುತ್ತಾರೆ.ಈಚೆಗೆ ಒಂದು ಗುಂಪಿನವರು ಜೆಸಿಬಿ ತಂದು, ಬೆಂಕಿ ಬಿದ್ದು ಸುಟ್ಟುಹೋಗಿದ್ದ ಮನೆಗಳನ್ನು ನೆಲಸಮ ಮಾಡುತ್ತಿದ್ದಾಗ ಮತ್ತೊಂದು ಗುಂಪು ಪೊಲೀಸರಿಗೆ ದೂರು ನೀಡಿತು. ರಾತ್ರೋರಾತ್ರಿ ಗ್ರಾಮಕ್ಕೆ ಬಂದ ಬೇತಮಂಗಲ ಪೊಲೀಸರು ಜಮೀನು ಮಾಲೀಕನೆಂದು ಹೇಳಲಾಗುವ ಕುಮಾರಸ್ವಾಮಿ ನಾಯ್ಡು ಸೇರಿದಂತೆ ಇತರ ಹನ್ನೆರಡು ದಲಿತರ ಮೇಲೆ ಮೊಕದ್ದಮೆ ಹೂಡಿದರು.ಇದರಿಂದ ಗ್ರಾಮದಲ್ಲಿ ಪರಿಸ್ಥಿತಿ ವಿಷಮಗೊಂಡಿದೆ. ದಲಿತರಲ್ಲೇ ಎರಡು ಗುಂಪುಗಳಾಗಿ ಪರಸ್ಪರ ಅಪನಂಬಿಕೆ, ಅವಿಶ್ವಾಸದಲ್ಲಿ ಒಬ್ಬರು ಮತ್ತೊಬ್ಬರನ್ನು ದೂರುವ ಕೆಲಸ ಆಗುತ್ತಿದೆ. ಮನೆ ಕಳೆದುಕೊಂಡು ಎಳೆ ಮಕ್ಕಳು, ವೃದ್ಧರನ್ನು ಸಣ್ಣ ಜೋಪಡಿಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿರುವವರಿಗೆ ಈಗ ಪೊಲೀಸರ ಭಯ ಕೂಡ ಆವರಿಸಿದೆ.ಗ್ರಾಮಕ್ಕೆ ಬರುವ ಅಪರಿಚಿತರನ್ನು ಸಂಶಯದ ದೃಷ್ಟಿಯಿಂದ ನೋಡಲಾಗುತ್ತಿದೆ. ಮುಂಬರುವ ಮಳೆಗಾಲವನ್ನು ಯಾವ ರೀತಿ ಎದುರಿಸುವುದು ಎಂಬ ಚಿಂತೆ ಮಹಿಳೆಯರನ್ನು ಕಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry