3 ತಿಂಗಳ ಜೀವದಾನ; ಎಲ್ಲರ ಅಂತರಂಗದ ಹಾರೈಕೆ

7

3 ತಿಂಗಳ ಜೀವದಾನ; ಎಲ್ಲರ ಅಂತರಂಗದ ಹಾರೈಕೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ, ನೈತಿಕ ನೆಲೆಯಲ್ಲಿ ಬಹುಮತ ಕಳೆದುಕೊಂಡಿದೆ ಎಂಬುದನ್ನು ವಿಧಾನಸಭೆಯ ಹಲವಾರು ಸದಸ್ಯರು ಒಪ್ಪುತ್ತಾರೆ. ಅದರ ಜೊತೆಗೇ ಸರ್ಕಾರದ ಉಳಿವಿಗೆ ತಾಂತ್ರಿಕವಾಗಿ ಅಪಾಯ ಇಲ್ಲ ಎಂದು ಉಸುರುತ್ತಾರೆ. ಇದು ಅವರ ಒಳಬಯಕೆಯೂ ಹೌದು. ಇದರಲ್ಲಿ ಬಿಜೆಪಿ, ಕೆಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಭೇದವೇ ಇಲ್ಲ. ಸರ್ಕಾರ ಹೇಗಾದರೂ ಮೂರು ತಿಂಗಳು ಮುಂದುವರಿಯಲಿ ಎಂಬುದು ಶಾಸಕರ ಹಾರೈಕೆ.ಕರ್ನಾಟಕ ಜನತಾ ಪಕ್ಷ ಹಾವೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದ ಮುಖ್ಯ ವೇದಿಕೆಯಲ್ಲಿ ಬಿಜೆಪಿಯ 14 ಮಂದಿ ಶಾಸಕರು ಇದ್ದರು. ಮತ್ತಿಬ್ಬರು ಸದಸ್ಯರು ಬಿಎಸ್‌ಆರ್ ಕಾಂಗ್ರೆಸ್ ಬಾವುಟ ಹಿಡಿದು ಓಡಾಡುತ್ತಿದ್ದಾರೆ. ರಾಜಕೀಯದ ಈ ಪಲ್ಲಟಗಳಿಂದಾಗಿ ಆಡಳಿತ ಪಕ್ಷದ ಸಂಖ್ಯಾಬಲ 101ಕ್ಕೆ ಕುಸಿದಿದೆ. ಇವರೆಲ್ಲ ಆಡಳಿತ ಪಕ್ಷದ ಜೊತೆ ಸಂಬಂಧ ತುಂಡರಿಸಿಕೊಂಡರೆ, ಆಗ ಸರಳ ಬಹುಮತಕ್ಕೆ 11 ಸದಸ್ಯರ ಕೊರತೆ ಬೀಳುತ್ತದೆ!ಬಿಜೆಪಿಯ `ಬಲ'ಗುಂದಿಸಿದ ಕೆಜೆಪಿ ಮುಖಂಡರಾಗಲಿ, ಇಲ್ಲವೇ ಇತರೆ ಪ್ರತಿಪಕ್ಷಗಳಾಗಲಿ ಜೋರು ಸೀನಿದರೆ ಸರ್ಕಾರ ಕುಸಿದುಬೀಳುವ ಎಲ್ಲ ಸಾಧ್ಯತೆ ಇದೆ. ಬಿ.ಎಸ್.ಯಡಿಯೂರಪ್ಪ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಕೆಜೆಪಿ ಸದಸ್ಯತ್ವ ಪಡೆದರು. ಇದೇ ಮಾರ್ಗ ಅನುಸರಿಸುವಂತೆ ತಮ್ಮ ಬೆಂಬಲಿಗ ಶಾಸಕರಿಗೆ ಅವರು ಸಣ್ಣದೊಂದು ಸನ್ನೆ ಮಾಡಿದರೆ ಈ ಸರ್ಕಾರದ ಆಯುಷ್ಯ ಮುಗಿಯುತ್ತದೆ. ಆದರೆ, ಅವರಿಗೆ ಅದು ಬೇಕಾಗಿಲ್ಲ. ಆದರೂ `ಸರ್ಕಾರ ಬಹುಮತ ಕಳೆದುಕೊಂಡಿದೆ. ಶೆಟ್ಟರ್ ತಕ್ಷಣ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿ ವೇದಿಕೆಯಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ.ಸರ್ಕಾರಕ್ಕೆ ಬಹುಮತ ಇಲ್ಲ. ಹೀಗಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವ ನೈತಿಕ ಹಕ್ಕಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಸದನದಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ. ಹಾಗಾದರೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಿರೇ ಎಂದು ಕೇಳಿದರೆ, ಹೌದು ಎನ್ನುವವರು ಒಬ್ಬರೂ ಸಿಗುವುದಿಲ್ಲ. ಸದನದ ಹೊರಗೆ ಆಡುತ್ತಿರುವ ವೀರಾವೇಶದ ಮಾತು-ಟೀಕೆಗಳು ಸಾರ್ವಜನಿಕ ಬಳಕೆಗಷ್ಟೇ ಎಂಬುದನ್ನು ಶಾಸಕರೇ ಒಪ್ಪುತ್ತಾರೆ.ಕೆಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ ಎಂಬ ಕಾರಣಕ್ಕೇ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಬಿಜೆಪಿಯ 14 ಶಾಸಕರು ಈಗ ಅದೇ ಪಕ್ಷದ ವೇದಿಕೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. `ವೇದಿಕೆ ಹತ್ತಿಸಿ, ನೋಡೋಣ' ಎಂದು ಸವಾಲು ಎಸೆದಿದ್ದ ಬಿಜೆಪಿ ನಾಯಕರು, ಶಿಸ್ತು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವುದು ಇದಕ್ಕೆ ಕಾರಣ ಆಗಿರಬಹುದು. ಅಧಿವೇಶನ ಮುಗಿದರೆ ಎರಡು-ಮೂರು ತಿಂಗಳು ಹೇಗೋ ದೂಡಬಹುದು ಎಂಬ ಲೆಕ್ಕಾಚಾರ ಅವರದು.ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಯಾದವರು ಏನೆಲ್ಲ ಕಷ್ಟಪಡಬೇಕಾಗುತ್ತದೆ ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ನಾನಾ ನಿದರ್ಶನಗಳು ಸಿಗುತ್ತವೆ. ಆದರೆ, ಶೆಟ್ಟರ್ ಅವರಿಗೆ ಆ ಕಷ್ಟವೇ ಇಲ್ಲ. ಪಕ್ಷದಲ್ಲಿ ಕಾಲೆಳೆಯುವವರ ಕಾಟ ಇಲ್ಲ. ಏಕೆಂದರೆ ಎದುರಿಗೆ ಕೆಜೆಪಿ ಎಂಬ `ಗುಮ್ಮ' ಇದೆ. ಸರ್ಕಾರಕ್ಕೆ `ಜೀವದಾನ' ನೀಡಲು ವಿರೋಧ ಪಕ್ಷಗಳು ಪೈಪೋಟಿಗೆ ಇಳಿದಿವೆ. ಸದನದಲ್ಲಿ ಒಂದು ವೇಳೆ ಬಹುಮತ ಸಾಬೀತು ಪ್ರಶ್ನೆ ಎದುರಾದರೆ ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಶಾಸಕರೇ ಆಡಳಿತ ಪಕ್ಷದ ಪರ ಕೈ ಎತ್ತಿ ಸರ್ಕಾರದ ರಕ್ಷಣೆಗೆ ಧಾವಿಸಲಿದ್ದಾರೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿ ನಡೆದಿದೆ.`ಯಾವುದೇ ಆರ್ಥಿಕ ವರ್ಷದಲ್ಲಿ ಡಿಸೆಂಬರ್, ಜನವರಿಯಲ್ಲೇ ಕೆಲಸ-ಕಾರ್ಯಗಳು ಬಿರುಸು ಪಡೆಯುವುದು. ರಸ್ತೆ, ನೀರು ಪೂರೈಕೆ ಕಾಮಗಾರಿಗಳು ಈಗಷ್ಟೇ ಚಾಲನೆ ಪಡೆದಿವೆ. ಅವು ಪೂರ್ಣಗೊಂಡರೆ ವೋಟು ಕೇಳುವುದಕ್ಕಾದರೂ ಮುಖ ಇರುತ್ತದೆ....' ಎಂದು ಆಡಳಿತ ಪಕ್ಷದ ಸದಸ್ಯರೊಬ್ಬರು ಅನಿಸಿಕೆ ಹಂಚಿಕೊಂಡರು. ಆಡಳಿತ ಪಕ್ಷದವರಿಗೆ ಚೂರೋ ಪಾರೋ ಕೆಲಸ ಮಾಡಿಸಿಕೊಳ್ಳುವ ತವಕ. ವಿರೋಧ ಪಕ್ಷಗಳದು ಸರ್ಕಾರ ಉರುಳಿಸಿ `ಕಳಂಕ' ಅಂಟಿಸಿಕೊಳ್ಳುವುದು ಬೇಡ ಎಂಬ ಎಚ್ಚರಿಕೆಯ ನಡೆ. ಇದರ ಮಧ್ಯೆ, ಬಹುಮತ-ಅಲ್ಪಮತ ಕುರಿತು ತಲೆಕೆಡಿಸಿಕೊಳ್ಳುವವರು ಯಾರು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry