3 ಪತ್ರ ಬರೆದಿದ್ದ ಜೆಸಿಂತಾ

7

3 ಪತ್ರ ಬರೆದಿದ್ದ ಜೆಸಿಂತಾ

Published:
Updated:

ಲಂಡನ್ (ಪಿಟಿಐ): ಇಲ್ಲಿಯ ಆಸ್ಪತ್ರೆಯೊಂದರ ನರ್ಸ್, ಮಂಗಳೂರು ಮೂಲದ ಜೆಸಿಂತಾ ಸಲ್ಡಾನ ಆತ್ಮಹತ್ಯೆಗೆ ಮುನ್ನ ಮೂರು ಪತ್ರಗಳನ್ನು ಬರೆದಿಟ್ಟಿದ್ದು, ಎರಡು ಪತ್ರಗಳು ಅವರ ನಿವಾಸದಲ್ಲಿಯೂ ಇನ್ನೊಂದು ಪತ್ರ ಅವರ ಬಳಿಯಲ್ಲಿಯೇ ಇತ್ತು ಎಂದು ಈ ಸಂಬಂಧ ವಿಚಾರಣೆ ನಡೆಸುತ್ತಿರುವ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.ಆಸ್ಟ್ರೇಲಿಯಾದ ರೇಡಿಯೊ ನಿರೂಪಕರ ಹುಸಿ ಕರೆಯಿಂದಾಗಿ ಜೆಸಿಂತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕುರಿತು ವಿಶ್ವವ್ಯಾಪಿ ಕಳವಳ, ಖಂಡನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶವ ಪರೀಕ್ಷೆ ವರದಿಯನ್ನು ಕುತೂಹಲದಿಂದ ಕಾಯಲಾಗಿತ್ತು. ಜೆಸಿಂತಾ ಅವರದ್ದು ಅಸಹಜ ಸಾವು ಎಂದು ಪರಿಗಣಿಸಿದ್ದರಿಂದ ಗುರುವಾರ ಶವ ಪರೀಕ್ಷೆ ವರದಿಯನ್ನು ವಿಶೇಷ ಕೋರ್ಟ್‌ನಲ್ಲಿ ಬಹಿರಂಗಗೊಳಿಸಲಾಗಿದೆ.46 ವರ್ಷದ ಜೆಸಿಂತಾ ಹುಸಿ ಕರೆ ಸ್ವೀಕರಿಸಿದ ಮೂರು ದಿನಗಳ ತರುವಾಯ ಆಸ್ಪತ್ರೆಯ ಸಮೀಪದಲ್ಲಿರುವ ಸಿಬ್ಬಂದಿ ವಸತಿಗೃಹದ ತನ್ನ ಕೋಣೆ ಕಪಾಟಿನ ಬಾಗಿಲಿಗೆ ಸ್ಕಾರ್ಫ್‌ನಿಂದ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮಣಿಕಟ್ಟು ಭಾಗದಲ್ಲಿ ಗಾಯವಾಗಿದೆ ಎಂಬ ವಿವರ ವರದಿಯಲ್ಲಿದೆ.ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಬ್ಬರು ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಗ ಯಾವುದೇ ರೀತಿಯ ಅನುಮಾನಾಸ್ಪದ ವಾತಾವರಣ ಸೃಷ್ಟಿಯಾಗಿರಲಿಲ್ಲ ಎಂದು ತನಿಖೆ ನಡೆಸಿದ ಮುಖ್ಯ ಇನ್‌ಸ್ಪೆಕ್ಟರ್ ಜೇಮ್ಸ ಹರ್ಮ್ಯಾನ್ ತಿಳಿಸಿದರು.ಆತ್ಮಹತ್ಯೆಗೆ ಮುನ್ನ ಅವರು ಬರೆದಿಟ್ಟಿದ್ದ ಪತ್ರಗಳಲ್ಲಿ ಏನಿದೆ ಎನ್ನುವುದನ್ನು ಮಾತ್ರ ಬಹಿರಂಗಪಡಿಸಿಲ್ಲ. ತನಿಖೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಪತ್ರಗಳ ವಿವರ ಬಹಿರಂಗಪಡಿಸಲು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry