ಶನಿವಾರ, ಮೇ 8, 2021
19 °C

3 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಗರದಲ್ಲಿ ಓಡಾಡುವ ಸಣ್ಣ ಹಾಗೂ ದೊಡ್ಡ ಆಟೋ ರಿಕ್ಷಾಗಳಲ್ಲಿ ಚಾಲಕ ಸೇರಿದಂತೆ ನಾಲ್ಕು ಜನರಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯದಂತೆ ಆಟೋರಿಕ್ಷಾ ಚಾಲಕರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎ.ವೆಂಕಟೇಶ್ ಮನವಿ ಮಾಡಿದರು.ದೊಡ್ಡಬಳ್ಳಾಪುರದ ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಸಣ್ಣ ಹಾಗೂ ದೊಡ್ಡ ಆಟೋಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಬಸ್ ನಿಲ್ದಾಣದಲ್ಲಿ ದಿನ ನಿತ್ಯ ಆಟೋ ಚಾಲಕರ ನಡುವೆ ಬೀದಿ ಜಗಳಗಳು ನಡೆಯುತ್ತಿವೆ.ಈ ಹಿನ್ನೆಲೆಯಲ್ಲಿ ನಾಲ್ಕು ಪ್ರಯಾಣಿಕರಿಗಿಂತ ಹೆಚ್ಚು ಜನರನ್ನು ಆಟೋದಲ್ಲಿ ಕರೆದೊಯ್ದರೆ ಕ್ರಮ ಜರುಗಿಸುವಂತೆ  ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಅಸಂಘಟಿತರಾಗಿರುವ ಆಟೋ ಚಾಲಕರು ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳವ ಕುರಿತು ಹಲವಾರು ಸಭೆಗಳಲ್ಲಿ ಅರಿವು ಮೂಡಿಸಿದ್ದರೂ ಸಹ ತಮ್ಮ ತಮ್ಮಲ್ಲೇ ಸ್ಪರ್ಧೆ ಏರ್ಪಡಿಸಿಕೊಂಡು ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ.ಅದರಲ್ಲೂ `ಅಪೆ~ ಆಟೋಗಳು ಬಂದ ಮೇಲೆ ಒಂದು ಆಟೋದಲ್ಲಿ ಕನಿಷ್ಟ 8 ರಿಂದ 15 ಜನ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಇದರಿಂದ ಮೂರು ಪ್ರಯಾಣಿಕರನ್ನು ಕರೆದೊಯ್ಯಬಲ್ಲ ಆಟೋ ಮಾಲೀಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.ಪ್ರಯಾಣಿಕರು ಹಣ ನೀಡಿಯೂ ಸಹ ಸುಖಕರವಾಗಿ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಆಟೋ ಚಾಲಕರ ಬಳಿ ಕಡ್ಡಾಯವಾಗಿ ಸೂಕ್ತ ದಾಖಲಾತಿ ಹಾಗೂ ಸಮವಸ್ತ್ರಗಳು ಇರುವಂತೆ ಪೊಲೀಸರು ತಪಾಸಣೆ ನಡೆಸಬೇಕು. ಇದರಿಂದ ನಗರದ ಬಸ್ ನಿಲ್ದಾಣದಲ್ಲಿ ದಿನ ನಿತ್ಯ ನಡೆಯುವ ಜಗಳವನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.ಸಭೆಯಲ್ಲಿ ಭಾಗವಹಿಸಿದ್ದ ನಗರ ಸಭೆ ಸದಸ್ಯ ಟಿ.ಎನ್.ಪ್ರಭುದೇವ್ ಮಾತನಾಡಿ, ಇಂದು ಹೊಸದಾಗಿ ರಸ್ತೆಗೆ ಬಂದಿರುವ `ಅಪೆ~ ಆಟೋಗಳ ಬೆಲೆಯು ಹೆಚ್ಚು. ಹೀಗಾಗಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು ಅನಿವಾರ್ಯವಾಗಲಿದೆ.ಈ ಆಟೋಗಳಲ್ಲಿ ಕಡಿಮೆ ಪ್ರಯಾಣ ದರ ಎನ್ನುವ ಕಾರಣಕ್ಕೆ ಜವಳಿ ಪಾರ್ಕ್‌ಗೆ ಹೋಗುವ ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಈ ಹಿನ್ನೆಯಲ್ಲಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಆಟೋ ಚಾಲಕರು ನಾಲ್ಕು ಜನರಿಗಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸಿಕೊಳ್ಳಬಾರದು ಎನ್ನುವ ನಿಯಮ ಜಾರಿ ಮಾಡಿ, ನಗರ ಪ್ರದೇಶದ ಹೊರಗೆ ಗ್ರಾಮೀಣ ಪ್ರದೇಶದ ಕಡೆಗೆ ಹೋಗುವ `ಅಪೆ~ ಆಟೋಗಳು ಸ್ಥಳಾವಕಾಶಕ್ಕೆ ತಕ್ಕಂತೆ ಪ್ರಯಾಣಿಕರನ್ನು ಕರೆದೊಯ್ಯಬಹುದು ಎನ್ನುವ ನಿಯಮ ಜಾರಿಗೆ ತಂದರೆ ಒಳಿತು ಎಂದು ಸಲಹೆ ನೀಡಿದರು.ಸಭೆಯಲ್ಲಿ ಜೈ ಭುವನೇಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ವೆಂಕಟಾಚಲಪತಿ, ಪ್ರಧಾನ ಕಾರ್ಯದರ್ಶಿ ಆರ್.ಷರೀಫ್, ಆಟೋರೀಕ್ಷಾ ಡ್ರೈವರ್ಸ್‌ ಯೂನಿಯನ್ ಉಪಾಧ್ಯಕ್ಷ ಮಂಜು, ಪ್ರಧಾನ ಕಾರ್ಯದರ್ಶಿ ಶೇಖ್‌ಮುಸ್ತಾಪ, ಜೆಡಿಎಸ್ ಯುವ ಮುಖಂಡ ನಾಗರಾಜ್ ಮುಂತಾದವರು ಹಾಜರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.