ಶುಕ್ರವಾರ, ಮಾರ್ಚ್ 5, 2021
17 °C

3 ಲಕ್ಷ ಸುಳ್ಳ ಜಾತಿ ಪ್ರಮಾಣ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

3 ಲಕ್ಷ ಸುಳ್ಳ ಜಾತಿ ಪ್ರಮಾಣ ಪತ್ರ

ಬೆಂಗಳೂರು: `ಇದುವರೆಗೂ ದೇಶದಲ್ಲಿ ಮೂರು ಲಕ್ಷ ಸುಳ್ಳು ಜಾತಿ ಪ್ರಮಾಣ ಪತ್ರಗಳು ವಿತರಣೆಯಾಗಿವೆ~ ಎಂದು ಸಮಾಜ ಕಲ್ಯಾಣ ಮತ್ತು ಬಂದಿಖಾನೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮವು ಕೇಂದ್ರ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಎಲ್ಲ ಮುಂದುವರಿದ ಜನಾಂಗದವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ, ನಿಜವಾಗಿ ಸಿಗಬೇಕಾದವರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಅಲ್ಲದೇ, ಸಮಾಜದ ಕೆಲವು ಪ್ರತಿಷ್ಠಿತ ಜಾತಿಗಳು ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸುತ್ತಿವೆ~ ಎಂದರು.`25 ಸಾವಿರ ಉದ್ಯೋಗಿಗಳು 2002 ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದಿದ್ದು ತಿಳಿದು, ಕೋರ್ಟ್ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರೂ ಇದುವರೆಗೂ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ~ ಎಂದು ವಿಷಾದಿಸಿದರು.`ಮೈಸೂರು ತಾಲ್ಲೂಕು ವ್ಯಾಪ್ತಿಯ ಪ್ರದೇಶದಲ್ಲಿರುವ ಕಾಡು ಕುರುಬ ಜನಾಂಗದವರಿಗೆ ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಯಡಿಯಲ್ಲಿ 5,000 ಎಕರೆ ಜಮೀನು ನೀಡಬೇಕು ಎಂದು ಆದೇಶ ನೀಡಿದ್ದರೂ ಸಹ, ಇದುವರೆಗೂ ಆ ಜಮೀನು ಅವರ ಕೈ ಸೇರಿಲ್ಲ. ಅವರಿನ್ನೂ ನಮಗೆ ಭೂಮಿ ಕೊಡಿ ಎಂದು ಬೇಡುತ್ತಲೇ ಇದ್ದಾರೆ~ ಎಂದರು.`ರಾಜ್ಯದಲ್ಲಿ ಶೇ 90ರಷ್ಟು ದಲಿತರಿಗೆ ಭೂಮಿಯಿಲ್ಲ, ಗ್ಯಾಸ್ ಸಬ್ಸಿಡಿ ಇಲ್ಲ, ಗೊಬ್ಬರ, ಹನಿ ನೀರಾವರಿ ಯಾವುದಕ್ಕೂ ಸಬ್ಸಿಡಿ ಇಲ್ಲ. ಇದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಅದೇ ಮೀಸಲಾತಿ ನೀಡಬೇಕು ಅಥವಾ ಮನೆ ಕಟ್ಟಲು ಹಣ ನೀಡಬೇಕು ಎಂದರೆ, ಎಲ್ಲೆಲ್ಲೂ ಚರ್ಚೆಗಳಾಗುತ್ತವೆ~ ಎಂದರು.ಮಾಜಿ ಶಾಸಕ ಡಾ.ಎಲ್.ಹನುಮಂತಯ್ಯ ಮಾತನಾಡಿ, `ಇಂದಿನ ಖಾಸಗಿ ಸಂಸ್ಥೆಗಳಲ್ಲಿ ಯಾವ ಒಬ್ಬ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿ ಯಾವುದೇ ಒಂದು ನಿರ್ಣಾಯಕವಾದ ಸ್ಥಾನದಲ್ಲಿಲ್ಲ. ಅವರಿಗೆ ಯೋಗ್ಯತೆಯಿದ್ದರೂ ಅವರು ಅವಕಾಶವಂಚಿತರಾಗಿದ್ದಾರೆ. ಆದ್ದರಿಂದ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ನೀಡಬೇಕು  ಎಂದು ಒತ್ತಾಯಿಸಲಾಗುತ್ತಿದೆ~ ಎಂದರು.`ದೇಶದಲ್ಲಿರುವ 29,406 ಹಳ್ಳಿಗಳಲ್ಲಿ ಅಸ್ಪೃಶ್ಯ ಮುಕ್ತವಾದ ಒಂದು ಹಳ್ಳಿಯೂ ಇಲ್ಲ. ಹುಟ್ಟಿನ ಕಾರಣದಿಂದ ದಲಿತರನ್ನು ಸಮಾಜದಿಂದ ಬೇರ್ಪಡಿಸಿದ್ದೇವೆ. ಸಂವಿಧಾನದ ಕಲಂ ಎ (17) ಕಾನೂನು ಜಾರಿಯಾದರೆ, ಬಹುಶಃ ದೇಶದ 50 ಕೋಟಿ ಜನರು ಜೈಲು ಪಾಲಾಗಬೇಕಾಗುತ್ತದೆ. ಅಸ್ಪೃಶ್ಯತೆಯನ್ನು ತೊಡೆದು ಹಾಕಲಾಗಿದೆ ಎಂದು ಬರೀ ಬೋರ್ಡಿನ ಮೇಲೆ ಬರೆಯಲಾಗಿರುತ್ತದೆಯೆ ಹೊರತು ಮನಸ್ಸಿನಿಂದ ಹೋಗಿಲ್ಲ~ ಎಂದರು.`ಜಗತ್ತಿನಲ್ಲಿ ಎಲ್ಲ ಕಾಯಿಲೆಗಳಿಗೆ ಔಷಧಿ ದೊರೆಯುತ್ತದೆ. ಆದರೆ, ಈ ಜಾತಿ ಎನ್ನುವ ಕಾಯಿಲೆಗೆ ಯಾವುದೇ ಔಷಧಿಯಿಲ್ಲ~ ಎಂದರು. ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ಎಂ.ಯಂಗಾರೆಡ್ಡಿ, ಮೇಲ್ಮನೆ ಸದಸ್ಯ ಡಿ.ಎಸ್.ವೀರಯ್ಯ, ಎಸ್‌ಸಿ ಮತ್ತು ಎಸ್‌ಟಿ ಪಂಗಡ ಅಧಿಕಾರಿಗಳ ಸಂಘದ ಅಧ್ಯಕ್ಷ ಎಂ.ಮುತ್ತುರಾಜು, ನಿರ್ದೇಶಕ ಟಿ.ಆರ್.ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್ ಝಾ,  ಕರ್ನಾಟಕ ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ನಿಗಮ ಮಂಡಳಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.