ಮಂಗಳವಾರ, ಅಕ್ಟೋಬರ್ 22, 2019
22 °C

3 ವರ್ಷಗಳಲ್ಲಿ ಎನ್‌ಎಸ್‌ಡಿ ಕ್ಯಾಂಪಸ್

Published:
Updated:

ಬೆಂಗಳೂರು: ರಾಷ್ಟ್ರೀಯ ನಾಟಕ ಶಾಲೆ ನಗರದಲ್ಲಿ ಆರಂಭಿಸಿರುವ ಕೇಂದ್ರಕ್ಕೆ ರಾಜ್ಯ ಸರ್ಕಾರ ಉಚಿತವಾಗಿ ಮೂರು ಎಕರೆ ಭೂಮಿ ನೀಡಿದ್ದು, ಮೂರು ವರ್ಷಗಳಲ್ಲಿ ಕೇಂದ್ರಕ್ಕೆ ಅಗತ್ಯವಿರುವ ಕ್ಯಾಂಪಸ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಕಲಾಗ್ರಾಮಕ್ಕೆ ಸೇರಿದ ಮೂರು ಎಕರೆ ಭೂಮಿಯನ್ನು ರಾಷ್ಟ್ರೀಯ ನಾಟಕ ಶಾಲೆಗೆ ಹಸ್ತಾಂತರಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಮತ್ತು ನಾಟಕ ಶಾಲೆಯ ನಿರ್ದೇಶಕಿ ಅನುರಾಧಾ ಕಪೂರ್ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿ ಕಡತವನ್ನು ಹಸ್ತಾಂತರಿಸಿಕೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಕಪೂರ್, ಕ್ಯಾಂಪಸ್‌ನ ಯೋಜನಾ ವರದಿಯನ್ನು ಆದಷ್ಟು ಬೇಗ ಸಿದ್ಧಪಡಿಸಿ ಮೂರು ವರ್ಷಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು. ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ ಹೊರಗೆ ಆರಂಭಿಸಿರುವ ಮೊದಲ ಕೇಂದ್ರ ಇದಾಗಿದ್ದು, ಕ್ಯಾಂಪಸ್ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.ಬೆಂಗಳೂರು ಕೇಂದ್ರದಲ್ಲಿ 26 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕಲಿಕೆಗೆ ಅವಕಾಶ ಇರುತ್ತದೆ. ಇದರಿಂದ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ರಾಜ್ಯದ ವಿದ್ಯಾರ್ಥಿಗಳಿಗೆ ಎಂದು ಪ್ರತ್ಯೇಕ ಕೋಟಾ ಇರುವುದಿಲ್ಲ ಎಂದರು.ನಾಟಕ ತರಬೇತಿ, ತರಬೇತಿ ಶಾಲೆ, ಗ್ರಂಥಾಲಯ ಮತ್ತು ಆಡಳಿತ ವಿಭಾಗಕ್ಕೆ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ನಶಿಸಿ ಹೋಗುತ್ತಿರುವ ಕಲೆ, ಜನಪದ ಸಂಸ್ಕೃತಿಯನ್ನು ಉಳಿಸಲು ಕ್ಯಾಂಪಸ್  ಸಹಕಾರಿಯಾಗಲಿದೆ ಎಂದು ಸಚಿವ ಕಾರಜೋಳ ಅಭಿಪ್ರಾಯಪಟ್ಟರು.ರಂಗಭೂಮಿ ಕಲಾವಿದೆಯೂ ಆದ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಮಾತನಾಡಿ, ಬಹುದಿನಗಳ ಕನಸು ನನಸಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತೋಷದ ವಿಷಯ ಎಂದರು.ಆಯುಕ್ತರಿಗೆ ಹೆಚ್ಚಿನ ಅಧಿಕಾರ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಿಗೆ ಇದ್ದ ಅನುದಾನ ಬಿಡುಗಡೆಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಇದುವರೆಗೆ 20 ಸಾವಿರ ರೂಪಾಯಿವರೆಗೆ ಹಣ ಮಂಜೂರು ಮಾಡುವ ಅಧಿಕಾರ ಮಾತ್ರ ಇತ್ತು. ಇನ್ನು ಮುಂದೆ ನೋಂದಾಯಿತ ಸಂಸ್ಥೆಗಳು ಏರ್ಪಡಿಸುವ ಕಾರ್ಯಕ್ರಮಗಳಿಗೆ ಒಂದು ಲಕ್ಷ ರೂಪಾಯಿಯಂತೆ ತಿಂಗಳಿಗೆ ಒಟ್ಟು 50 ಲಕ್ಷ ರೂಪಾಯಿ ವೆಚ್ಚ ಮಾಡಬಹುದಾಗಿದೆ.ಜಿಲ್ಲಾ ಮಟ್ಟದ ಸಹಾಯಕ ನಿರ್ದೇಶಕರು ಪ್ರತಿ ಸಂಸ್ಥೆಗೆ ತಲಾ ಹತ್ತು ಸಾವಿರ ರೂಪಾಯಿ ಪ್ರಕಾರ ತಿಂಗಳಿಗೆ 50 ಸಾವಿರ ರೂಪಾಯಿ ವೆಚ್ಚ ಮಾಡಬಹುದಾಗಿದೆ. ಅದೇ ರೀತಿ ನೋಂದಾಯಿತ ಟ್ರಸ್ಟ್‌ಗಳಿಗೆ ಪ್ರತಿವರ್ಷ 12 ಲಕ್ಷ ರೂಪಾಯಿ ಅನುದಾನ ನೀಡುವ ಅಧಿಕಾರ ಆಯುಕ್ತರಿಗೆ ಇರುತ್ತದೆ ಎಂದು ಕಾರಜೋಳ ತಿಳಿಸಿದರು.ರಾಜ್ಯಮಟ್ಟದಲ್ಲಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಹತ್ತು ಲಕ್ಷ ರೂಪಾಯಿ, ಜಿಲ್ಲಾ ಮಟ್ಟದಲ್ಲಿ 50 ಸಾವಿರ ರೂಪಾಯಿ ನೀಡಲಾಗುತ್ತದೆ. ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಇತ್ಯಾದಿಗಳ ಸಣ್ಣಪುಟ್ಟ ದುರಸ್ತಿಗೆ 20 ಲಕ್ಷ ರೂಪಾಯಿವರೆಗೂ ವೆಚ್ಚ ಮಾಡುವ ಅಧಿಕಾರವನ್ನು ಆಯುಕ್ತರಿಗೆ ನೀಡಲಾಗಿದೆ. ಇಲಾಖೆಯ ಆಯುಕ್ತ ಮನು ಬಳಿಗಾರ್, ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)