ಶುಕ್ರವಾರ, ಮೇ 7, 2021
26 °C
32ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾರಾಯಣಮೂರ್ತಿ ವಿಶ್ವಾಸ

`3 ವರ್ಷದಲ್ಲಿ ಇನ್ಫೊಸಿಸ್ ಅಗ್ರಸ್ಥಾನಕ್ಕೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮುಂದಿನ ಮೂರು ವರ್ಷಗಳಲ್ಲಿ ಇನ್ಫೊಸಿಸ್ ಮತ್ತೆ ಹಿಂದಿನ ಗರಿಷ್ಠ ಪ್ರಗತಿ ಪಥಕ್ಕೆ ಮರಳಲಿದೆ' ಎಂದು ಕಾರ್ಯನಿರ್ವಾಹಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ಇಲ್ಲಿ ನಡೆದ ಸಂಸ್ಥೆಯ 32ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.`ನಮ್ಮ ನಿರೀಕ್ಷೆಗೆ ತಕ್ಕಂತೆ ಇನ್ಫೊಸಿಸ್ ಪುನರ್ ನಿರ್ಮಾಣ ಮಾಡಲು  ಕನಿಷ್ಠ 36 ತಿಂಗಳು ಬೇಕು. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು  ಕೆಲವರ ಮನಸ್ಸಿಗೆ ನೋವುಂಟು ಮಾಡಬಹುದು' ಎಂದು ಅವರು ಹೇಳಿದರು.`ಸಂಸ್ಥೆಯ ಪುನರ್ ನಿರ್ಮಾಣಕ್ಕೆ ಸಮರ್ಥವಾದ ತಂಡ ರಚಿಸಿದ್ದೇವೆ. ಈ ತಂಡದ ನೇತೃತ್ವದಲ್ಲಿ ಪ್ರತಿಯೊಬ್ಬ ಇನ್ಫೊಸಿಸ್ ಉದ್ಯೋಗಿಯೂ    ಸಂಪೂರ್ಣ ಸಮರ್ಪಣಾ ಮನೋಭಾವದೊಂದಿಗೆ ಮುಂದಿನ ಮೂರು ವರ್ಷಗಳು ಕೆಲಸ ಮಾಡಲಿದ್ದಾರೆ. ಹೂಡಿಕೆದಾರರು ಇದನ್ನು ಅರ್ಥಮಾಡಿಕೊಳ್ಳಬೇಕು. ಪ್ರತಿಫಲ ನೀಡುವ ಈ ಪಯಣಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಬೇಕು' ಎಂದು ಅವರು ಮನವಿ  ಮಾಡಿದರು.ವರಮಾನ ವೃದ್ಧಿ

`ಕಳೆದ ಎರಡು ವರ್ಷಗಳಲ್ಲಿ ಕಂಪೆನಿಯ ವರಮಾನ ಕುಸಿದಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಹೆಚ್ಚಿನ ವರಮಾನ ಬರುವ ಬೃಹತ್ ಹೊರಗುತ್ತಿಗೆ ಯೋಜನೆಗಳನ್ನು ಪಡೆದುಕೊಳ್ಳಲು ಹೆಚ್ಚಿನ ಗಮನ ಹರಿಸುತ್ತಿದ್ದೇವೆ.  ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಎರಡು ಹಂತಗಳಲ್ಲಿ ವರಮಾನ ವೃದ್ಧಿಗೆ  ಯೋಜನೆ ರೂಪಿಸಲಾಗಿದೆ. ಮುಂದಿನ 3ರಿಂದ 5 ವರ್ಷಗಳಲ್ಲಿ ಈ ಗುರಿ ತಲುಪಲು  ಕಂಪೆನಿ ಬದ್ಧವಾಗಿದೆ' ಎಂದು ಅವರು ಹೇಳಿದರು.  `ಸದ್ಯ ಕಂಪೆನಿಯ ಸಾಧನೆ ನಮ್ಮ ನಿರೀಕ್ಷೆಗಿಂತಲೂ ಕೆಳಮಟ್ಟದಲ್ಲಿದೆ' ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ.ಶಿಬುಲಾಲ್ ಹೇಳಿದರು. ಸದ್ಯದ ಸವಾಲಿನ ಸಂದರ್ಭದಲ್ಲಿ ಮೂರ್ತಿ ಕಂಪೆನಿಯನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ನಿರ್ಗಮಿತ ಅಧ್ಯಕ್ಷ ಎಂ.ವಿ. ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು. ಮರು ನೇಮಕ

7 ವರ್ಷಗಳ ಕಾಲ ಇನ್ಫೊಸಿಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಮೂರ್ತಿ 2011ರ ಆಗಸ್ಟ್‌ನಲ್ಲಿ ನಿವೃತ್ತರಾಗಿದ್ದರು. ನಂತರ ಅವರ ಹುದ್ದೆಗೆ ಬ್ಯಾಂಕಿಂಗ್ ತಜ್ಞ ಕೆ.ವಿ ಕಾಮತ್ ನೇಮಕಗೊಂಡಿದ್ದರು. ಆದರೆ, ಕಾಮತ್ ಅಧಿಕಾರ ಅವಧಿಯಲ್ಲಿ ಕಂಪೆನಿಯ ಷೇರು ಮೌಲ್ಯ ಶೇ 15ರಷ್ಟು ಕುಸಿತ ಕಂಡಿದ್ದು ಹೂಡಿಕೆದಾರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರ್ತಿ ಮರು ನೇಮಕಕ್ಕೆ ಒತ್ತಡ ಹೆಚ್ಚಿತ್ತು.ಆಡಳಿತ ಮಂಡಳಿ ಜೂನ್ 1ರಂದು ಮೂರ್ತಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರು ನೇಮಕ  ಮಾಡಿಕೊಂಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.