3 ವರ್ಷ-ಮುಗಿಯದ ಕಾಮಗಾರಿ

7

3 ವರ್ಷ-ಮುಗಿಯದ ಕಾಮಗಾರಿ

Published:
Updated:

ಯಾದಗಿರಿ: ಜಿಲ್ಲೆಯಾಗಿ ಮೂರು ವರ್ಷ ಕಳೆಯುತ್ತ ಬಂದರೂ, ಜಿಲ್ಲಾ ಕೇಂದ್ರದಲ್ಲಿ ಸೌಲಭ್ಯಗಳೂ ಈಗಲೂ ಮರಿಚಿಕೆಯಾಗಿಯೇ ಉಳಿದಿವೆ. ರಸ್ತೆಗಳು ಹದಗೆಟ್ಟು ಹೋಗಿದ್ದರೆ, ಈ ಊರಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವೂ ಇಲ್ಲದಾಗಿದೆ! ಅದರಲ್ಲೂ ಜಿಲ್ಲಾ ಕೇಂದ್ರದಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಸುಸಜ್ಜಿತ ಶೌಚಾಲಯವಿಲ್ಲ. ಜಿಲ್ಲೆಯ ಬಹುಪಾಲ ಆಡಳಿತ ಮಹಿಳೆಯರ ಪಾಲಾಗಿದ್ದರೂ, ಜಿಲ್ಲಾ ಕೇಂದ್ರದಲ್ಲಿನ ಮಹಿಳೆಯರ ಪರದಾಟ ಮಾತ್ರ ತಪ್ಪುತ್ತಿಲ್ಲ.ನಗರದ ಆಡಳಿತವನ್ನು ನೋಡಿಕೊಳ್ಳುವ ನಗರಸಭೆಯು ಹಲವಾರು ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದರೂ, ಶೌಚಾಲಯಗಳು ಪೂರ್ಣಗೊಳ್ಳುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಲವಾರು ಶೌಚಾಲಯ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ನಗರಸಭೆ ಅಧ್ಯಕ್ಷರ ಮಾತಿಗೂ ಬೆಲೆ ಇಲ್ಲದಂತಾಗಿದೆ.ನಗರದಲ್ಲಿ ಒಟ್ಟು 31 ವಾರ್ಡ್‌ಗಳಿವೆ. ವಾರ್ಡಿಗೆ ಒಂದರಂತಾದರೂ ಶೌಚಾಲಯ ಇರಬೇಕು. ಆದರೆ ಕೆಲವೇ ಕೆಲವು ವಾರ್ಡ್‌ಗಳಲ್ಲಿ ಶೌಚಾಲಯಗಳಿದ್ದು, ಅವೂ ಅಪೂರ್ಣ ಅಥವಾ ದುರಸ್ತಿಗಾಗಿ ಕಾದು ಕುಳಿತಿವೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಬಯಲು ಮಲ ವಿಸರ್ಜನೆ ಅನಿವಾರ್ಯ ಎನ್ನುವಂತಾಗಿದೆ.ಸಂಪೂರ್ಣ ಸ್ವಚ್ಛತಾ ಆಂದೋಲನ ಒಂದೆಡೆ ಕುಂಟುತ್ತಲೇ ನಡೆಯುತ್ತಿದ್ದರೆ, ನಗರದಲ್ಲಿನ ಸಾರ್ವಜನಿಕ ಶೌಚಾಲಯಗಳು ಅಧೋಗತಿಯಲ್ಲಿವೆ. ನಗರದ 2, 4, 9, 15, 19, 25, 29 ಹಾಗೂ 30 ನೇ ವಾರ್ಡುಗಳಲ್ಲಿ ಶೌಚಾಲಯ ನಿರ್ಮಾಣ ಪ್ರಾರಂಭಿಸಲಾಗಿದೆ. ಆದರೆ ಇನ್ನೂ ಪೂರ್ಣವಾಗುತ್ತಿಲ್ಲ. 6, 21 ಹಾಗೂ 28 ನೇ ವಾರ್ಡುಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ ದುರಸ್ತಿಗೆ ಕಾದು ಕುಳಿತಿರುವ ಈ ಶೌಚಾಲಯಗಳು ಉಪಯೋಗಕ್ಕೆ ಬಾರದಂತಾಗಿವೆ.

 

ಏಳನೇ ವಾರ್ಡಿನಲ್ಲಿ ರೂ. 9 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಇದೂ ಪೂರ್ಣವಾಗಿಲ್ಲ. ಎರಡನೇ ವಾರ್ಡಿನಲ್ಲಿ ಶೌಚಾಲಯ ಪೂರ್ಣವಾಗಿದ್ದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯಿಂದಾಗಿ ಉದ್ಘಾಟನೆಯ ಭಾಗ್ಯ ಕಂಡಿಲ್ಲ ಎಂಬ ಮಾಹಿತಿಯನ್ನು ನಗರಸಭೆಯ ಅಧಿಕಾರಿಗಳು ನೀಡುತ್ತಾರೆ.ಶಿವನಗರದಲ್ಲಿ ಶೌಚಾಲಯ ಕಟ್ಟಡ ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ನಗರಸಭೆ ಮತ್ತು ಗುತ್ತಿಗೆದಾರರ ನಡುವಿನ ಹಗ್ಗ ಜಗ್ಗಾಟದಿಂದಾಗಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ. ನಗರಸಭೆಯ ಅಧಿಕಾರಿಗಳನ್ನು ಕೇಳಿದರೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಇದಾದ ನಂತರ ಶೌಚಾಲಯವನ್ನು ಸಾರ್ವಜನಿಕ ಸೇವೆಗೆ ನೀಡಲಾಗುವುದು ಎಂದು ಹೇಳುತ್ತಾರೆ. ಕಟ್ಟಡ ಪೂರ್ಣಗೊಂಡಿದ್ದರೂ, ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕಾಗಿ ವರ್ಷಗಟ್ಟಲೇ ಕಾಯುವಂತಾಗಿದೆ ಎಂದು ಇಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಸದಸ್ಯರ ಆಕ್ರೋಶ:

ನಗರದಲ್ಲಿ ಮೂಲ ಸೌಕರ್ಯಗಳಿಗಾಗಿ ಗಮನ ನೀಡಬೇಕಾದ ನಗರಸಭೆ ಸದಸ್ಯರೇ ಈಗ ಆಡಳಿತ ವ್ಯವಸ್ಥೆಯನ್ನು ದೂರುವಂತಹ ಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯಗಳ ಬಗ್ಗೆ ಹಲವಾರು ಬಾರಿ ಹೇಳಿದರೂ, ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ನಗರಸಭೆಯ ಸದಸ್ಯರೇ ಅಲವತ್ತಿಕೊಳ್ಳುತ್ತಿದ್ದಾರೆ.

ಶೌಚಾಲಯ ನಿರ್ಮಾಣವಿರಲಿ, ಕಲ್ವರ್ಟ್‌ಗಳ ನಿರ್ಮಾಣವಾಗಲಿ.ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾದ ಕಾಮಗಾರಿಗಳಿಗೂ ಹಣ ಇಲ್ಲ ಎಂಬ ಉತ್ತರವನ್ನು ಅಧಿಕಾರಿಗಳು ಹೇಳುತ್ತಿದ್ದು, ಜನರು ನಮ್ಮನ್ನು ಕೇಳುತ್ತಾರೆ. ಅವರಿಗೆ ಏನು ಉತ್ತರ ಹೇಳಬೇಕು ಎಂಬುದೇ ತಿಳಿಯದಂತಾಗಿದೆ ಎಂದು ನಗರಸಭೆ ಸದಸ್ಯರು ಹೇಳುತ್ತಿದ್ದಾರೆ. ಇದೆಲ್ಲದರ ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ನಗರಸಭೆ ಅಧ್ಯಕ್ಷರೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.2008-09 ರಲ್ಲಿ ಎಸ್‌ಎಫ್‌ಸಿ ಅನುದಾನದಡಿ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದ್ದು, ಹಿಂದಿನ ಪೌರಾಯುಕ್ತರು, ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ತಿಳಿಸಿದ್ದರೂ, ಇದುವರೆಗೆ ಯಾವುದೇ ಪ್ರಯೋಜನ ಆಗಿಲ್ಲ. ಕಾಮಗಾರಿ ಹಿಡಿದಿರುವ ಗುತ್ತಿಗೆದಾರರಿಗೆ ಸೂಚನೆ ನೀಡಿದರೂ, ಶೌಚಾಲಯಗಳು ಪೂರ್ಣವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.ಕಳೆದ ಮೂರು ವರ್ಷಗಳಿಂದ ಈ ಶೌಚಾಲಯಗಳು ಅರ್ಧಕ್ಕೆ ನಿಂತಿದ್ದು, ಮಹಿಳೆಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇಷ್ಟೆಲ್ಲ ಆದರೂ ಅಧಿಕಾರಿಗಳು, ಗುತ್ತಿಗೆದಾರರು ಶೌಚಾಲಯಗಳ ನಿರ್ಮಾಣದ ಬಗ್ಗೆ ಗಮನ ನೀಡುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದಷ್ಟು ಶೀಘ್ರ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಶೌಚಾಲಯಗಳ ಸಮಸ್ಯೆ ಉಲ್ಬಣಿಸಲು ನಗರಸಭೆಯ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಪ್ರಮುಖ ಕಾರಣ. ಜಿಲ್ಲೆಯಾಗಿ ಮೂರು ವರ್ಷ ಕಳೆಯುತ್ತ ಬಂದಿದೆ. ಮೂರು ವರ್ಷದಲ್ಲಿ ಜಿಲ್ಲಾ ಕೇಂದ್ರದ ಸ್ಥಿತಿ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಕನಿಷ್ಠ ಸೌಲಭ್ಯವಾದ ಶೌಚಾಲಯಗಳೂ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಟ್ಟಡ ಕಟ್ಟುವ ಹಾಗೂ ಕ್ವಾರಿ ಕಾರ್ಮಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry