ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3-4 ವರ್ಷ ಆಡುವ ಸಾಮರ್ಥ್ಯವಿದೆ'

ನನ್ನ ಕ್ರಿಕೆಟ್ ಜೀವನ ಇನ್ನೂ ಮುಗಿದಿಲ್ಲ: ಜಹೀರ್ ಖಾನ್
Last Updated 30 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ನನ್ನ ಕ್ರಿಕೆಟ್ ಜೀವನ ಮುಗಿಯಿತು ಎಂದುಖಂಡಿತ ಭಾವಿಸಬೇಡಿ. ನನ್ನಲ್ಲಿ ಇನ್ನೂ 3-* ವರ್ಷ ಆಡುವ ಸಾಮರ್ಥ್ಯವಿದೆ. ಕಪಿಲ್ ದೇವ್, ವಾಸೀಮ್ ಅಕ್ರಮ್, ಗ್ಲೆನ್ ಮೆಕ್‌ಗ್ರಾ ಅವರೆಲ್ಲಾ 35 ವರ್ಷದ ಬಳಿಕವೂ ಆಡಲಿಲ್ಲವೇ? ಫಿಟ್‌ನೆಸ್ ಕಂಡುಕೊಂಡು ಮತ್ತೆ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ'

-ಕಪಿಲ್ ಬಳಿಕ ಭಾರತ ಕಂಡ ಯಶಸ್ವಿ ವೇಗದ ಬೌಲರ್ ಎನಿಸಿಕೊಂಡಿರುವ ಜಹೀರ್ ಖಾನ್ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡು ಸೋಲಿನ ಬಳಿಕ ಜಹೀರ್ ಅವರನ್ನು ಕೈಬಿಡಲಾಗಿತ್ತು. ತಂಡದ ಕಳಪೆ ಪ್ರದರ್ಶನದ ಬಗ್ಗೆ ಟೀಕಾ ಪ್ರಹಾರ ಎದುರಾದ ಕಾರಣ ಆಯ್ಕೆ ಸಮಿತಿ ಈ ತೀರ್ಮಾನ ಕೈಗೊಂಡಿತ್ತು.

ಜಹೀರ್ 88 ಟೆಸ್ಟ್ ಪಂದ್ಯಗಳಿಂದ 295 ವಿಕೆಟ್ ಹಾಗೂ 200 ಏಕದಿನ ಪಂದ್ಯಗಳಿಂದ 282 ವಿಕೆಟ್ ಪಡೆದಿದ್ದಾರೆ. 13 ವರ್ಷಗಳಿಂದ ಭಾರತದ ಹಲವು ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. 

ರಣಜಿ ಪಂದ್ಯದ ವೇಳೆ ಗಾಯಗೊಂಡಿರುವ ಎಡಗೈ ವೇಗಿ ಜಹೀರ್ ಉದ್ಯಾನ ನಗರಿಯಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್ ತರಬೇತಿಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ರಿಕೆ ಜೊತೆ ಮಾತಿಗಿಳಿದರು.

*ಜಹೀರ್ ಖಾನ್ ಕ್ರಿಕೆಟ್ ಜೀವನ ಮುಗಿಯಿತು ಎಂದು ಹೇಳಲಾಗುತ್ತಿದೆ. ಹೌದೇ?
ಖಂಡಿತ ಇಲ್ಲ. ನನಗಿನ್ನೂ 3* ವರ್ಷ. ಹಲವು ಆಟಗಾರರು ಈ ವಯಸ್ಸಿನಲ್ಲಿ ಯಶಸ್ವಿಯಾಗಿದ್ದಾರೆ. ಫಿಟ್‌ನೆಸ್ ಕಂಡುಕೊಂಡು ಮತ್ತೆ ಸ್ಥಾನ ಪಡೆಯುತ್ತೇನೆ. ಮತ್ತೆ ಕಣಕ್ಕಿಳಿಯಲು ನನ್ನ ಮನಸ್ಸು ತುಡಿಯುತ್ತಿದೆ. ಟೆಸ್ಟ್‌ಗೆ ನಾನು ಹೆಚ್ಚಿನ ಆದ್ಯತೆ ನೀಡುತ್ತೇನೆ.

*ತಂಡದಿಂದ ಏಕಾಏಕಿ ಕೈಬಿಟ್ಟದ್ದು ಬೇಸರ ಮೂಡಿಸಿದೆಯೇ?
ತಂಡದಿಂದ ಕೈಬಿಡುತ್ತಾರೆ ಎಂಬ ಭಾವನೆ ನನಗಿರಲಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಾನೊಬ್ಬನೇ ಕೆಟ್ಟ ಪ್ರದರ್ಶನ ತೋರಿಲ್ಲ. ಹೆಚ್ಚಿನ ಆಟಗಾರರು ಫಾರ್ಮ್‌ನಲ್ಲಿರಲಿಲ್ಲ. ಈ ಕಾರಣ 2012ರಲ್ಲಿ ತಂಡ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ನನ್ನ ಜೀವನದಲ್ಲಿ ಹಲವು ಬಾರಿ ಕಷ್ಟದ ಪರಿಸ್ಥಿತಿಗೆ ಸಿಲುಕಿದ್ದೇನೆ. ಅದರಲ್ಲಿ ಇದು ಕೂಡ ಒಂದು. 2007ರಲ್ಲಿ ಒಮ್ಮೆ ಸ್ಥಾನ ಕಳೆದುಕೊಂಡಿದ್ದೆ. ಮತ್ತೆ ಸ್ಥಾನ ಪಡೆದಿದ್ದೆ. 

* ಈಗ ತಂಡದಲ್ಲಿ ಯುವ ಬೌಲರ್‌ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಮತ್ತೆ ಸ್ಥಾನ ಪಡೆಯಲು ಸಾಧ್ಯವೇ?
ನಾನು ಆಡಲು ಶುರು ಮಾಡಿದಾಗಿನಿಂದ ತಂಡದಲ್ಲಿ ಸ್ಪರ್ಧೆ ಇದೆ. ಇದು ಒಳ್ಳೆಯದು. ಏಕೆಂದರೆ ಮತ್ತಷ್ಟು ಕಠಿಣ ಪ್ರಯತ್ನ ಹಾಕಿ ಅಭ್ಯಾಸ ಮಾಡಲು ಇದು ಹುರಿದುಂಬಿಸುತ್ತದೆ. ಈಗ ತಂಡದಲ್ಲಿರುವ ಬೌಲರ್‌ಗಳು ಏಕದಿನ ಸರಣಿ ಗೆಲ್ಲಲು ಕಾರಣರಾಗಿದ್ದಾರೆ.

*ಈಗ ನಿಮ್ಮ ಫಿಟ್‌ನೆಸ್ ಮಟ್ಟ ಹೇಗಿದೆ?
ಗಾಯದಿಂದ ಚೇತರಿಸಿಕೊಳುತ್ತಿದ್ದೇನೆ. ಹಾಗಾಗಿ ನಾನು ಇರಾನಿ ಕಪ್‌ಗೆ ಲಭ್ಯವಾಗುತ್ತಿಲ್ಲ. ಶೇಕಡಾ 100ರಷ್ಟು ಫಿಟ್‌ನೆಸ್ ಹೊಂದಿದ ಮೇಲೆ ಕಣಕ್ಕಿಳಿಯುತ್ತೇನೆ.

*ಮುಂಬೈ 40ನೇ ಬಾರಿ ರಣಜಿ ಗೆದ್ದ ಬಗ್ಗೆ ಹೇಳಿ?
ಅಂಕಿ ಅಂಶವೇ ಮುಂಬೈ ತಂಡದ ಸಾಮರ್ಥ್ಯದ ಬಗ್ಗೆ ಪೂರ್ಣ ವಿವರಣೆ ನೀಡುತ್ತದೆ. ತಂಡವನ್ನು ಮತ್ತೆ ಯಶಸ್ವಿಯಾಗಿ ಮುನ್ನಡೆಸಿದ ಅಜಿತ್ ಅಗರ್ಕರ್ ಅವರನ್ನು ಮೊದಲು ನಾನು ಅಭಿನಂದಿಸುತ್ತೇನೆ. ಯುವ ಹಾಗೂ ಹಿರಿಯ ಆಟಗಾರರ ಪ್ರದರ್ಶನ ಅಮೋಘ. ಗಾಯಗೊಂಡಿದ್ದ ಕಾರಣ ಫೈನಲ್‌ನಲ್ಲಿ ಆಡಲು ನನಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT