ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ತಾಲ್ಲೂಕುಗಳಲ್ಲಿ ನಡೆಯದ ಶಿಕ್ಷಕರ ದಿನಾಚರಣೆ!

ಶಾಸಕರು ಸೂಚಿಸಿದ ದಿನವೇ ಕಾರ್ಯಕ್ರಮ; ಶಿಕ್ಷಕರ ಬೇಸರ
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಲ್ಲೆಡೆ ಗುರುವಾರ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆದರೆ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚಿಂತಾಮಣಿ ತಾಲ್ಲೂಕುಗಳಲ್ಲಿ ಮಾತ್ರ ಯಾವುದೇ ರೀತಿಯ ಕಾರ್ಯಕ್ರಮ ನಡೆಯಲಿಲ್ಲ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರು ಸೂಚಿಸಿದ ದಿನದಂದೇ ಶಿಕ್ಷಕರ ದಿನವನ್ನು ಆಚರಿಸಬೇಕು!

`ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಾಗೇಪಲ್ಲಿ ಮತ್ತು ಗುಡಿಬಂಡೆ ಎರಡೂ ತಾಲ್ಲೂಕುಗಳು ಬರುವುದರಿಂದ ಕ್ಷೇತ್ರದ ಶಾಸಕರು ಏಕಕಾಲಕ್ಕೆ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಇದೇ ಕಾರಣದಿಂದಲೇ ಶಾಸಕರು ಯಾವಾಗ ಬಿಡುವು ಮಾಡಿಕೊಂಡು ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸುತ್ತಾರೋ, ಆ ದಿನವೇ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಎರಡೂ ತಾಲ್ಲೂಕುಗಳಲ್ಲೂ ಪ್ರತ್ಯೇಕ ದಿನದಂದು ಪ್ರತ್ಯೇಕ ಕಾರ್ಯಕ್ರಮ ಜರುಗುತ್ತದೆ. ಇಡೀ ದೇಶ ಶಿಕ್ಷಕರ ದಿನವನ್ನು ಆಚರಿಸಿದರೂ ನಾವು ಮಾತ್ರ ಶಾಸಕರು ಹೇಳಿದಾಗ ಶಿಕ್ಷಕರ ದಿನ ಆಚರಿಸಿಕೊಳ್ಳಬೇಕಾಗಿದೆ' ಎಂಬ ಬೇಸರವನ್ನು ಶಿಕ್ಷಕರೊಬ್ಬರು `ಪ್ರಜಾವಾಣಿ' ಜತೆ ಹಂಚಿಕೊಂಡರು.

`ಶಾಸಕ ಸುಬ್ಬಾರೆಡ್ಡಿ ಅವರು ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇನ್ನೊಂದರಲ್ಲಿ ಪಾಲ್ಗೊಳ್ಳದಿದ್ದರೆ, ಒಂದಿಲ್ಲೊಂದು ತಾಲ್ಲೂಕಿನವರಿಗೆ ಬೇಸರವಾಗುತ್ತದೆ. ಹೀಗಾಗಿ ಶಿಕ್ಷಕರ ಸಂಘದ ಸದಸ್ಯರು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಮತ್ತು ಶಿಕ್ಷಕರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಶಾಸಕರು ಹೇಳಿದ ದಿನವೇ ಕಾರ್ಯಕ್ರಮ ಆಯೋಜಿಸಲಾಗುವುದು' ಎಂದು ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದರು.

`ಸೆ. 13ರಂದು ಗುಡಿಬಂಡೆ ಮತ್ತುಸೆ. 17ರಂದು ಬಾಗೇಪಲ್ಲಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಶಾಸಕರು ಸೂಚಿಸಿದ್ದಾರೆ ಎಂದರು.
`ಕಳೆದ ಬಾರಿ ಸೆ. 5ರಂದೇ ಚಿಂತಾಮಣಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಆದರೆ ಈ ಬಾರಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸೆ. 21ಕ್ಕೆ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ್ದಾರೆ. ಅಂದು ಕೇಂದ್ರ ಸಚಿವರು ಮತ್ತು ಇತರ ಗಣ್ಯರನ್ನು ಆಹ್ವಾನಿಸಿ, ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ' ಎಂದು ಶಿಕ್ಷಕರೊಬ್ಬರು ತಿಳಿಸಿದರು.

`ಎಲ್ಲೆಡೆ ಕಾರ್ಯಕ್ರಮ ನಡೆದರೂ ನಮ್ಮ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕಾರ್ಯಕ್ರಮ ನಡೆಯದಿರುವುದು ಅಚ್ಚರಿ ಮೂಡಿಸಿದೆ. ಇಡೀ ದೇಶವು ಒಂದು ದಿಕ್ಕಿನಲ್ಲಿ ಚಿಂತನೆ ಮಾಡಿದರೆ, ಈ ತಾಲ್ಲೂಕುಗಳ ಶಾಸಕರು ತಮ್ಮದೇ ಆದ ದಿಕ್ಕಿನಲ್ಲಿ ಯೋಚಿಸುತ್ತಾರೆ. ಶಿಕ್ಷಕರ ದಿನಾಚರಣೆ ವೇಳೆ ಇಂತಹ ಬೆಳವಣಿಗೆ ಬೇಸರ ಮೂಡಿಸಿದೆ' ಎಂದು ಶಿಕ್ಷಕರ ಸಂಘದ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT