ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷದಲ್ಲಿ 7,200 ಕೋಟಿ!

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಕೊರತೆಯನ್ನು ನೀಗಿಸಲು ಸರ್ಕಾರ ಖರೀದಿಯ ಮೊರೆ ಹೋಗಿದೆ. ಇದಕ್ಕಾಗಿ ಒಟ್ಟು 7,209 ಕೋಟಿ ರೂಪಾಯಿ ವೆಚ್ಚ ಮಾಡಿದೆ.

2008-09ರಿಂದ ಈಚೆಗೆ ವಿದ್ಯುತ್ ಖರೀದಿಗಾಗಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವುದರಿಂದ ವಿದ್ಯುತ್ ಸರಬರಾಜು ಕಂಪೆನಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ. ಪವರ್ ಕಂಪೆನಿ ಆಫ್ ಕರ್ನಾಟಕ (ಪಿಸಿಕೆಎಲ್) ವಿದ್ಯುತ್ ಸಮಸ್ಯೆ ಉಂಟಾದಾಗ ಹೊರ ರಾಜ್ಯಗಳಿಂದ ಖರೀದಿ ಮಾಡುತ್ತಿದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಆಯಾ ಕಂಪೆನಿಗಳೇ ಭರಿಸಬೇಕು.

ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆಯ ಪ್ರಮಾಣ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಉತ್ಪಾದನೆ ಆಗುತ್ತಿಲ್ಲ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ವಿದ್ಯುತ್ ಖರೀದಿ ಮಾಡಬೇಕಾದಂತಹ ಸ್ಥಿತಿ ಉಂಟಾಗಿದೆ. ಇದರಿಂದ ಒಂದೆಡೆ ಗ್ರಾಹಕರಿಗೆ ಹೊರೆ, ಮತ್ತೊಂದೆಡೆ ಕಂಪೆನಿಗಳು ಸಾಲದ ಸುಳಿಗೆ ಸಿಲುಕುತ್ತಿವೆ.

ರಾಜ್ಯದಲ್ಲಿನ ಐದು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಸರ್ಕಾರ ಪ್ರತಿ ವರ್ಷ ವಾರ್ಷಿಕ ಸಬ್ಸಿಡಿ ಮೊತ್ತವನ್ನು ಮಾತ್ರ ನೀಡುತ್ತಿದೆ. ವಿದ್ಯುತ್ ಖರೀದಿಗಾಗಿ ಪ್ರತ್ಯೇಕ ಅನುದಾನ ನೀಡುತ್ತಿಲ್ಲ. ರೈತರ ನೀರಾವರಿ ಪಂಪ್‌ಸೆಟ್‌ಗಳು, ಭಾಗ್ಯಜ್ಯೋತಿ, ಕುಟೀರಜ್ಯೋತಿ ಸಂಪರ್ಕಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದು, ಆ ಮೊತ್ತವನ್ನು ಸರ್ಕಾರ ಭರಿಸುತ್ತಿದೆ, ಅಷ್ಟೇ. ಇದನ್ನು ಹೊರತುಪಡಿಸಿದರೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ 5,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವುದಾಗಿ ಹೇಳಿತ್ತು. ಆ ನಿಟ್ಟಿನಲ್ಲಿ ಕೆಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಆದರೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಕರ್ನಾಟಕ ವಿದ್ಯುತ್ ನಿಗಮ, ಪವರ್ ಕಂಪೆನಿ ಆಫ್ ಕರ್ನಾಟಕ ನೂತನ  ಯೋಜನೆಗಳ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿವೆ. ಆದರೆ ಅವುಗಳಿಗೆ ಇನ್ನೂ ಚಾಲನೆ ನೀಡಿಲ್ಲ.

ಮುಂದುವರಿದ ಖರೀದಿ: ಸೆಪ್ಟೆಂಬರ್‌ನಿಂದ ವಿದ್ಯುತ್ ಖರೀದಿ ಪ್ರಮಾಣ ಹೆಚ್ಚಾಗಿದ್ದು, ಸುಮಾರು 1,500 ಮೆಗಾವಾಟ್ ವಿದ್ಯುತ್ ಖರೀದಿಸಲಾಗುತ್ತಿದೆ. ಇದರ ವೆಚ್ಚವನ್ನು ಇನ್ನೂ ಲೆಕ್ಕಾಚಾರ ಮಾಡಿಲ್ಲ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ. ವಿದ್ಯುತ್ ವಿನಿಮಯ ಕೇಂದ್ರದಿಂದ ಬೇಡಿಕೆ ಹೆಚ್ಚಿರುವ ಅವಧಿಯಲ್ಲಿ ಯೂನಿಟ್‌ಗೆ 12 ರೂಪಾಯಿ ನೀಡಿ ಖರೀದಿ ಮಾಡಲಾಗುತ್ತಿದ್ದು, ಕೆಲವೊಮ್ಮೆ ದಿನಕ್ಕೆ 10 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.

ಸದ್ಯ ದಿನಪೂರ್ತಿ 990 ಮೆಗಾವಾಟ್, ಇದಲ್ಲದೆ ಬೆಳಿಗ್ಗೆ 7ರಿಂದ 10 ಮತ್ತು ಸಂಜೆ 7ರಿಂದ ರಾತ್ರಿ 10 ಗಂಟೆ ಅವಧಿಯಲ್ಲಿ 430 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಇಷ್ಟಾದರೂ ಸಾಕಾಗುತ್ತಿಲ್ಲ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ವಿನಿಮಯ ಕೇಂದ್ರದಿಂದ ಖರೀದಿ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

  ಅಕ್ಟೋಬರ್ ತಿಂಗಳಿಗಾಗಿ ಮಾತ್ರ ಯೂನಿಟ್‌ಗೆ ರೂ 4.26 ದರದಲ್ಲಿ 210 ಮೆಗಾವಾಟ್ ಖರೀದಿಸಲಾಗುತ್ತಿದೆ. ಇದೇ ಒಂದರಿಂದ 2012ರ ಮೇ 31ರವರೆಗೆ ಹೆಚ್ಚು ಬೇಡಿಕೆ ಇರುವ ಅವಧಿಯಲ್ಲಿ 430 ಮೆಗಾವಾಟ್ ವಿದ್ಯುತ್ ಅನ್ನು ಯೂನಿಟ್‌ಗೆ ರೂ 5.87ರಿಂದ 7.07 ದರದಲ್ಲಿ ಹಾಗೂ 780 ಮೆಗಾವಾಟ್ ವಿದ್ಯುತ್ ಅನ್ನು 2013ರ ಜೂನ್ 15ರವರೆಗೆ ಯೂನಿಟ್‌ಗೆ ರೂ 4.28 ದರದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಖರೀದಿಗಾಗಿ ಮೂರು ವರ್ಷಗಳಿಂದ ಮಾಡಿರುವ 7,209 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಯೋಜನೆಯೊಂದನ್ನು ಪೂರ್ಣಗೊಳಿಸಬಹುದಾಗಿತ್ತು. ಕೊರತೆ ನೀಗಿಸಲು ಖರೀದಿ ಮೊರೆ ಹೋಗುವುದು ಕ್ಷಣಿಕ ಪರಿಹಾರ ಅಷ್ಟೇ. ಅದನ್ನೇ ಶಾಶ್ವತವಾಗಿ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ. ಇದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿರಂತರವಾಗಿ ವಿದ್ಯುತ್ ಖರೀದಿ ಮಾಡುತ್ತಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ತಾಂತ್ರಿಕ ಕಾರಣಗಳನ್ನೇ ನೆಪವಾಗಿಟ್ಟುಕೊಂಡು ಕಮಿಷನ್ ಆಸೆಗಾಗಿ ವಿದ್ಯುತ್ ಖರೀದಿಯ ಮೊರೆ ಹೋಗಲಾಗುತ್ತಿದೆ ಎಂಬ ಸಂಶಯಗಳು ಕೇಳಿಬರುತ್ತಿವೆ.

ತಾಂತ್ರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದರ ಜತೆಗೆ ಹೊಸ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಖರೀದಿ ಮಾಡುವುದರಿಂದ ಬಿಕ್ಕಟ್ಟು ಬಗೆಹರಿಯುವುದಿಲ್ಲ ಎಂದರು.

ಕೇಂದ್ರದಿಂದ ವಿದ್ಯುತ್
ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾಗಿರುವ ವಿದ್ಯುತ್ ಕೋಟಾ 1,596 ಮೆಗಾವಾಟ್. ಆದರೆ ಕಳೆದ ಭಾನುವಾರ 1,790 ಮೆಗಾವಾಟ್, ಸೋಮವಾರ 1,705 ಮೆಗಾವಾಟ್, ಮಂಗಳವಾರ 1,520 ಮೆಗಾವಾಟ್ ಹಾಗೂ ಬುಧವಾರ 1,491 ಮೆಗಾವಾಟ್ ವಿದ್ಯುತ್ ಪೂರೈಕೆಯಾಗಿದೆ ಎಂದು ಲೋಡ್ ವಿತರಣಾ ಕೇಂದ್ರದ ಮಾಹಿತಿ ತಿಳಿಸಿದೆ.

`ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ ಘಟಕಗಳು ಸ್ಥಗಿತಗೊಂಡಾಗ ರಾಜ್ಯದ ಕೋಟಾದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯವಾಗಬಹುದು. ಆದರೆ ನಂತರದ ದಿನಗಳಲ್ಲಿ ಆ ಕೊರತೆಯನ್ನು ಸರಿದೂಗಿಸಲಾಗುತ್ತದೆ. ಹೀಗಾಗಿ ಕೇಂದ್ರದಿಂದ ಬರುವ ಕೋಟಾದಲ್ಲಿ ವ್ಯತ್ಯಯವಾಗುವುದಿಲ್ಲ~ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT