ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್, (ಎಎಫ್‌ಪಿ): ಮಾನವ ದೇಹದ ರೋಗನಿರೋಧಕ ಶಕ್ತಿಯ ಕುರಿತಾಗಿ ಅದ್ವಿತೀಯ ಸಂಶೋಧನೆ ನಡೆಸಿದ ಮೂವರು ವಿಜ್ಞಾನಿಗಳಿಗೆ ಈ ಬಾರಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಅಮೆರಿಕದ ಬ್ರೂಸ್ ಬೀಟ್ಲರ್, ಲಕ್ಸಂಬರ್ಗ್‌ನ ಜೂಲ್ಸ್ ಹಾಫ್‌ಮನ್ ಮತ್ತು ಕೆನಡಾದ ರಾಲ್ಫ್ ಸ್ಟೆನ್‌ಮನ್ ಅವರು, ರೋಗನಿರೋಧಕ ಅಧ್ಯಯನ ಶಾಸ್ತ್ರ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ರೋಗ ನಿರೋಧಕ ಶಕ್ತಿಯ ಬಗ್ಗೆ ಈ ವರೆಗೂ ಇದ್ದ ಜ್ಞಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಮೂವರು ವಿಜ್ಞಾನಿಗಳು ಕೆಲಸ ಮಾಡಿದ್ದಾರೆ.

ಕ್ಯಾನ್ಸರ್ ಹಾಗೂ ಇನ್ನಿತರ ರೋಗಿಗಳಲ್ಲಿ  ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಸಂಶೋಧನೆ ಕ್ರಾಂತಿಕಾರಕ ಹೆಜ್ಜೆ ಎಂದು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ  ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಹೊರಗಿನ ಹಾನಿಕಾರಕ ಜೀವಾಣುಗಳು ಮಾನವ ದೇಹವನ್ನು ಪ್ರವೇಶಿಸಿದಾಗ ಬಿಡುಗಡೆಯಾಗುವ ಪ್ರತಿರೋಧಕ ಶಕ್ತಿ ಬಗ್ಗೆ ಹೊಸ ವಿವರಗಳನ್ನು ಈ ಮೂವರು ನೀಡಿದ್ದಾರೆ.

ಆಸ್ತಮ, ಸಂಧಿ ಮತ್ತು ಕೀಲುನೋವು, ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಯಲು ಹೊಸ ಔಷಧ ಮತ್ತು ಚಿಕಿತ್ಸೆಗೆ ಈ ಸಂಶೋಧನೆ ನಿರ್ಣಾಯಕ ಪಾತ್ರ ವಹಿಸಲಿದೆ. ಡಿಸೆಂಬರ್ 10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಒಟ್ಟು ಹತ್ತು ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತದಲ್ಲಿ ಬ್ರೂಸ್ ಮತ್ತು ಹಾಫ್‌ಮನ್ ಅವರು ಅರ್ಧ ಹಾಗೂ ಉಳಿದ ಅರ್ಧ ಮೊತ್ತವನ್ನು ಸ್ಟೆನ್‌ಮನ್ ಪಡೆಯಲಿದ್ದಾರೆ.

ಸಾವಿನ ನಂತರ ಅರಸಿ ಬಂದ ಪ್ರಶಸ್ತಿ...!

 ಸ್ಟಾಕ್‌ಹೋಮ್ (ಎಎಫ್‌ಪಿ): ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜ್ಞಾನಿಗಳಿಗೆ ಸಿಗುವುದು ಅವರ ಬದುಕಿನ ಅಪೂರ್ವ ಸಾಧನೆಗೆ ಸಲ್ಲುವ ದೊಡ್ಡ ಗೌರವ. ಆದರೆ ವಿಜ್ಞಾನಿಯೊಬ್ಬರ ಸಾವಿನ ನಂತರ ಅವರಿಗೆ ಪ್ರಶಸ್ತಿ ಪ್ರಕಟವಾದ ಅಪರೂಪದ ಹಾಗೂ ವಿಷಾದನೀಯ ಘಟನೆಯಿದು.

ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವ  ಕೆನಡಾದ ರಾಲ್ಫ್ ಸ್ಟೆನ್‌ಮನ್ ಮೃತಪಟ್ಟ ವಿಷಯವು ಆಯ್ಕೆ ಸಮಿತಿಗೆ ಪ್ರಶಸ್ತಿ ಪ್ರಕಟಿಸುವ ಸಂದರ್ಭದಲ್ಲಿ ಗೊತ್ತೇ ಇರಲಿಲ್ಲ.

  ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ರಾಲ್ಫ್ ಸ್ಟೆನ್‌ಮನ್ ಸೆ 30 ರಂದು ಮೃತಪಟ್ಟಿದ್ದಾಗಿ ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯವು ತಿಳಿಸಿದೆ. `ನೊಬೆಲ್ ಪ್ರಶಸ್ತಿ ನಿಯಮದ ಪ್ರಕಾರ ಮರಣೋತ್ತರವಾಗಿ ಪ್ರಶಸ್ತಿ ಕೊಡಲು ಸಾಧ್ಯವಿಲ್ಲ.

ಆದರೆ ಆಯ್ಕೆ ಸಮಿತಿಯು ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಇದೀಗ ಮತ್ತೆ ಹೊಸಬರ ಹೆಸರನ್ನು ಸೂಚಿಸುವುದಿಲ್ಲ. ಸ್ಟೆನ್‌ಮನ್ ಮೃತಪಟ್ಟ ವಿಷಯ ನಮಗೆ ಈಗಷ್ಟೇ ಗೊತ್ತಾಗಿದೆ~ ಎಂದು ಕರೊಲಿನ್ಸ್‌ಕಾ ಸಂಸ್ಥೆಯ ನೊಬೆಲ್ ಆಯ್ಕೆ ಸಮಿತಿ ಸಭೆಯ ಮುಖ್ಯಸ್ಥ ಜೋರನ್ ಹಾನ್ಸನ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT