ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಶಿರಸ್ತೇದಾರರ ಅಮಾನತು

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆದ ಕೃಷಿ ಭೂಮಿ ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಜಿಲ್ಲೆಯ ಮೂವರು ಶಿರಸ್ತೇದಾರರನ್ನು ಕೂಡಲೇ ಅಮಾನತುಗೊಳಿಸುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಆದೇಶ ಹೊರಡಿಸಿದ್ದಾರೆ.

ವೀರಾಜಪೇಟೆಯ ಆರ್.ಆರ್. ಶಿರಸ್ತೇದಾರ ಗೋಪಾಲಕೃಷ್ಣ, ಸೋಮವಾರಪೇಟೆಯ ಆರ್.ಆರ್. ಶಿರಸ್ತೇದಾರ ಚಂದ್ರಮೌಳಿ ಹಾಗೂ ಅಂದು ಮಡಿಕೇರಿಯಲ್ಲಿ ಆರ್.ಆರ್. ಶಿರಸ್ತೇದಾರರಾಗಿದ್ದ (ಪ್ರಸ್ತುತ ನಾಪೋಕ್ಲು ಉಪ ತಹಶೀಲ್ದಾರ್) ಎಂ.ಎನ್. ಮುದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

ಹಿನ್ನೆಲೆ: ಕೃಷಿ ಭೂಮಿ ಖರೀದಿಯ ಮೇಲೆ ಕೆಲವೊಂದು ಷರತ್ತುಗಳನ್ನು ವಿಧಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ 79 (ಎ) ಹಾಗೂ 79 (ಬಿ) ನಿಯಮಾವಳಿಗಳನ್ನು ಉಲ್ಲಂಘಿಸಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ಕೃಷಿ ಭೂಮಿಯ ಖರೀದಿ-ಮಾರಾಟ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದು, ಇದರ ಬಗ್ಗೆ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದರನ್ವಯ ಸರ್ಕಾರದ ಅಧೀನ ಕಾರ್ಯದರ್ಶಿ (ವಿಶೇಷ ಕೋಶ) ಜಿ.ಎಸ್. ಗುರುಸಿದ್ದಯ್ಯ ಮತ್ತು ಮೈಸೂರು ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಮಂಜುನಾಥ ನಾಯಕ್ ಇವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ 29 ಕಡತಗಳನ್ನು ಈ ತಂಡವು ಪರಿಶೀಲಿಸಿ ತನ್ನ ವರದಿಯನ್ನು ಸಲ್ಲಿಸಿತ್ತು.

 ಪ್ರಕರಣಗಳಲ್ಲಿ ಆರ್.ಆರ್. ಶಿರಸ್ತೇದಾರರು ಷಾಮೀಲಾಗಿ, ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅವರು ಆದೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ 10 (1)(ಬಿ) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ್ ವಿರುದ್ಧ ಕ್ರಮ ಇಲ್ಲ: ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರನ್ನು ಕೂಡ ಅಮಾನತಿನಲ್ಲಿ ಇಡುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ (ವಿಶೇಷ ಕೋಶ) ಅಧೀನ ಕಾರ್ಯದರ್ಶಿ ಕೆ.ಬೋರಲಿಂಗಯ್ಯ ಅವರು ತಡೆಹಿಡಿದಿದ್ದಾರೆ. 

ಭೂ ಸುಧಾರಣಾ ಕಾಯ್ದೆ 1961ರ 79 (ಎ) ಹಾಗೂ 79 (ಬಿ) ನಿಯಮಗಳನ್ನು ಉಲ್ಲಂಘಿಸಿ ಕೃಷಿ ಜಮೀನುಗಳನ್ನು ಖರೀದಿಸಿದ ಪ್ರಕರಣಗಳಲ್ಲಿ ತಹಶೀಲ್ದಾರರು ನೇರವಾಗಿ ಭಾಗಿಯಾಗಿರುವುದು ಕಂಡು ಬಂದಿಲ್ಲವಾದ್ದರಿಂದ ಅವರ ವಿರುದ್ಧ ಕೈಗೊಳ್ಳಬಹುದಾದ ಇಲಾಖಾ ವಿಚಾರಣಾ ಕ್ರಮವನ್ನು ಕೈಬಿಡಲಾಗಿದೆ ಎಂದು ಅವರು  ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT