ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸಾವಿರ ಬಸ್ ಖರೀದಿಗೆ ನಿರ್ಧಾರ

Last Updated 10 ಜನವರಿ 2011, 6:10 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಾಲ್ಕೂ ನಿಗಮಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈ ವರ್ಷ ಸುಮಾರು ಮೂರು ಸಾವಿರ ಹೊಸ ಬಸ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿ ನಡೆದಿದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ ತಲಾ ಒಂದು ಸಾವಿರ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 600, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 500 ಬಸ್‌ಗಳನ್ನು ಖರೀದಿಸಲಾಗುತ್ತದೆ. ಬಿಎಂಟಿಸಿಗೆ ಈ ಬಾರಿ ಒಂದು ಸಾವಿರ ಸಾಮಾನ್ಯ ಬಸ್‌ಗಳನ್ನು ಖರೀದಿಸಲಾಗುತ್ತಿದ್ದು, ಹಳೆಯದಾಗಿರುವ 500 ಬಸ್‌ಗಳನ್ನು ಬದಲಾಯಿಸಲಾಗುತ್ತದೆ. ಹೀಗಾಗಿ ಹೆಚ್ಚುವರಿಯಾಗಿ 500 ಬಸ್‌ಗಳು ಸೇರ್ಪಡೆಯಾದಂತಾಗುತ್ತದೆ.

ನಗರದಲ್ಲಿ ಸದ್ಯ ಆರು ಸಾವಿರ ಬಸ್‌ಗಳು ಇದ್ದು, ಇವುಗಳಲ್ಲಿ ಐದು ಸಾವಿರ ಸಾಮಾನ್ಯ ಬಸ್‌ಗಳಾಗಿವೆ. ವೋಲ್ವೊ, ವಾಯುವಜ್ರ ಇತ್ಯಾದಿಗಳಿಗಿಂತ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಒತ್ತಡವಿದೆ. ಹೀಗಾಗಿ ಸಾಮಾನ್ಯ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ಒಲವು ತೋರಿದೆ.

ಕೆಎಸ್‌ಆರ್‌ಟಿಸಿಯಲ್ಲಿ 100 ಬಸ್‌ಗಳನ್ನು ಬಿಟ್ಟರೆ ಹೊಸದಾಗಿ ಖರೀದಿಸುವ ಎಲ್ಲವೂ ಸಾಮಾನ್ಯ ಬಸ್‌ಗಳಾಗಿರುತ್ತವೆ. ಸಾಮಾನ್ಯವಾಗಿ ಪ್ರತಿವರ್ಷ ಶೇ 10ರಷ್ಟು ಹಳೆಯ ಬಸ್‌ಗಳನ್ನು ಬದಲಾಯಿಸಲಾಗುತ್ತದೆ. ರಾಜಧಾನಿಯಲ್ಲಿ ಐದು ಲಕ್ಷ ಕಿ.ಮೀ. ಸಂಚರಿಸಿರುವ ಬಸ್‌ಗಳನ್ನು ಈ ವರ್ಷ ಬದಲಾಯಿಸಲಾಗುತ್ತಿದ್ದು, ಅವುಗಳಲ್ಲಿ ಬಹುತೇಕ ಬಸ್‌ಗಳನ್ನು ಬೇರೆ ನಿಗಮಗಳ ವ್ಯಾಪ್ತಿಯಲ್ಲಿ ಓಡಿಸಲಾಗುತ್ತದೆ. 10 ಲಕ್ಷ ಕಿ.ಮೀ.ವರೆಗೂ ಓಡಿಸಲು ಬಸ್‌ಗಳು ಯೋಗ್ಯವಾಗಿರುತ್ತವೆ. ಆದರೆ ಈಗ ಬೆಂಗಳೂರು ಹೊರತುಪಡಿಸಿ ಇತರ ಕಡೆ 7.5 ಲಕ್ಷ ಕಿ.ಮೀ. ಮಾತ್ರ ಓಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕಡಿಮೆ ದೂರವನ್ನು ಹೊಂದಿರುವ ನಗರ ಪ್ರದೇಶದ ಮಾರ್ಗಗಳಲ್ಲಿ ಮಾತ್ರ ಹಳೆಯ ಬಸ್‌ಗಳನ್ನು ಓಡಿಸಲಾಗುತ್ತದೆ. ಆದರೆ ತೀರಾ ಹಳೆಯದಾಗಿರುವ ಬಸ್‌ಗಳನ್ನು ಬೇರೆ ನಿಗಮಗಳಿಗೆ ನೀಡುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಇದಕ್ಕೆ ಸರ್ಕಾರ ಪ್ರತ್ಯೇಕವಾಗಿ ಬಜೆಟ್‌ನಲ್ಲಿ ಹಣ ನೀಡುವುದಿಲ್ಲ. ನಿಗಮಗಳ ಆದಾಯದಲ್ಲೇ ಖರೀದಿಸಲಾಗುತ್ತದೆ. ಅಗತ್ಯಬಿದ್ದರೆ ನಿಗಮಗಳು ಸಾಲ ಪಡೆಯಲಿವೆ.

ಬಿಎಂಟಿಸಿ ಈ ಬಾರಿ ಒಂದು ಸಾವಿರ ಸಾಮಾನ್ಯ ಬಸ್‌ಗಳನ್ನು ಖರೀದಿಸುತ್ತಿದ್ದು, ಒಂದು ಬಸ್‌ಗೆ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್ ನಂತರ ಖರೀದಿ ಆರಂಭವಾಗಲಿದೆ. ಅಗತ್ಯವಿರುವ ಕಡೆ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಉತ್ತಮ ರಸ್ತೆ ಇದ್ದು, ಬಸ್ ಸಂಪರ್ಕ ಇಲ್ಲದ ಕಡೆ ಹೊಸದಾಗಿ ಸಂಚಾರವನ್ನು ಆರಂಭಿಸಲಾಗುವುದು. ಮಂಡ್ಯ, ದಕ್ಷಿಣ ಕನ್ನಡ ಸೇರಿದಂತೆ ಅನೇಕ ಕಡೆ ಹೊಸ ಮಾರ್ಗಗಳನ್ನು ಆರಂಭಿಸಲಾಗಿದೆ.

ಹೆಚ್ಚಿನ ವಿಸ್ತೀರ್ಣ ಮತ್ತು ಜನಸಂಖ್ಯೆ ಇರುವ ನಗರಗಳಲ್ಲಿ ಸಿಟಿ ಸಂಚಾರ ಸೇವೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ. ತುಮಕೂರು, ಮಂಡ್ಯದಂತಹ ನಗರಗಳಲ್ಲಿ ನಗರ ಸಾರಿಗೆ ಆರಂಭವಾಗಲಿದ್ದು, ನಗರ ಸುತ್ತಮುತ್ತಲಿನ ಸುಮಾರು 10 ಕಿ.ಮೀ.ವರೆಗೂ ಈ ಬಸ್‌ಗಳು ಸಂಚರಿಸುತ್ತವೆ. ಇದರಿಂದ ನಗರಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT