ಶನಿವಾರ, ನವೆಂಬರ್ 23, 2019
18 °C

30 ಪೊಲೀಸರ ಸೆರೆಗೆ ಆದೇಶ

Published:
Updated:

ಹೈದರಾಬಾದ್ (ಪಿಟಿಐ): ಅಕ್ರಮ ಗಣಿಗಾರಿಕೆ ಚಟುವಟಿಕೆ ವರದಿ ಪ್ರಕಟಿಸಿದ ತಮಿಳು ದೈನಿಕ `ದಿನಭೂಮಿ' ಸಂಪಾದಕ ಎಸ್. ಮಣಿಮಾರನ್ ಅವರ ಮದುರೆ ನಿವಾಸದ ಮೇಲೆ 2011ರಲ್ಲಿ ದಾಳಿ ನಡೆಸಿ ಅವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು, `ಕಾನೂನು ಪಾಲಿಸಿ ಇಲ್ಲವೆ ರಾಜೀನಾಮೆ ಸಲ್ಲಿಸಿ' ಎಂದಿದ್ದಾರೆ.ಮಣಿಮಾರನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಕಟ್ಜು, ಪ್ರಕರಣಕ್ಕೆ ಕಾರಣರಾದ ಮೂವತ್ತು ಪೊಲೀಸ್ ಸಿಬ್ಬಂದಿಯನ್ನು ಈ ಕೂಡಲೇ ಬಂಧಿಸಲು  ಸರ್ಕಾರಕ್ಕೆ ಸೂಚಿಸಿದರು.ಡಿಎಂಕೆ ಅಧಿಕಾರದಲ್ಲಿ ಇರುವ ಸಮಯದಲ್ಲಿ ಈ ಘಟನೆ ನಡೆದಿರುವುದಾಗಿ ತಮಿಳುನಾಡು ಸರ್ಕಾರದ ವಕೀಲರು ಸಮಜಾಯಿಷಿ ನೀಡಿದರಾದರೂ ಇದನ್ನು ಒಪ್ಪದ ಕಟ್ಜು, `ಯಾರು ಅಧಿಕಾರದಲ್ಲಿದ್ದರು ಎನ್ನುವುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನೆಲದ ಕಾನೂನಿನಂತೆ ಅವರು (ಜಯಲಲಿತಾ) ಅಧಿಕಾರದ ಸೂತ್ರ ಹಿಡಿದಿದ್ದು ಹಾಗಾಗಿ ಅವರು ಕ್ರಮ ಕೈಗೊಳ್ಳಬೇಕು ಇಲ್ಲವೇ ರಾಜೀನಾಮೆ ನೀಡಲೇಬೇಕು ಅಷ್ಟೆ' ಎಂದು ಕಟುವಾಗಿ ಉತ್ತರಿಸಿದರು.`ಇನ್ನೂ ಬ್ರಿಟಿಷ್ ಆಡಳಿತ ಇದೆ ಎಂದು ಪೊಲೀಸರು ಭಾವಿಸಿದ್ದಾರೆಯೇ'  ಎಂದು ಪ್ರಶ್ನಿಸಿ, `ಅವರು ಪಾಠ ಕಲಿಯುವ ಸಮಯ ಇದಾಗಿದೆ' ಎಂದರು.  ಆಂಧ್ರ  ಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಸಂಬಂಧಿಸಿದಂತೆ ಮಂಡಳಿಗೆ ಸಲ್ಲಿಕೆಯಾದ ದೂರುಗಳ ವಿಚಾರಣೆಯನ್ನು ಕಟ್ಟು ಇಲ್ಲಿ ವಿಚಾರಣೆ ನಡೆಸಿದರು.

ಪ್ರತಿಕ್ರಿಯಿಸಿ (+)