ಸೋಮವಾರ, ಮೇ 17, 2021
28 °C

30 ಮಹಿಳೆಯರ ವರಿಸಿದ ಭೂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿಧವೆಯರನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ರಾಮಕೃಷ್ಣನ ವಿವಾಹಪರ್ವದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ವರೆಗೆ 30 ಮಂದಿಯನ್ನು ವಿವಾಹವಾಗಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.



ಕಳೆದ ವರ್ಷ ನಗರದಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಬಳಿ ಇದ್ದ 1.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ರಾಮಕೃಷ್ಣ ಯಾನೆ ರಮೇಶ್ ಯಾನೆ ದುಬೈ ರಾಮಕೃಷ್ಣ ಯಾನೆ ರಮೇಶ ಬಾಬು (46) ಎಂಬಾತನನ್ನು ಇದೇ 12ರಂದು ಬಂದರು ಇನ್ಸ್‌ಪೆಕ್ಟರ್ ವಿನಯ್ ಗಾಂವ್ಕರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿತ್ತು.



ಈ ಪ್ರಕರಣದ ಬೆನ್ನತ್ತಿ ತನಿಖೆ ಮುಂದುವರಿಸಿದ ಪೊಲೀಸರಿಗೆ ಈತನ ವಿವಾಹಲೀಲೆ ಕೇಳಿ ಅಚ್ಚರಿಯಾಗಿದೆ. ಈತನ ವಿರುದ್ಧ ರಾಜ್ಯಾದ್ಯಂತ ವಿವಾಹ ವಂಚನೆಯ 11 ಪ್ರಕರಣಗಳು ದಾಖಲಾಗಿವೆ. ಕೆಲವರು ದೂರು ನೀಡದೆ ಸುಮ್ಮನಾಗಿದ್ದಾರೆ. ಕಳೆದ ಆರು ವರ್ಷದಿಂದ ಈ ಕಸುಬಿನಲ್ಲಿ ತೊಡಗಿದ್ದಾನೆ. ಹಲವು ಬಾರಿ ಜೈಲು ಸೇರಿದ್ದರೂ, ಮತ್ತೆ ತನ್ನ ಚಾಳಿ ಮುಂದುವರಿಸಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. 



ಪ್ರಕರಣದ ಹಿನ್ನೆಲೆ: ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುತ್ತಿದ್ದ ಆರೋಪಿ, ತಾನು ವಿಚ್ಛೇದಿತ ಮಹಿಳೆಯರಿಗೆ, ವಿಧವೆಯರಿಗೆ ಬಾಳು ನೀಡುವುದಾಗಿ ಹೇಳುತ್ತಿದ್ದ. ಅದರಂತೆ ಇಲ್ಲಿನ ಮಹಿಳೆಯೊಬ್ಬರು ಆತನನ್ನು ಕಳೆದ ವರ್ಷ ಆಗಸ್ಟ್ 10ರಂದು ಬಲ್ಮಠದ ಹೋಟೆಲ್ ಒಂದರಲ್ಲಿ ಸಂಪರ್ಕಿಸಿದ್ದರು.

 

ಬಳಿಕ ಕೆ.ಎಸ್.ರಾವ್ ರಸ್ತೆಯ ಹೋಟೆಲ್ ಒಂದರಲ್ಲಿ ತಂಗಿದ್ದರು. ಮರುದಿನ ಆರೋಪಿ ಗುರುಪುರ ಸೇವಾ ಸಹಕಾರಿ ಬ್ಯಾಂಕಿಗೆ ಹೋಗಿ ಮಹಿಳೆ ಅಡವು ಇಟ್ಟಿದ್ದ ಚಿನ್ನಾಭರಣವನ್ನು 1.70 ಲಕ್ಷ ರೂಪಾಯಿ ನೀಡಿ ಬಿಡಿಸಿ ತಂದಿದ್ದ. ಶೇವಿಂಗ್ ಮಾಡಿ ಬರುವುದಾಗಿ ಹೇಳಿದ್ದ ಆತ ಪರಾರಿಯಾಗಿದ್ದ. ಜತೆಗೆ ಮಹಿಳೆಯ 181 ಗ್ರಾಂ ಚಿನ್ನಾಭರಣವನ್ನೂ ದೋಚಿದ್ದ.



ಪ್ರವರ: ಈತ ಟಿ.ನರಸೀಪುರ ತಾಲ್ಲೂಕಿನ ದೊಡ್ಡ ಮೂಳಗೊಡು ಗ್ರಾಮದವ. ಐದು ವರ್ಷದ ಎಲ್‌ಎಲ್‌ಬಿಯಲ್ಲಿ ಮೂರು ವರ್ಷ ಮಾತ್ರ ಕಾಲೇಜಿಗೆ ಹೋಗಿದ್ದ. ಮತ್ತೆ ಅಲ್ಲಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದ್ದಾನೆ. ಈತನಿಗೆ ಎರಡು ಮಕ್ಕಳು ಇವೆ. ಬಳಿಕ `ವಿವಾಹ~ ಸರಣಿಗೆ ಇಳಿದಿದ್ದಾನೆ.



ಆರಂಭದಲ್ಲಿ ವಿಧವೆಯರಿಗೆ, ಡೈವೋರ್ಸ್ ಆದವರಿಗೆ ಬಾಳು ನೀಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡುತ್ತಿದ್ದ. ಇದನ್ನು ನಂಬಿ ಬಂದವರ ಬಳಿ `ತನ್ನ ಪತ್ನಿ ಮೃತಪಟ್ಟಿದ್ದು, ಮಗನನ್ನು ನೋಡಿಕೊಳ್ಳಬೇಕು. ತನಗೆ ಉತ್ತಮ ಸಂಬಳ ಇದೆ~ ಎಂದು ನಂಬಿಸಿ ಮದುವೆಯಾಗುತ್ತಿದ್ದ. ಮತ್ತೆ ಸ್ವಲ್ಪ ಸಮಯ ಅವರ ಜತೆಗೆ ಇರುತ್ತಿದ್ದ. ಬಳಿಕ ಆ ಮಹಿಳೆಯರ ಹಣ ಹಾಗೂ ಚಿನ್ನಾಭರಣ ಹಿಡಿದುಕೊಂಡು ಪರಾರಿಯಾಗುತ್ತಿದ್ದ.



ಮೊಬೈಲ್ ಸಿಮ್ ಕಸದ ಬುಟ್ಟಿಗೆ ಹೋಗುತ್ತಿತ್ತು. ಹೊಸ ಸಿಮ್ ಹಿಡಿದು ಮತ್ತೆ ಬೇಟೆ ಶುರು ಹಚ್ಚುತ್ತಿದ್ದ. ಜೈಲು ಪಾಲಾದ ಬಳಿಕ ಜಾಮೀನು ಪಡೆಯುತ್ತಿರಲಿಲ್ಲ. ವಕೀಲರನ್ನೂ ನೇಮಿಸಿಕೊಳ್ಳುತ್ತಿರಲಿಲ್ಲ. ಸರ್ಕಾರಿ ವಕೀಲರೇ ವಾದಿಸಲಿ ಎಂದು ಕಾಯುತ್ತಾನೆ. ಈಗ ಮಂಗಳೂರಿನ ಜೈಲಿನಲ್ಲಿ ಇದ್ದಾನೆ. ಮಹಿಳೆಯರು ಇಂತಹ ವಂಚಕರ ಬಗ್ಗೆ ಎಚ್ಚರದಿಂದ ಇರಬೇಕು  ಎಂದು ಇನ್ಸ್‌ಪೆಕ್ಟರ್ ವಿನಯ್ ಗಾಂವ್ಕರ್ ತಿಳಿಸಿದರು.



ಈತನ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆ, ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ, ವಿಕ್ಟೋರಿಯಾ ಆಸ್ಪತ್ರೆಯ ಹೊರಠಾಣೆ, ಹನುಮಂತನಗರ ಠಾಣೆ, ಸರಸ್ವತಿಪುರಂ ಠಾಣೆ, ಹುಬ್ಬಳ್ಳಿ ವಿದ್ಯಾನಗರ ಠಾಣೆ, ಮಂಡ್ಯ ಪಶ್ಚಿಮ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಮಂಗಳೂರು ಹಾಗೂ ಬೆಳ್ತಂಗಡಿಯಲ್ಲಿ ವಿಧವೆಯರಿಗೆ ವಂಚಿಸಿದ್ದಾನೆ.



ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ- ಪಂಗಡದ ಕುಂದುಕೊರತೆ ಸಭೆಯಲ್ಲಿ ವಿನಯ್ ಗಾಂವ್ಕರ್ ಕಾರ್ಯವನ್ನು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಶ್ಲಾಘಿಸಲಾಯಿತು.



`ಪ್ರತಿ ಬಾರಿ ಪೊಲೀಸರನ್ನು ದೂರುತ್ತಲೇ ಇರಬೇಡಿ. ಪೊಲೀಸರು ಸಹ ಜನಸಾಮಾನ್ಯರು. ಅವರ ಉತ್ತಮ ಕೆಲಸಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ~ ಎಂದು ಸೀಮಾಂತ್ ಕುಮಾರ್ ಸಿಂಗ್ ವಿನಂತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.